ಕಾನ್ಪುರ: ತನ್ನ ಮೇಲೆ ಅತ್ಯಾಚಾರ ಮಾಡಿದ್ದ ವ್ಯಕ್ತಿ ಅಪಘಾತದಲ್ಲಿ ಸಾವನ್ನಪ್ಪಿದ ಎನ್ನುವ ಕಾರಣಕ್ಕೆ ಸಂತ್ರಸ್ತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ದಿಬಿಯಾಪುರ ಮೂಲದ ಮಹಿಳೆಯನ್ನು ಇಟವಾ ಮೂಲದ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಆಕೆಯ ಪತಿ ನಿಧನವಾದ ಹಿನ್ನೆಲೆ ಆಕೆ ತನ್ನ ತವರಿಗೆ ಮರಳಿ, ಅಲ್ಲಿಯೇ ಬಾಡಿಗೆ ಮನೆಯೊಂದರಲ್ಲಿ ಜೀವಿಸಲಾರಂಭಿಸಿದ್ದಳು. ಈ ಸಮಯದಲ್ಲಿ ಆಕೆಗೆ ಫತೇಪುರ ಮೂಲದ ಜಿತೇಂದ್ರನ ಪರಿಚಯವಾಗಿದೆ.
ಪೊಲೀಸ್ ಪೇದೆಯಾಗಿದ್ದ ಜಿತೇಂದ್ರ ತನ್ನ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದಾಗಿ ಮಹಿಳೆ ದೂರಿದ್ದಾಳೆ. ಅದೇ ಕಾರಣಕ್ಕೆ ಆಕೆ ತನ್ನನ್ನು ಮದುವೆಯಾಗು ಎಂದು ಜಿತೇಂದ್ರನಿಗೆ ಕೇಳಿದ್ದಳಂತೆ. ಆದರೆ ಆತ ನಿರಾಕರಿಸಿದ್ದ. ಈ ವಿಚಾರವಾಗಿ ದಿಬಿಯಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಅದಾದ ನಂತರ ಆತನನ್ನು ಪೊಲೀಸ್ ಕೆಲಸದಿಂದ ಅಮಾನತು ಮಾಡಲಾಗಿತ್ತು.
ಆರೋಪಿ ಜಿತೇಂದ್ರಗೆ ನವೆಂಬರ್ 4ರಂದು ಅಪಘಾತವಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕತ್ಸೆ ಫಲಕಾರಿಯಾಗದೆ ಆತ ನವೆಂಬರ್ 9ರಂದು ಸಾವನ್ನಪ್ಪಿದ್ದಾನೆ. ತನ್ನ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆಯಾಗುವ ಮೊದಲೇ ಆತ ಸತ್ತಿದ್ದಾನೆಂದು ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. (ಏಜೆನ್ಸೀಸ್)