ನ್ಯೂಸ್

ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿಕೊಳ್ಳಲು ಒಪ್ಪದ ಸಿಬ್ಬಂದಿ: ರಸ್ತೆಯಲ್ಲೇ ಮಗುವಿಗೆ ಜನ್ಮವಿತ್ತ ತಾಯಿ

ಬಹ್ರೇಚ್​: ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಲು ಬಂದ ಗರ್ಭಿಣಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳದ ಕಾರಣ ಆಕೆ ರಸ್ತೆಯಲ್ಲಿಯೇ ಮಗುವಿಗೆ ಜನ್ಮ ನೀಡಿರುವ ಘಟನೆ ಉತ್ತರ ಪ್ರದೇಶದ ಬಹ್ರೇಚ್​ ನಗರದಲ್ಲಿ ನಡೆದಿದೆ.

ಗರ್ಭಿಣಿ ಮಹಿಳೆಯೊಬ್ಬಳು ನಗರದ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆಂದು ಬಂದಿದ್ದಳು. ಆದರೆ ಆಕೆ ತಮ್ಮ ಆಸ್ಪತ್ರೆಯ ವ್ಯಾಪ್ತಿಗೆ ಸೇರಿದವಳಲ್ಲ ಎನ್ನುವ ಕಾರಣದಿಂದ ಆಸ್ಪತ್ರೆಯಲ್ಲಿ ಆಕೆಯನ್ನು ದಾಖಲು ಮಾಡಿಕೊಳ್ಳಲು ಸಿಬ್ಬಂದಿ ವರ್ಗದವರು ಒಪ್ಪಿಲ್ಲ. ಆಸ್ಪತ್ರೆಯಿಂದ ಹೊರಗೆ ಬಂದ ಮಹಿಳೆಗೆ ರಸ್ತೆಯಲ್ಲಿಯೇ ಹೆರಿಗೆ ಆಗಿದೆ.

ಘಟನೆಯ ಕುರಿತಾಗಿ ಪ್ರತಿಕ್ರಿಯಿಸಿರುವ ಮುಖ್ಯ ವೈದ್ಯಕೀಯ ಅಧೀಕ್ಷಕ ಡಿ.ಕೆ.ಸಿಂಗ್​, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಈ ರೀತಿಯ ಘಟನೆ ಇದೇ ಮೊದಲಲ್ಲ. ಈ ಹಿಂದೆ ದೆಹಲಿಯ ರಾಮ್​ ಮನೋಹರ್​ ಆಸ್ಪತ್ರೆಯಲ್ಲಿ ಬೆಡ್​ ಇಲ್ಲ ಎಂಬ ಕಾರಣಕ್ಕೆ ಗರ್ಭಿಣಿಯನ್ನು ದಾಖಲು ಮಾಡಿಕೊಳ್ಳಲಾಗಿರಲಿಲ್ಲ. ಆಕೆ ಆಸ್ಪತ್ರೆಯ ಕಾರಿಡಾರ್​ನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಳು. (ಏಜೆನ್ಸೀಸ್​)