ನ್ಯೂಸ್

ಮನೆಗೆ ನುಗ್ಗಿ ಮಹಿಳೆ ಕೊಲೆ

ಬೆಂಗಳೂರು: ಹಾಡಹಗಲೇ ಮನೆಗೆ ನುಗ್ಗಿ ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿದ ದುಷ್ಕರ್ಮಿಗಳು, ಚಿನ್ನದ ಸರ ದೋಚಿದ್ದಾರೆ.

ಕೆಂಗೇರಿ ಬಳಿಯ ಕೋನಸಂದ್ರ ನಿವಾಸಿ ದಿವ್ಯಾ (36) ಕೊಲೆಯಾದ ದುರ್ದೈವಿ. ಶುಕ್ರವಾರ ಮಧ್ಯಾಹ್ನ 1 ರಿಂದ 2 ಗಂಟೆ ನಡುವೆ ಈ ಕೃತ್ಯ ನಡೆದಿದೆ. ಮೃತಳ ಪತಿ ಗುರುಮೂರ್ತಿ ಮಧ್ಯಾಹ್ನ ಪತ್ನಿಗೆ ಕರೆ ಮಾಡಿದಾಗ, ಕರೆ ಸ್ವೀಕರಿಸಿಲ್ಲ. ಅನುಮಾನಗೊಂಡು ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುಮೂರ್ತಿ ಮತ್ತು ದಿವ್ಯಾ ದಂಪತಿ 2 ವರ್ಷದ ಮಗು ಜತೆ ನೆಲೆಸಿದ್ದಾರೆ. ಖಾಸಗಿ ಕಂಪನಿಯಲ್ಲಿ ಗುರುಮೂರ್ತಿ ಕೆಲಸಕ್ಕೆ ಹೋಗುತ್ತಿದ್ದು, ದಿವ್ಯಾ ಮಗು ನೋಡಿಕೊಂಡು ಮನೆಯಲ್ಲೇ ಇರುತ್ತಿದ್ದರು.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ದಿವ್ಯಾ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮನೆಯಲ್ಲಿ ದಿವ್ಯಾ ಒಬ್ಬರೇ ಇರುವುದರ ಬಗ್ಗೆ ತಿಳಿದು ಕೃತ್ಯ ಎಸೆಗಿರುವ ಸಾಧ್ಯತೆಯಿದೆ. ಕೊಲೆ ಬಳಿಕ ದುಷ್ಕರ್ಮಿಯ ದಿವ್ಯಾ ಕುತ್ತಿಗೆಯಲ್ಲಿದ್ದ ಚಿನ್ನದ ಸರ ದೋಚಿದ್ದಾರೆ.

ಮನೆಯಲ್ಲಿ ದಿವ್ಯಾ ಮತ್ತು 2 ವರ್ಷದ ಮಗುವಿತ್ತು. ಘಟನೆ ನಡೆಯುವಾಗ ಮಗು ನಿದ್ದೆಯಲ್ಲಿತ್ತು. ಗುರುಮೂರ್ತಿ ಮನೆಗೆ ಬಂದಾಗಲೂ ಮಗು ಮಲಗಿತ್ತು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.