ಶಿವಮೊಗ್ಗ: ಸಾಗರ ತಾಲೂಕು ಶರಾವತಿ ನದಿಯ ಸಿಗಂದೂರು ಲಾಂಚ್ನಲ್ಲಿದ್ದ ಮಹಿಳೆಯೊಬ್ಬರು ಏಕಾಏಕಿ ಶರಾವತಿ ಹಿನ್ನೀರಿನ ಮಧ್ಯಭಾಗಕ್ಕೆ ಹಾರಿ ಸಾಯಲು ಯತ್ನಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಹಾವೇರಿ ಜಿಲ್ಲೆ ಹಿರೇಕೆರೂರಿನ ರೇಣುಕಾ(46) ಆತ್ಮಹತ್ಯೆಗೆ ಯತ್ನಿಸಿದವರು. ಭಾನುವಾರ ಸಂಜೆ ನದಿಯಲ್ಲಿ ಲಾಂಚ್ ಸಂಚರಿಸುತ್ತಿತ್ತು. ಅದರಲ್ಲಿ ರೇಣುಕಾ ಕೂಡ ಇದ್ದರು. ಹಿನ್ನೀರಿನ ಮಧ್ಯೆ ಲಾಂಚ್ ಬರುತ್ತಿದ್ದಂತೆ ಮಹಿಳೆ ನೀರಿಗೆ ಧುಮುಕಿದ್ದಾಳೆ.
ಕೂಡಲೇ ಲಾಂಚ್ನಲ್ಲಿದ್ದ ಯುವಕರು ಲೈಫ್ ಜಾಕೇಟ್ ಸಹಾಯದಿಂದ ಹಿನ್ನೀರಿಗೆ ಧುಮುಕಿ ಮಹಿಳೆಯನ್ನು ರಕ್ಷಿಸಿದ್ದಾರೆ. ಕೌಟುಂಬಿಕ ಕಾರಣಗಳಿಂದ ನೊಂದು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗುತ್ತಿದೆ. ಹಿನ್ನೀರು ಭಾಗದ ಸುಧಾಕರ್, ಪ್ರಕಾಶ್ ಬೆಳಮಕ್ಕಿ, ಪ್ರಶಾಂತ್ ಸಿಗಂದೂರು ಅವರು ಮಹಿಳೆಯನ್ನ ಕಾಪಾಡಿದವರು. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.