ಕೋಲ್ಕತ್ತಾ: ಶಿಕ್ಷಕರ ನೇಮಕಾತಿಯಲ್ಲಿ ಹಗರಣ ಹಾಗೂ ಆಪ್ತೆಯ ಮನೆಯಲ್ಲಿ ಕೋಟ್ಯಂತರ ರೂ. ನಗದು ಪತ್ತೆಯಾದ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟ ಪಶ್ಚಿಮ ಬಂಗಾಳದ ಪಾರ್ಥ ಚಟರ್ಜಿಯನ್ನು ಸಚಿವ ಸ್ಥಾನದಿಂದ ವಜಾ ಮಾಡಲಾಗಿದೆ.
ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಸಂಪುಟದಲ್ಲಿ ಪಾರ್ಥ ಚಟರ್ಜಿ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿದ್ದರು. ಇದೀಗ ಅವರನ್ನ ಸಚಿವ ಸ್ಥಾನದಿಂದ ತೆಗೆದು ಹಾಕಿದ್ದೇನೆ. ತಪ್ಪಿತಸ್ಥರ ವಿರುದ್ಧ ನನ್ನ ಪಕ್ಷ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಮಮತಾ ಬ್ಯಾನರ್ಜಿ ಗುರುವಾರ ಪ್ರಕಟಿಸಿದ್ದಾರೆ.
ಚಟರ್ಜಿ ಅವರು ಈ ಹಿಂದೆ ಶಿಕ್ಷಣ ಸಚಿವರಾಗಿದ್ದಾಗ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದಿಂದ (ಡಬ್ಲ್ಯುಬಿಎಸ್‌ಎಸ್‌ಸಿ) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ರಮ ನೇಮಕಾತಿಗಳನ್ನು ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಅರ್ಪಿತಾ ಮುಖರ್ಜಿ ಅಲ್ಲದೆ, ಬಂಗಾಳದ ಶಿಕ್ಷಣ ಸಚಿವ ಪರೇಶ್ ಸಿ ಅಧಿಕಾರಿ ಮತ್ತು ಶಾಸಕ ಮಾಣಿಕ್ ಭಟ್ಟಾಚಾರ್ಯ ಸೇರಿದಂತೆ ಇತರರ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಎಸ್‌ಎಸ್‌ಸಿ (ಸ್ಕೂಲ್ ಸರ್ವೀಸ್ ಕಮಿಷನ್) ಹಗರಣ ಸಂಬಂಧ ಇಡಿ ಅಧಿಕಾರಿಗಳು ಜುಲೈ 22ರಂದು ಪಾರ್ಥ ಚಟರ್ಜಿಯ ಆಪ್ತೆ ಅರ್ಪಿತಾ ನಿವಾಸದ ಮೇಲೆ ದಾಳಿ ಮಾಡಿದಾಗ 20 ಕೋಟಿ ರೂಪಾಯಿ ನಗದು ಮತ್ತು 20ಕ್ಕೂ ಹೆಚ್ಚು ಮೊಬೈಲ್ ಫೋನ್ಗಳನ್ನು ಪತ್ತೆಯಾಗಿದ್ದವು. ಈ ಪ್ರಕರಣ ಸಂಬಂಧ ಚಟರ್ಜಿ ಅವರನ್ನು 26 ಗಂಟೆಗಳ ಕಾಲ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು ಅವರನ್ನು ಜು.23ರಂದು ಬಂಧಿಸಿದ್ದಾರೆ. ಆಪ್ತೆಯ ಬಂಧನವೂ ಆಗಿದೆ. ಸಾಕ್ಷ್ಯ ಸಮೇತ ಚಟರ್ಜಿ ಸಿಕ್ಕಿಬಿದ್ದಿದ್ದು, ಮಮತಾ ಬ್ಯಾನರ್ಜಿ ಕೂಡ ಈ ಪ್ರಕರಣದಲ್ಲಿ ತಲೆ ಹಾಕಿಲ್ಲ. ಇದದೀಗ ಅವರನ್ನ ಸಚಿವ ಸ್ಥಾನದಿಂದಲೇ ಕೆಳಗಿಳಿಸಿದ್ದಾರೆ. (ಏಜೆನ್ಸೀಸ್)