ಗುಜರಾತಿನ ಅಹಮದಾಬಾದ್ನಲ್ಲಿ ಸಂಭವಿಸಿದ ವಿಮಾನ ಪತನ ಘಟನೆಯ (ಜೂನ್ 12) ನಂತರ ಈವರೆಗೆ 80 ವಿಮಾನಗಳ ಹಾರಾಟ ರದ್ದಾಗಿದೆ. ಮಂಗಳವಾರ ಒಂದೇ ದಿನ ಏರ್ ಇಂಡಿಯಾದ ಏಳು ವಿಮಾನಗಳ ಮತ್ತು ಬುಧವಾರ ಮೂರು ವಿಮಾನಗಳ ಸಂಚಾರ ರದ್ದುಗೊಳಿಸಲಾಯಿತು. ಹವಾಮಾನ ವೈಪರೀತ್ಯ, ಕಾರ್ಯಾಚರಣೆ ಸಮಸ್ಯೆ ಸಂಬಂಧಿತ ಕಾರಣದಿಂದ ಈ ವಿಮಾನಗಳ ಹಾರಾಟ ರದ್ದಾಗಿರುವುದು ಗಮನಾರ್ಹ. 275 ಜನರನ್ನು ಬಲಿ ಪಡೆದ ಇತ್ತೀಚಿನ ಭೀಕರ ಅಪಘಾತದ ನಂತರ ಏರ್ ಇಂಡಿಯಾ ವಿಮಾನ ಸುರಕ್ಷತೆ ಕುರಿತು ಆತಂಕ ಕವಿದಿರುವ ನಡುವೆಯೇ ಈ ರೀತಿಯ ಬೆಳವಣಿಗೆ ಸಂಭವಿಸಿರುವುದು ಕಳವಳಕ್ಕೆ ಕಾರಣವಾಗಿದೆ. ಅಲ್ಲದೆ ಸುರಕ್ಷೆ, ವಿಮಾನಗಳ ಸ್ಥಿತಿ, ಏರ್ ಇಂಡಿಯಾ ಕಾರ್ಯನಿರ್ವಹಣೆ ಬಗ್ಗೆ ಪ್ರಶ್ನೆ ಮೂಡುವಂತಾಗಿದೆ.
ಅಹಮದಾಬಾದ್ನಲ್ಲಿ ವಿಮಾನ ಪತನವಾದ ಬಳಿಕ ಏರ್ ಇಂಡಿಯಾದ ಡ್ರೀಮ್ೈನರ್ ವಿಮಾನಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಮಂಗಳವಾರ ಪರಿಶೀಲನೆ ವೇಳೆ ಹಲವು ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಏಳು ಅಂತಾರಾಷ್ಟ್ರೀಯ ಮತ್ತು ಒಂದು ದೇಶೀಯ ಡ್ರೀಮ್ೈನರ್ ವಿಮಾನ ಹಾರಾಟವನ್ನು ರದ್ದುಗೊಳಿಸಲಾಯಿತು. ಬುಧವಾರವೂ ಇದೇ ಪರಿಸ್ಥಿತಿ ಮುಂದುವರಿದಿದ್ದರಿಂದ ಪ್ರಯಾಣಿಕರು ತಮ್ಮದಲ್ಲದ ತಪ್ಪಿಗೆ ಪರದಾಡುವಂತಾಯಿತು. ಪರ್ಯಾಯ ಮಾರ್ಗದಲ್ಲಿ ಸಾಗುತ್ತಿರುವ ವಿಮಾನಗಳು ತಡವಾಗಿ ತಲುಪುತ್ತಿದ್ದು, ಪ್ರಯಾಣಿಕರು ಇನ್ನೊಂದು ಬಗೆಯ ಸಮಸ್ಯೆಯನ್ನು ಎದುರಿಸುವಂತಾಗಿದೆ.
ತಾಂತ್ರಿಕ ದೋಷ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿರುವುದು ಮತ್ತು ಹೆಚ್ಚು ವಿಮಾನಗಳಿಗೆ ಈ ಸಮಸ್ಯೆ ವಿಸ್ತಾರವಾಗುತ್ತಿರುವುದು ಹಲವು ಪ್ರಶ್ನೆಗಳನ್ನು ಸೃಷ್ಟಿಸಿದೆ. ಈ ಸರಣಿ ಘಟನೆಗಳನ್ನು ಅವಲೋಕಿಸಿದರೆ ಏರ್ ಇಂಡಿಯಾ ವಿಮಾನಗಳು ದಕ್ಷತೆ ಕಳೆದುಕೊಂಡಿವೆಯೆ, ಕಾರ್ಯಾಚರಣೆ ಸಾಮರ್ಥ್ಯ ಕುಗ್ಗಿದೆಯೆ ಅಥವಾ ನಿರ್ವಹಣೆ ಸಮರ್ಪಕವಾಗಿಲ್ಲವೆ ಎಂಬ ಸಂದೇಹ ಪ್ರಯಾಣಿಕರಿಂದಲೇ ವ್ಯಕ್ತವಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, ‘ಎಕ್ಸ್’ನಲ್ಲಿ ಹಲವರು ಅಸಮಾಧಾನ ತೋಡಿಕೊಂಡಿದ್ದಾರೆ. ಡ್ರೀಮ್ೈನರ್ ವಿಮಾನಗಳ ಸುರಕ್ಷಾ ಮಾನದಂಡಗಳನ್ನು ಕೂಡ ಪರಿಶೀಲಿಸಲಾಗುತ್ತಿದೆ.
ಭಾರತದಲ್ಲಿ ವಿಮಾನಯಾನ ವಲಯವು ನಿಧಾನವಾಗಿ ವಿಸ್ತರಣೆಯಾಗುತ್ತಿದೆ. ಅದಕ್ಕೆ ಪೂರಕವಾಗಿ ವಿಮಾನಯಾನ ವಲಯದ ಮೂಲಸೌಕರ್ಯಗಳು ಹೆಚ್ಚಿವೆ, ದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆಯೂ ಏರಿಕೆಯಾಗಿದೆ. ಈ ಕಾಲಘಟ್ಟದಲ್ಲಿ ವಿಮಾನಯಾನ ವಲಯ ಕಾರ್ಯಾಚರಣೆ ದೃಷ್ಟಿಯಿಂದ ಒಂದು ಹೆಜ್ಜೆ ಮುಂದೆ ಹೋಗಬೇಕೆ ಹೊರತು ಸಮಸ್ಯೆಗಳ ಸುಳಿಗೆ ಸಿಲುಕಬಾರದು. ಇಲ್ಲಿ ಸಮಸ್ಯೆಗಳ ಸ್ವರೂಪ ಭಿನ್ನ ಮತ್ತು ಸಂಕೀರ್ಣವಾಗಿರುವುದು ಹೌದು. ಆದರೆ, ಅದಕ್ಕೆ ಕಾರಣ ಮತ್ತು ಪರಿಹಾರ ಕಂಡುಕೊಳ್ಳಲು ಯಾವುದೇ ಕಾರಣಕ್ಕೂ ವಿಳಂಬ ಮಾಡುವಂತಿಲ್ಲ. ವಿಮಾನಗಳು ಹಳೆಯದಾಗಿದ್ದರೆ ಅಂಥವುಗಳ ಕಾರ್ಯಾಚರಣೆ ನಿಲ್ಲಿಸಬೇಕು.
ಏಕೆಂದರೆ ಪ್ರಯಾಣಿಕರ ಸುರಕ್ಷತೆ ಅತ್ಯಂತ ಮುಖ್ಯ. ಇದೇ ಸ್ಥಿತಿ ಮುಂದುವರಿದ್ದಲ್ಲಿ ಏರ್ ಇಂಡಿಯಾ ತನ್ನ ವರ್ಚಸ್ಸನ್ನು, ಗ್ರಾಹಕರ ವಿಶ್ವಾಸವನ್ನು ಕಳೆದುಕೊಳ್ಳಲಿದೆ. ಹಾಗಾಗುವ ಮುನ್ನವೇ ಸುಧಾರಣಾ ಕ್ರಮಗಳಿಗೆ ವೇಗ ಸಿಗಬೇಕು. ಏರ್ ಇಂಡಿಯಾ ಈ ಹಿಂದೆ ಆರ್ಥಿಕ ಸಂಕಷ್ಟ, ಸಿಬ್ಬಂದಿ ಕೊರತೆ ಸೇರಿ ಹಲವು ಸಮಸ್ಯೆಗಳನ್ನು ಜಯಿಸಿ, ಮುನ್ನೆಲೆಗೆ ಬಂದಿದೆ. ಹಾಗಾಗಿ, ಪ್ರಸಕ್ತ ಸವಾಲನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ತಜ್ಞರ ನೆರವನ್ನು ಪಡೆಯಲಿ. ತಾಂತ್ರಿಕ ತೊಂದರೆಗಳು ಮತ್ತೆ ಮತ್ತೆ ಮರುಕಳಿಸದಂತೆ ಕ್ರಮ ಕೈಗೊಳ್ಳುವುದು ಅಗತ್ಯ. ಒಟ್ಟಾರೆ ಏರ್ ಇಂಡಿಯಾ ಸಂಸ್ಥೆ ಪ್ರಯಾಣವನ್ನು ಸುರಕ್ಷಿತ ಮತ್ತು ಪ್ರಯಾಣಿಕಸ್ನೇಹಿಯಾಗಿಸಲಿ ಎಂಬುದೇ ಆಶಯ.