ನ್ಯೂಸ್

ಆನ್​ಲೈನ್ ದೋಖಾ: ಹಳೆ ನಾಣ್ಯ ಮಾರಾಟಕ್ಕಿಟ್ಟು ಹಣ ಕಳೆದುಕೊಂಡ ಮಹಿಳೆ

ಬೆಂಗಳೂರು: ಹಳೇ ನಾಣ್ಯಗಳನ್ನು ಮಾರಾಟಕ್ಕೆ ಮುಂದಾದ ಮಹಿಳೆಗೆ ಗ್ರಾಹಕನ ಸೋಗಿನಲ್ಲಿ ನಂಬಿಸಿದ ಸೈಬರ್ ಕಳ್ಳ, 1.04 ಲಕ್ಷ ರೂ. ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಶೇಷಾದ್ರಿಪುರದ 44 ವರ್ಷದ ಮಹಿಳೆ ವಂಚನೆಗೆ ಒಳಗಾದವರು. ಹಳೆಯ ನಾಣ್ಯಗಳನ್ನು ಸಂಗ್ರಹಿಸಿದ್ದ ಮಹಿಳೆ, ಅವುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಉದ್ದೇಶಕ್ಕಾಗಿ ವೆಬ್‌ಸೈಟ್ ಲಿಂಕ್ ಸರ್ಚ್ ಮಾಡುತ್ತಿದ್ದರು. ಈ ವೇಳೆ ಗೂಗಲ್‌ನಲ್ಲಿ ಇಂಡಿಯನ್‌ ಕಾಯಿನ್ ಡಾಟ್ ಕಾಂ ವೆಬ್‌ಸೈಟ್ ವಿಳಾಸ ಸಿಕ್ಕಿದ್ದು, ಅದರಲ್ಲಿ ನಾಣ್ಯಗಳ ಫೋಟೋಗಳನ್ನು ಅಪ್‌ಲೋಡ್ ಮಾಡಿ ಮೊಬೈಲ್ ನಂಬರ್ ಉಲ್ಲೇಖಿಸಿದ್ದರು.
ಕೆಲವೇ ಹೊತ್ತಿನಲ್ಲಿ ಮಹಿಳೆಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ನಿಮ್ಮ ಬಳಿ ಇರುವ ಹಳೇ ನಾಣ್ಯಗಳನ್ನು ಖರೀದಿ ಮಾಡುತ್ತೇನೆ. ಅದಕ್ಕೂ ಮೊದಲು ನೋಂದಣಿ ಶುಲ್ಕ ಪಾವತಿ ಮಾಡಬೇಕೆಂದು ಷರತ್ತು ವಿಧಿಸಿದ್ದಾರೆ.

ಇದನ್ನು ನಂಬಿದ ಮಹಿಳೆ, ಅಪರಿಚಿತ ವ್ಯಕ್ತಿ ಕೊಟ್ಟ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಇದೇ ರೀತಿ ಹಂತ ಹಂತವಾಗಿ ಸಬೂಬು ಹೇಳಿ 1.04 ಲಕ್ಷ ರೂ. ಅನ್ನು ಆನ್‌ಲೈನ್‌ನಲ್ಲಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಆದರೆ ನಾಣ್ಯಗಳನ್ನು ಮಾತ್ರ ಖರೀದಿ ಮಾಡಿ ಹಣವನ್ನು ಕೊಡಲಿಲ್ಲ.

ಕೊನೆಗೆ ಅನುಮಾನ ಬಂದು ಮಹಿಳೆ, ತಾನು ಪಾವತಿ ಮಾಡಿದ್ದ ಹಣವನ್ನು ವಾಪಸ್ ಕೊಡುವಂತೆ ಕೇಳಿದಾಗ ಅಪರಿಚಿತ ವ್ಯಕ್ತಿ ಸಂಪರ್ಕ ಕಡಿತ ಮಾಡಿಕೊಂಡಿದ್ದಾನೆ. ನೊಂದ ಮಹಿಳೆ, ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಕೇಂದ್ರ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.