ನ್ಯೂಸ್

ಕಿಟಕಿ ಹಾರಿ ಪತ್ನಿ ಪರಾರಿ ಆಗಿದ್ದಾಳೆ, ಹುಡುಕಿದವರಿಗೆ 5 ಸಾವಿರ ರೂ. ಕೊಡ್ತೀನಿ… ಫೇಸ್​ಬುಕ್​ನಲ್ಲಿ ಪತಿ ಘೋಷಣೆ

arunakunigal

ಕೋಲ್ಕತ: ನನ್ನ ಪತ್ನಿ ಕಿಟಕಿ ಹಾರಿ ಮಗುವಿನ ಜತೆ ಪರಾರಿಯಾಗಿದ್ದಾಳೆ... ಆಕೆಯನ್ನ ಹುಡುಕಿ ಕೊಟ್ಟವರಿಗೆ 5 ಸಾವಿರ ರೂಪಾಯಿ ಕೊಡ್ತೀನಿ... ಪ್ಲೀಸ್​ ಯಾರಾದರೂ ಹುಡುಕಿಕೊಡಿ ಎಂದು ವ್ಯಕ್ತಿಯೊಬ್ಬ ತನ್ನ ಫೇಸ್​ಬುಕ್ ಖಾತೆಯಲ್ಲಿ ಘೋಷಿಸಿದ್ದಾನೆ.

"ನಾನು ವೃತ್ತಿಯಲ್ಲಿ ಬಡಗಿ. ಹೈದರಾಬಾದ್​ನಲ್ಲಿ ಕೆಲಸಕ್ಕೆ ಹೋಗಿದ್ದೆ. ಡಿ.9ರಂದು ಗ್ರಾಮದಿಂದ ನನಗೆ ಕರೆ ಬಂತು. ನಿನ್ನ ಪತ್ನಿ ಮಗುವಿನೊಂದಿಗೆ ಕಿಟಕಿ ಹಾರಿ ಪರಾರಿ ಆಗಿದ್ದಾಳೆ ಎಂದು ತಿಳಿಸಿದ್ರು. ಮರುದಿನವೇ ಊರಿಗೆ ಹೋಗಿ ನೋಡಿದೆ. ಅಲ್ಲಿ ಪತ್ನಿ ಮತ್ತು ಮಗು ಇರಲಿಲ್ಲ. ಅವರಿಬ್ಬರಿಗಾಗಿ ಹುಡುಕಾಡಿದೆ, ಸಿಗಲಿಲ್ಲ. ಪತ್ನಿ ತನ್ನ ಮತ್ತು ಮಗುವಿನ ಎಲ್ಲ ದಾಖಲೆ ಪತ್ರದ ಜತೆಗೆ ಮನೆಯಲ್ಲಿದ್ದ ಚಿನ್ನಾಭರಣವನ್ನೂ ಕೊಂಡೊಯ್ದಿದ್ದಾಳೆ. ನನಗೆ ಸಿಕ್ಕ ಮಾಹಿತಿ ಪ್ರಕಾರ ಡಿ.9ರ ರಾತ್ರಿ ನಂಬರ್​ ಪ್ಲೇಟ್​ ಇಲ್ಲದ ನ್ಯಾನೊ ಕಾರೊಂದು ನನ್ನ ಮನೆ ಸಮೀಪ ಬಂದಿತ್ತಂತೆ. ಮಗುವಿನ ಜತೆ ನನ್ನ ಪತ್ನಿ ಆ ಕಾರಿನಲ್ಲಿ ಹೋಗಿದ್ದಾಳೆ. ಒಬ್ಬಾತ ಆಕೆಗೆ ಮೊಬೈಲ್​ ಕೊಡಿಸಿದ್ದ. ಅದುವೇ ಆಕೆಯನ್ನು ಮನೆಯಿಂದ ಹೊರ ಹೋಗುವಂತೆ ಮಾಡಿದೆ. ಅನಕ್ಷರಸ್ಥಳಾದ ನನ್ನ ಪತ್ನಿಗೆ ಆತ ಆಮಿಷವೊಡ್ಡಿ ಮರುಳುಮಾಡಿ ಕರದೊಯ್ದಿದ್ದಾನೆ...'' ಎಂದು ಅಳಲು ತೋಡಿಕೊಂಡಿರುವ ಪತಿ, 'ನನ್ನ ಮಗು ಮತ್ತು ಪತ್ನಿಯನ್ನು ಪತ್ತೆಮಾಡಿ ಕೊಟ್ಟವರಿಗೆ 5,000 ರೂಪಾಯಿ ಬಹುಮಾನ ನೀಡುವೆ'' ಎಂದು ಘೋಷಿಸಿದ್ದಾನೆ.

ಇಂತಹ ಘಟನೆ ಪಶ್ಚಿಮ ಬಂಗಾಳದ ಪಿಂಗ್ಲ ಗ್ರಾಮದಲ್ಲಿ ನಡೆದಿದ್ದು, ಮಗು-ತಾಯಿ ನಾಪತ್ತೆ ಸಂಬಂಧ ದೂರು ದಾಖಲಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಕಿಟಕಿ ಹಾರಿ ಮಗುವಿನೊಂದಿಗೆ ಪರಾರಿಯಾದ ಪತ್ನಿಯನ್ನು ಹುಡುಕಿ ಕೊಟ್ಟವರಿಗೆ 5,000 ರೂಪಾಯಿ ಇನಾಮು ಕೊಡುವುದಾಗಿ ಘೋಷಣೆ ಮಾಡಿರುವ ಹತಾಶ ಗಂಡನ ಕಂಡ ನೆಟ್ಟಿಗರು ಮರುಗಿದ್ದಾರೆ.