ಬೆಂಗಳೂರು: 500ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಜಗತ್ತಿನ ಅತಿ ದೊಡ್ಡ A380 ಡಬಲ್ ಡೆಕ್ಕರ್ ವಿಮಾನವು ಇದೇ ಮೊದಲ ಬಾರಿಗೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಬಂದಿಳಿಯಿತು. ಈ ಐತಿಹಾಸಿಕ ಕ್ಷಣಕ್ಕೆ ಸಚಿವ ಎಸ್.ಟಿ. ಸೋಮಶೇಖರ್ ಸಾಕ್ಷಿಯಾದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಚಿವರು, ವಿಶ್ವದ ಅತಿ ದೊಡ್ಡ ನಾಗರಿಕ ವಿಮಾನ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಎಮಿರೇಟ್ಸ್ ಏರ್ಲೈನ್ಸ್ಗೆ ಅನಂತ ಧನ್ಯವಾದಗಳು. A380 ವಿಮಾನವು ಮುಂಬೈ ನಂತರ ಹಾರಾಟ ನಡೆಸುತ್ತಿರುವ ಎರಡನೇ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ ಎಂದರು.
ಇದೊಂದು ಜಂಬೋ ಜೆಟ್ ವಿಮಾನ. ಯುನೈಟೆಡ್ ಅರಬ್ ಎಮಿರೇಟ್ಸ್ ಜೊತೆಗೆ ಭಾರತವು ಸಾಂಸ್ಕೃತಿಕ, ಆರ್ಥಿಕ ಮತ್ತು ಧಾರ್ಮಿಕವಾಗಿ ಸಾಕಷ್ಟು ಸ್ನೇಹಬಾಂದವ್ಯ ಹೊಂದಿದೆ. ಎಮಿರೇಟ್ಸ್ ವಿಮಾನ ಹಾರಾಟದಿಂದ ಎರಡು ದೇಶಗಳ ನಡುವಿನ ಬಾಂದವ್ಯ ಮತ್ತಷ್ಟು ಗಟ್ಟಿಯಾಗಲಿದೆ.