ನ್ಯೂಸ್

ನಮಗೆಲ್ಲ ಕರೊನಾ ಬರಲ್ಲ ಎಂದು ಮದುವೆಗೆ ಹೋಗಿ ಬಂದಿದ್ದವಳಿಗೆ ಬಂತು ಕರೊನಾ

ಮುಂಬೈ: ಕರೊನಾ ವೈರಸ್​ ಸಾಂಕ್ರಾಮಿಕವಾದದ್ದು, ಹಾಗಾಗಿ ಯಾವುದೇ ಕಾರ್ಯಕ್ರಮಗಳನ್ನು ಮಾಡಬೇಡಿ, ಹೊರಗಡೆ ಅನಾವಶ್ಯಕವಾಗಿ ಸುತ್ತಾಡಬೇಡಿ ಎಂದು ಸರ್ಕಾರ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದರೂ ಜನರಿಗೆ ಮಾತ್ರ ಬುದ್ಧಿ ಬಂದಿಲ್ಲ. ನಾನು ವಿದೇಶದಿಂದ ಬಂದಿಲ್ಲ ಎನ್ನುವ ಧೈರ್ಯದಲ್ಲಿ ಕಾರ್ಯಕ್ರಮವವೊಂದರಲ್ಲಿ ಭಾಗವಹಿಸಿದ್ದ ಮಹಿಳೆಗೆ ಕರೊನಾ ವೈರಸ್​ ಹರಡಿರುವುದು ಪತ್ತೆಯಾಗಿದೆ.

ಪುಣೆಯ 40 ವರ್ಷದ ಮಹಿಳೆ ವಿದೇಶಕ್ಕೆ ಹೋಗಿರಲಿಲ್ಲ. ಅವಳ ಮನೆಯ ಅಕ್ಕ ಪಕ್ಕ ಅಥವಾ ಮನೆಯಲ್ಲಿ ವಿದೇಶದಿಂದ ಪ್ರವಾಸ ಮಾಡಿ ಬಂದವರು ಇಲ್ಲ ಎನ್ನುವ ಧೈರ್ಯದಲ್ಲಿದ್ದಳು. ಅದೇ ಧೈರ್ಯದಲ್ಲಿ ಮಾರ್ಚ್​ 3ರಂದು ಆಕೆ ಮುಂಬೈನ ವಾಶಿಯಲ್ಲಿ ಮದುವೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾಳೆ. ಮದುವೆ ಮುಗಿಸಿ ಬಂದ ಮಹಿಳೆಗೆ ಕೆಲ ದಿನಗಳಲ್ಲಿ ಆರೋಗ್ಯ ಹದಗೆಟ್ಟಿದ್ದು, ವಿದೇಶಿ ಟ್ರಾವೆಲ್​ ಹಿಸ್ಟರಿ ಇಲ್ಲದ ಕಾರಣ ಆಕೆಗೆ H1N1 ಇರಬಹುದು ಎಂದು ಶಂಕಿಸಲಾಗಿತ್ತು. ಆದರೆ ಇದೀಗ ಆಕೆಯಲ್ಲಿ ಕರೊನಾ ವೈರಸ್​ ಪತ್ತೆಯಾಗಿದ್ದು, ಮುಂಬೈನ ಭಾರತೀ ಆಸ್ಪತ್ರೆಯಲ್ಲಿ ವೆಂಟಿಲೇಟರ್​ ಸಹಾಯದೊಂದಿಗೆ ಉಸಿರಾಡುವಂತಾಗಿದೆ.

ಮದುವೆಯಲ್ಲಿ ಯಾವುದೋ ವ್ಯಕ್ತಿಯಲ್ಲಿ ಕರೊನಾ ವೈರಸ್​ ಇದ್ದು ಅವರಿಂದಲೇ ಆಕೆಗೆ ವೈರಸ್​ ಹರಡಿರಬಹುದು ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆಯನ್ನು ಮಾಡುತ್ತಿರುವುದಾಗಿ ಜಿಲ್ಲಾಧಿಕಾರಿ ನೇವಲ್​ ಕಿಶೋರ್​ ರಾಮ್​ ತಿಳಿಸಿದ್ದಾರೆ. ಆಕೆ ಮುಂಬೈನಿಂದ ವಾಶಿಗೆ ಕ್ಯಾಬ್​ನಲ್ಲಿ ಸಂಚರಿದ್ದಾಳೆ ಎನ್ನಲಾಗಿದ್ದು ಅದರ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. (ಏಜೆನ್ಸೀಸ್​)