ನ್ಯೂಸ್

ಕುಡಿವ ನೀರಿನ ಪೈಪ್​ನಲ್ಲಿ ಮಾಂಸದ ಮುದ್ದೆ, ಮೂಳೆ ಪತ್ತೆ! ಬಗೆದಷ್ಟೂ ಜಟಿಲವಾಗ್ತಿದೆ ಯುವತಿ ಕಾಲಿನ ರಹಸ್ಯ...

ರಾಮನಗರ: ಚನ್ನಪಟ್ಟಣದಲ್ಲಿ ಕುಡಿವ ನೀರಿನ ಓವರ್​ಹೆಡ್ ಟ್ಯಾಂಕ್​ನ ಕೊಳವೆಯಲ್ಲಿ ಸತ್ತ ಯುವತಿಯ ಕೊಳೆತ ಕಾಲು ಪತ್ತೆಯಾದ ಪ್ರಕರಣದ ಜಾಡು ಹಿಡಿದು ಹೊರಟವರಿಗೆ ಮೂಳೆ ಹಾಗೂ ಮಾಂಸದ ಮುದ್ದೆ ಸಿಕ್ಕಿದ್ದು, ಬೆಗೆದಷ್ಟು ಜಟಿಲವಾಗುತ್ತಲೇ ಇದೆ ಈ ಕೇಸ್​.

ಅ.9ರಂದು ಚನ್ನಪಟ್ಟಣದ ನ್ಯಾಯಾಲಯಗಳ ಸಂಕೀರ್ಣದ ಸಮೀಪವೇ ಇರುವ ಟ್ಯಾಂಕ್​ನ ನೀರಿನ ಪೈಪ್​ನ​ಲ್ಲಿ ಕೊಳೆತ ಸ್ಥಿತಿಯಲ್ಲಿ ತೊಡೆಭಾಗದಿಂದ ಪಾದದವರೆಗೂ ಕಾಲು ಪತ್ತೆಯಾಗಿತ್ತು. ಈ ಪ್ರಕರಣ ಚನ್ನಪಟ್ಟಣದ ಜನತೆಯಲ್ಲಿ ಆತಂಕ ಉಂಟು ಮಾಡಿದ್ದು ಮಾತ್ರವಲ್ಲದೆ, ಪೊಲೀಸ್ ಇಲಾಖೆಗೆ ಸವಾಲನ್ನೇ ತಂದೊಡ್ಡಿದೆ. ಮೃತದೇಹದ ಉಳಿದ ಭಾಗಕ್ಕಾಗಿ ಹುಡುಕಾಟ ಮುಂದುವರಿದಿದ್ದು, 15 ದಿನಗಳ ಬಳಿಕ ಅಂದರೆ ಇಂದು(ಅ.27) ಕೂಗಳತೆ ದೂರದಲ್ಲಿರುವ ಮಂಗಳವಾರಪೇಟೆಯ 10ನೇ ಕ್ರಾಸ್​ನ ಪೈಪ್​ನಲ್ಲಿ ಮಾಂಸದ ಮುದ್ದೆ ಹಾಗೂ ಮೂಳೆಗಳು ಪತ್ತೆಯಾಗಿದ್ದು, ಸ್ಥಳೀಯರನ್ನ ಬೆಚ್ಚಿಬೀಳಿಸಿದೆ. ಸ್ಥಳಕ್ಕೆ ಪೊಲೀಸ್ ಇಲಾಖೆ ಹಾಗೂ ನಗರಸಭೆ ಹಾಗೂ ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳ ಭೇಟಿ ನೀಡಿದ್ದಾರೆ.

ಸುಮಾರು 23-25 ವರ್ಷ ಪ್ರಾಯದ ಯುವತಿಯದ್ದಾಗಿದೆ. ಅಲ್ಲದೆ ಕಾಲು ದೊರೆತ ಮೂರ್ನಾಲ್ಕು ದಿನಗಳ ಮೊದಲೇ ಯುವತಿಯನ್ನು ಕೊಲೆ ಮಾಡಿ ಆಕೆಯ ಕಾಲು ಕತ್ತರಿಸಿ ಇಲ್ಲಿ ತಂದು ಹಾಕಲಾಗಿದೆ ಎನ್ನಲಾಗಿದೆ. ಅ.9ರಂದು ಟ್ಯಾಂಕ್​ನ ಮೇಲ್ಭಾಗದಲ್ಲಿ ಮಹಿಳೆಯ ಬಟ್ಟೆ, ಚಪ್ಪಲಿ ಹಾಗೂ ಛತ್ರಿಯೊಂದು ಸಿಕ್ಕಿದ್ದು, ಕೆಲದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ವಾಲ್ವ್​ ಓಪನ್ ಮಾಡಿ ನೋಡಿದಾಗ ತೊಡೆಭಾಗದವರೆಗೂ ಒಂದು ಕಾಲು ಮಾತ್ರ ಸಿಕ್ಕಿದ್ದು, ಬೆರಳಲ್ಲಿ ಕಾಲುಂಗರ ಕೂಡ ಇದೆ. ಮತ್ತೊಂದು ಕಾಲು, ಸೇರಿ ದೇಹದ ಉಳಿದ ಭಾಗ ಪತ್ತೆಯಾಗಿರಲಿಲ್ಲ. ಇದೀಗ ಮಾಂಸದ ಮುದ್ದೆ ಹಾಘೂ ಮೂಳೆಗಳು ಪತ್ತೆಯಾಗಿದ್ದು, ನಗರವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.