ಸೇವಾ ಭಾರತಿ ಶಾಲೆಯ ಮಕ್ಕಳ ಸಾಹಿತ್ಯ ವೇದಿಕೆಯಿಂದ ಹೊರತಂದ ಹೊಸಚಿಗುರು ಸಂಪುಟವನ್ನು ಕವಯಿತ್ರಿ ನಾಗರತ್ನಾ ನಿಲ್ಸ್‌ಕಲ್ ಬಿಡುಗಡೆಗೊಳಿಸಿದರು. ಎಂ.ಜಿ.ವೆಂಕಟರಮಣ, ಚಂದ್ರಪ್ಪ ಇದ್ದರು.  
ನ್ಯೂಸ್

ಮಕ್ಕಳ ಭಾವನೆಗಳಿಗೆ ಬರವಣಿಗೆ ವೇದಿಕೆ

ಶಿವಕುಮಾರ ಎಸ್.ಪಿ.

ತೀರ್ಥಹಳ್ಳಿ: ಮಕ್ಕಳ ಆಂತರ್ಯದಲ್ಲಿ ಅಡಗಿರುವ ಭಾವನೆ ಮತ್ತು ಕಲ್ಪನೆಗಳಿಗೆ ರೂಪ ನೀಡಿದಾಗ ಅವರಲ್ಲಿರುವ ಪ್ರತಿಭೆ ಅರಳುವುದಕ್ಕೆ ಸಾಧ್ಯ ಎಂದು ಕವಯಿತ್ರಿ ನಾಗರತ್ನಾ ನಿಲ್ಸ್‌ಕಲ್ ಹೇಳಿದರು.ಪಟ್ಟಣದ ಸೇವಾಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಸಾಹಿತ್ಯ ವೇದಿಕೆಯಿಂದ ವಿದ್ಯಾರ್ಥಿಗಳು ಹೊರತಂದಿರುವ ಹೊಸ ಚಿಗುರು ಕೈಬರಹದ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಮಕ್ಕಳನ್ನು ಪಠ್ಯಕ್ಕೆ ಸೀಮಿತಗೊಳಿಸದೆ ಅವರಲ್ಲಿ ಸೃಜನಶೀಲತೆ ಮೂಡಿಸುವಲ್ಲಿ ಹೊಸ ಚಿಗುರು ಪರಿಕಲ್ಪನೆ ಮಾದರಿಯಾಗಿದೆ. ಪ್ರಾಥಮಿಕ ಹಂತದಲ್ಲಿ ಪ್ರೋತ್ಸಾಹ ಅಗತ್ಯ ಎಂದು ತಿಳಿಸಿದರು.

ಹೊಸ ಚಿಗುರು ಒಂದು ವಿಷಯಕ್ಕೆ ಸೀಮಿತವಾಗದೆ ಕಥೆ, ಕವನ, ಚಿತ್ರ, ಲಲಿತ ಪ್ರಬಂಧ ಹಾಗೂ ವಿಜ್ಞಾನ ವಿಷಯವನ್ನು ಒಳಗೊಂಡಿರುವುದು ಗಮನಾರ್ಹ ಸಂಗತಿ. ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮಸ್ಥೈರ್ಯ ಬೆಳೆಸುವಲ್ಲಿ ಸೇವಾ ಭಾರತಿ ಶಾಲೆ ಕಾರ್ಯ ಪ್ರಶಂಸನೀಯ ಎಂದರು.

ಹೊಸ ಚಿಗುರು ಸಂಪಾದಕಿ ನವನೀತಾ ಮಾತಾಜಿ ಮಾತನಾಡಿ, ಹೊಸ ಚಿಗುರು 28ನೇ ಸಂಪುಟವನ್ನು ಬಿಡುಗಡೆಗೊಳಿಸಿದ್ದು, ವಿದ್ಯಾರ್ಥಿ ಜೀವನದ ಹೊಣೆಗಾರಿಕೆ ವಿಚಾರಗಳನ್ನು ಒಳಗೊಂಡಿರುವ ಕೈಬರಹದ ಕೃತಿಯಲ್ಲಿ ಕವಿ ಕುವೆಂಪು ಅವರ ಆಶಯದಂತೆ ಕಥೆ, ಕವನ, ಚಿತ್ರ ಸೇರಿ ವಿವಿಧ ವಿಷಯಗಳನ್ನು ಸಂಗ್ರಹಿಸಲು ಮಕ್ಕಳನ್ನು ಪ್ರೇರೇಪಿಸಲಾಗಿದೆ ಎಂದು ಹೇಳಿದರು.

ಸೇವಾಭಾರತಿ ವಿದ್ಯಾಕೇಂದ್ರದ ಅಧ್ಯಕ್ಷ ಎಂ.ಜಿ.ವೆಂಕಟರಮಣ, ದೈಹಿಕ ಶಿಕ್ಷಣ ಪರಿವೀಕ್ಷಕ ಚಂದ್ರಪ್ಪ, ಕಮ್ಮರಡಿ ಸರ್ಕಾರಿ ಪ್ರೌಢಶಾಲೆ ಶ್ರೀಧರ್ ಇದ್ದರು.