ನ್ಯೂಸ್

ಇಂದು ಸೋಷಿಯಲ್​ ಮೀಡಿಯಾ ದಿನ: ಸಾಮಾಜಿಕ ಮಾಧ್ಯಮವೆಂಬ ಅದ್ಭುತ ಲೋಕ

ಸೋಷಿಯಲ್ ಮೀಡಿಯಾ ಇಂದು ಬದುಕಿನೊಳಗೆ ಹಾಸುಹೊಕ್ಕಂತಿದೆ. ಸ್ಮಾರ್ಟ್ ಫೋನ್ ಯಾರ ಬಳಿ ಇದೆಯೋ ಆ ಪೈಕಿ ಶೇಕಡ 99 ಜನ ಸೋಷಿಯಲ್ ಮೀಡಿಯಾ ಬಳಕೆದಾರರೇ. ಹೀಗಾಗಿ ಉಳಿದೆಲ್ಲ ದಿನಾಚರಣೆ ಗಳಂತೆ ಸೋಷಿಯಲ್ ಮೀಡಿಯಾ ದಿನವೂ ಚಾಲ್ತಿಗೆ ಬಂದಿದೆ. ಈ ಬಗ್ಗೆ ಮಾಹಿತಿ ನೀಡಿದ್ದಾರೆ ಉಮೇಶ್ ಕುಮಾರ್ ಶಿಮ್ಲಡ್ಕ

ಸೋಷಿಯಲ್ ಮೀಡಿಯಾ ಅಂದರೆ ಸಾಕು ಕಣ್ಣ ಮುಂದೆ ನಿಲ್ಲುವುದೆ ಫೇಸ್​ಬುಕ್, ಇನ್​ಸ್ಟಾಗ್ರಾಂ, ಟ್ವಿಟರ್, ಲಿಂಕ್ಡ್ ಇನ್. ಲಭ್ಯ ಮಾಹಿತಿ ಪ್ರಕಾರ 100ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಸೈಟ್​ಗಳು ಬಳಕೆಯಲ್ಲಿವೆ. ಈ ಬೆಳವಣಿಗೆಗೆ ಬಹುಮುಖ್ಯ ಕಾರಣ ಇಂಟರ್ನೆಟ್ ಮತ್ತು ಸ್ಮಾರ್ಟ್​ಫೋನ್.

ಬಹುತೇಕರು ಸ್ನೇಹಿತರ ಜತೆಗೆ ಸಂಪರ್ಕಕ್ಕೋ ಅಥವಾ ಹೊಸಬರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವುದಕ್ಕೋ ಅಥವಾ ತಮ್ಮ ಹವ್ಯಾಸ, ಸಾಧನೆಗಳನ್ನು ಅಲ್ಲಿ ಅಪ್ಲೋಡ್ ಮಾಡಿ ಮೆಚ್ಚುಗೆ ಗಳಿಸುವುದಕ್ಕೋ ಸಾಮಾಜಿಕ ಮಾಧ್ಯಮದಲ್ಲಿ ಖಾತೆ ತೆರೆದಿರುತ್ತಾರೆ. ಆದಾಗ್ಯೂ, ಜನರನ್ನು ಒಗ್ಗೂಡಿಸುವಲ್ಲಿ, ಚಳವಳಿ ರೂಪಿಸುವಲ್ಲಿ(ನಿರ್ಭಯಾ ಕೇಸ್ ಆದಾಗ), ಚುನಾವಣೆ (ನಮ್ಮ ದೇಶದಲ್ಲಿ 2014, 2019 ಮತ್ತು ನಂತರದ ಚುನಾವಣೆಗಳು) ಸಂದರ್ಭದಲ್ಲಿ ಜನಾಭಿಪ್ರಾಯ ರೂಪಿಸುವಲ್ಲಿ ಸೋಷಿಯಲ್ ಮೀಡಿಯಾ ನಿರ್ವಹಿಸಿದ ಪಾತ್ರ ಪ್ರಮುಖ.

ಈ ಸೋಷಿಯಲ್ ಮೀಡಿಯಾ ಜಗತ್ತು ವಾಣಿಜ್ಯ ದೃಷ್ಟಿಯಿಂದಲೂ ಪ್ರಾಮುಖ್ಯ ಪಡೆದಿದೆ. ಅದೊಂದು ಕಸ್ಟಮರ್ ಬೇಸ್. ಒಂದೇ ವೇದಿಕೆಯಲ್ಲಿ ಎಷ್ಟೊಂದು ಜನ ಸಿಗ್ತಾರೆ. ಅವರವರ ಸಮಯದಲ್ಲಿ ಅವರು ಆ ತಾಣಕ್ಕೆ ಒಮ್ಮೆ ಭೇಟಿ ಕೊಟ್ಟು ಸುತ್ತಮುತ್ತಲಿನ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂದು ಅವಲೋಕಿಸುತ್ತಾರೆ. ಅವರ ಆಸಕ್ತಿಯ ವಿಚಾರಗಳಷ್ಟೇ ಅವರಿಗೆ ಸಿಗುತ್ತಿರುತ್ತದೆ. ಅದಕ್ಕೆ ತಕ್ಕ ಹಾಗೆ ಕಂಪನಿಗಳೂ ತಮ್ಮ ಜಾಹೀರಾತನ್ನು ನಿಶ್ಚಿತ ಜನರನ್ನೇ ಅಥವಾ ಸಮುದಾಯವನ್ನೇ ಗುರಿಯಾಗಿಸಿಕೊಂಡು ಆ ವೇದಿಕೆಯಲ್ಲಿ ಪ್ರಸಾರವಾಗುವಂತೆ ಮಾಡುತ್ತಿವೆ. ಇದರಿಂದ ಸಾಕಷ್ಟು ಉದ್ಯೋಗಾವಕಾಶಗಳೂ ಸೃಷ್ಟಿಯಾಗುತ್ತಿವೆ. ವ್ಯಾಪಾರೋದ್ಯಮಗಳು ತಮ್ಮ ಗ್ರಾಹಕರನ್ನು ತಲುಪುವಲ್ಲಿಯೂ ಇದು ನೆರವಾಗುತ್ತಿದೆ.

ನಿಮ್ಮ ಸ್ಟೋರಿಗಳನ್ನು ನೀವೇ ಹೇಳಿ: ಫೇಸ್​ಬುಕ್ ಲೈವ್, ಟ್ವಿಟರ್ ಲೈವ್ ಮುಂತಾದ ಆಪ್ಶನ್ ಬಳಸಿಕೊಂಡು ನೀವು ಮಾಡುವ ಉತ್ತಮ ಕೆಲಸ ಅಥವಾ ಒಳ್ಳೆಯ ಚಿಂತನೆಗಳನ್ನು ನೇರಪ್ರಸಾರದ ಮೂಲಕ ಹೊರಜಗತ್ತಿನೊಂದಿಗೆ ಹಂಚಿಕೊಳ್ಳಬಹುದು. ನಿಮ್ಮ ಕ್ಷೇತ್ರಗಳ ವಿಚಾರದ ಬಗ್ಗೆ ಯಾರೋ ಪರಿಣತರನ್ನು ಭೇಟಿ ಮಾಡಿದರೆ ಅವರೊಂದಿಗಿನ ಮಾತುಕತೆಯನ್ನು ನೇರಪ್ರಸಾರ ಮಾಡಬಹುದು. ಚಿಕ್ಕಪುಟ್ಟ ವ್ಯಾಪಾರೋದ್ಯಮ ನಿಮ್ಮದಾಗಿದ್ದರೆ, ಆ ಉತ್ಪನ್ನಗಳ ಪರಿಚಯ ಮತ್ತು ಸಂಬಂಧಿಸಿದ ಇತರ ವಿಚಾರವನ್ನೂ ನೇರಪ್ರಸಾರದ ಮೂಲಕ ಗ್ರಾಹಕರಿಗೆ ತಲುಪಿಸಬಹುದು. ಅದೇ ರೀತಿ, ನೀವು ಕಿಚನ್​ನಲ್ಲಿ ಅಡುಗೆ ಮಾಡ್ತಾ ಇದ್ದರೆ ಅದನ್ನೂ ನೇರಪ್ರಸಾರದ ಮೂಲಕ ಫಾಲೋವರ್ಸ್​ಗೆ ತೋರಿಸಿಕೊಡಬಹುದು.

ನಿಮ್ಮ ಅನುಕೂಲಕ್ಕೆ ಬಳಸಿಕೊಳ್ಳುವುದು ಹೇಗೆ?: ವ್ಯಾಪಾರಿಗಳು, ಉದ್ಯಮಿಗಳಿರಬಹುದು ಅಥವಾ ವ್ಯಾಪಾರೋದ್ಯಮಗಳು ತಮ್ಮ ಬ್ರಾ್ಯಂಡ್ ಇಮೇಜ್ ಹೆಚ್ಚಿಸಿಕೊಳ್ಳಲು, ಉತ್ಪನ್ನಗಳ ಬಗ್ಗೆ ಪ್ರಚಾರ ಮಾಡಲು ಸೋಷಿಯಲ್ ಮೀಡಿಯಾಗಳನ್ನು ಬಳಸಿಕೊಳ್ಳುತ್ತಿವೆ. ಅಷ್ಟೇ ಏಕೆ ಆನ್​ಲೈನ್ ಮಾರಾಟಕ್ಕೂ ವೇದಿಕೆಯನ್ನಾಗಿ ಅವುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಕೊವಿಡ್ 19 ಕಾರಣಕ್ಕೆ ಬದಲಾದ ಸನ್ನಿವೇಶದಲ್ಲಿ ಡಿಜಿಟಲ್ ಯುಗಕ್ಕೆ ಇನ್ನಷ್ಟು ವೇಗ ಸಿಕ್ಕಿದೆ. ಸೋಷಿಯಲ್ ಮೀಡಿಯಾ ಸೈಟ್​ಗಳಲ್ಲೂ ನಾವು ಬಳಸದೇ ಇರುವ ಅನೇಕ ಟೂಲ್​ಗಳಿವೆ. ಫೇಸ್​ಬುಕ್, ಟ್ವಿಟರ್, ಲಿಂಕ್ಡ್​ಇನ್ ಹೀಗೆ ಪ್ರತಿಯೊಂದರಲ್ಲೂ ಇಂತಹ ಟೂಲ್​ಗಳಿವೆ. ಅವುಗಳನ್ನು ಬಳಸುವುದಕ್ಕೆ ಪ್ರಯತ್ನಿಸಬಹುದು. ಫೇಸ್​ಬುಕ್​ನಲ್ಲಿ ಪೋಸ್ಟ್​ಗೆ ಹೊರತಾಗಿ, ಸ್ಟೋರೀಸ್, ಪೇಜ್, ಮಾರ್ಕೆಟ್ ಪ್ಲೇಸ್, ಗ್ರೂಪ್ಸ್ ಅಥವಾ ಕಮ್ಯೂನಿಟಿ, ವಿಡಿಯೋ ಮುಂತಾದ ಸೆಕ್ಷನ್​ಗಳಿವೆ. ಟ್ವಿಟರ್ ಇತ್ತೀಚೆಗೆ ಫ್ಲೀಟ್ ಎಂಬ ಒಂದು ಆಪ್ಶನ್ ಸೇರ್ಪಡೆಯಾಗಿದೆ. ಅದು ಫೇಸ್​ಬುಕ್​ನ ಸ್ಟೋರೀಸ್ ಮಾದರಿಯಲ್ಲೇ ನಾವು ಕ್ರಿಯೇಟ್ ಮಾಡಿದ ಸ್ಟೋರಿಗಳು 24 ಗಂಟೆ ನಂತರ ಮರೆಯಾಗುತ್ತವೆ. ಫೇಸ್​ಬುಕ್ ಲೈವ್, ಟ್ವಿಟರ್ ಲೈವ್ ಮುಂತಾದ ಆಪ್ಶನ್​ಗಳೂ ಇವೆ.

ಪವರ್​ನ್ಯೂಸ್ ವಿಶೇಷ: ವಿಜಯಾನಂದ ಇನ್​ಫೋಟೆಕ್​ನ ‘ಪವರ್​ನ್ಯೂಸ್’ ಎಂಬ ಆಪ್​ನ್ನು ಸ್ಮಾರ್ಟ್ ಫೋನಿನಲ್ಲಿ ಡೌನ್​ಲೋಡ್ ಮಾಡಿಕೊಂಡು ಅಲ್ಲಿ ಸಂಕ್ಷಿಪ್ತವಾಗಿ ಸುದ್ದಿ ಹಾಕಿ, ಅದಕ್ಕೆ ಸಂಬಂಧಿಸಿದ ವಿಡಿಯೋ, ಫೋಟೋವನ್ನು ಅಪ್ಲೋಡ್ ಮಾಡಬಹುದು. ನಿಮ್ಮ ಊರಿನ ಕಾರ್ಯಕ್ರಮ, ಸಮಸ್ಯೆಗಳು ಹೀಗೆ ಯಾವುದೇ ರೀತಿಯ ಸುದ್ದಿ ಹಾಕುವುದಕ್ಕೆ ಈ ಆಪ್ (PowerNewz ಡೌನ್​ಲೋಡ್ ಲಿಂಕ್​) ಸಹಕಾರಿ.

10 ವಿಧಗಳು

* ಸೋಷಿಯಲ್ ನೆಟ್​ವರ್ಕ್್ಸ ಜನಸಂಪರ್ಕದ ಉದ್ದೇಶ-ಫೇಸ್​ಬುಕ್, ಟ್ವಿಟರ್, ಲಿಂಕ್ಡ್​ಇನ್.

* ಮೀಡಿಯಾ ಶೇರಿಂಗ್ ನೆಟ್​ವರ್ಕ್್ಸ ಫೋಟೋ, ವಿಡಿಯೋ ಮತ್ತು ಇತರೆ ಮೀಡಿಯಾಗಳನ್ನು ಶೇರ್ ಮಾಡಲು ಬಳಕೆ. ಪವರ್ ನ್ಯೂಸ್(ಕಟಡಿಛ್ಟಿಘಛಿಡ್ಢಿ ), ಇನ್​ಸ್ಟಾಗ್ರಾಂ, ಸ್ಕೈಪ್​​ಚಾಟ್, ಯೂಟ್ಯೂಬ್.

* ಡಿಸ್ಕಷನ್ ಫಾರಮ್್ಸ- ಸುದ್ದಿಗಳು ಮತ್ತು ಚಿಂತನೆ ಗಳ ವಿನಿಮಯದ ವೇದಿಕೆ- ರೆಡ್ಡಿಟ್, ಖೋರಾ, ಡಿಗ್ಗ್.

* ಬುಕ್​ವಾರ್ಕಿಂಗ್ ಆಂಡ್ ಕಂಟೆಂಟ್ ಕ್ಯುರೇಷನ್ ನೆಟ್​ವರ್ಕ್್ಸಶೋಧಿಸುವುದು ಮತ್ತು ಉಳಿಸುವುದು, ಹೊಸ ಹೊಸ ಕಂಟೆಂಟ್ ಅನ್ನು ಹಂಚಿಕೊಳ್ಳುವುದು- ಪಿನ್​ಟ್ರೆಸ್ಟ್, ಫ್ಲಿಪ್​ಬೋರ್ಡ್.

* ಕನ್ಸೂ್ಯಮರ್ ರಿವ್ಯೂ ನೆಟ್​ವರ್ಕ್್ಸ ಬಿಜಿನೆಸ್​ಗಳನ್ನು ಹುಡುಕುವುದಕ್ಕೆ ಮತ್ತು ಪರಾಮರ್ಶೆ/ವಿಮರ್ಶೆಗಿರುವ ವೇದಿಕೆ ಮೌತ್​ಶಟ್, ಟ್ರಿಪ್ ಅಡ್ವೈಸರ್.

* ಬ್ಲಾಗಿಂಗ್ ಆಂಡ್ ಪಬ್ಲಿಷಿಂಗ್ ನೆಟ್​ವರ್ಕ್್ಸ ಆನ್​ಲೈನ್​ನಲ್ಲಿ ವಿಷಯಗಳನ್ನು ಪ್ರಕಟಿಸುವುದು- ವರ್ಡ್​ಪ್ರೆಸ್, ಟಂಬ್ಲರ್, ಬ್ಲಾಗ್​ಸ್ಪಾಟ್.

* ಇಂಟರೆಸ್ಟ್ ಬೇಸ್ಡ್ ನೆಟ್​ವರ್ಕ್್ಸಆಸಕ್ತಿಗಳು ಮತ್ತು ಹವ್ಯಾಸಗಳನ್ನು ಶೇರ್ ಮಾಡುವ ವೇದಿಕೆ- ಸಂಪದ, ಸಂಚಯ, ಪ್ರತಿಲಿಪಿ.

* ಸೋಷಿಯಲ್ ಶಾಪಿಂಗ್ ನೆಟ್​ವರ್ಕ್್ಸ ಶಾಪ್ ಆನ್​ಲೈನ್- ಟ್ರೖೆಬ್ಸ್​ಇಂಡಿಯಾ

* ಶೇರಿಂಗ್ ಇಕಾನಮಿ ನೆಟ್​ವರ್ಕ್್ಸ ಸರಕು ಮತ್ತು ಸೇವೆಗಳ ವ್ಯಾಪಾರ-ಉಬರ್, ಓಲಾ, ಏರ್ಬಿಎನ್​ಬಿ, ಫ್ಲಿಪ್​ಕಾರ್ಟ್, ಅಮೆಜಾನ್.

* ಅನೋನಿಮಸ್ ಸೋಷಿಯಲ್ ನೆಟ್​ವರ್ಕ್್ಸ ಅನಾಮಿಕರಾಗಿ ಸಂವಹನ ನಡೆಸುವುದಕ್ಕೆ ಇರುವ ವೇದಿಕೆ- ವಿಶ್ಪರ್, ಆಸ್ಕ್. ಎಫ್​ಎಂ, ಆಫ್ಟರ್ ಸ್ಕೂಲ್ (ಭಾರತದಲ್ಲಿ ಇವುಗಳ ಸಂಖ್ಯೆ ಕಡಿಮೆ ಇದೆ)

ಗಮನಿಸಬೇಕಾದ ಅಂಶ: ಸೋಷಿಯಲ್ ಮೀಡಿಯಾಗಳಲ್ಲಿ ಎಲ್ಲರಿಗೂ ಹೆಚ್ಚು ಫಾಲೋವರ್ಸ್ ಇರ್ತಾರೆ ಎಂದೇನಿಲ್ಲ. ಅದೇ ರೀತಿ ನೀವು ಹಾಕಿದ ಎಲ್ಲ ಫೋಟೋ, ವಿಡಿಯೋಗಳಿಗೆ ಲೈಕ್ ಸಿಗುತ್ತದೆ. ನೂರಾರು, ಸಾವಿರಾರು ಜನ ನೋಡ್ತಾರೆ ಎಂದೇನೂ ಇಲ್ಲ. ಹಾಗಂತ ಖಿನ್ನತೆಗೋ ದುಃಖಕ್ಕೋ ಒಳಗಾಗಬೇಕಾದ್ದಿಲ್ಲ. ಉತ್ತಮ ಕಂಟೆಂಟ್ ಹಾಕುತ್ತ ಹೋದರೆ ನಿಮ್ಮ ಫಾಲೋವರ್ಸ್ ಸಂಖ್ಯೆ ನಿಧಾನವಾಗಿ ಹೆಚ್ಚುತ್ತ ಹೋಗುತ್ತದೆ. ವೈಯಕ್ತಿಕ ನಿಂದನೆ, ಸಮಾಜಕ್ಕೆ ಹಿತವಲ್ಲದ ವಿಚಾರಗಳನ್ನು ಪೋಸ್ಟ್ ಮಾಡಬೇಡಿ. ರಕ್ತಸಿಕ್ತ ಫೋಟೋ, ಆತ್ಮಹತ್ಯೆ, ಕೊಲೆ ಇತ್ಯಾದಿ ಅಪರಾಧ ಸುದ್ದಿಗಳ ಫೋಟೋ, ವಿಡಿಯೋ ಬಳಕೆ ಮಾಡಬೇಡಿ. ಸೋಷಿಯಲ್ ಮೀಡಿಯಾ ಒಂದು ಅದ್ಭುತ ಲೋಕ. ನೀವು ಅಲ್ಲಿ ಹೇಗೆ ಇರುತ್ತೀರೋ ಹಾಗೆ ಅಲ್ಲಿಯವರೂ ನಿಮ್ಮೊಂದಿಗೆ ಹಾಗೇ ವ್ಯವಹರಿಸುತ್ತಾರೆ. ಆದ್ದರಿಂದ ಈ ನಿಟ್ಟಿನಲ್ಲಿ ಎಚ್ಚರವಹಿಸುವುದು ಒಳಿತು.