ನ್ಯೂಸ್

ರಾಜ್ಯಾದ್ಯಂತ ನಾಳೆಯಿಂದಲೇ ವೀಕೆಂಡ್​ ಕರ್ಫ್ಯೂ ರದ್ದು! ನೈಟ್​ ಕರ್ಫ್ಯೂ ಮುಂದುವರಿಕೆ

arunakunigal

ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದಲೇ ವೀಕೆಂಡ್​ ಕರ್ಫ್ಯೂ ರದ್ದಾಗಲಿದ್ದು, ಎಂದಿನಂತೆ ನೈಟ್​ ಕರ್ಫ್ಯೂ ಮುಂದುವರಿಯಲಿದೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಶುಕ್ರವಾರ ಮಧ್ಯಾಹ್ನ ಎರಡೂವರೆ ತಾಸು ನಡೆದ ಸಭೆಯಲ್ಲಿ ಕರೊನಾ ಮಾರ್ಗಸೂಚಿಗಳಲ್ಲಿ ಬದಲಾವಣೆ ಮತ್ತು ಇನ್ನಿತರ ಕ್ರಮ ತೆಗೆದುಕೊಳ್ಳುವ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್​. ಅಶೋಕ್​, ಕರೊನಾ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆ ಇರುವ ಹಿನ್ನೆಲೆ ವೀಕೆಂಡ್​ ಕರ್ಫ್ಯೂ ರದ್ದು ಮಾಡಲಾಗಿದೆ. ದಯವಿಟ್ಟು ಪ್ರತಿಯೊಬ್ಬರೂ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಿ. ಸಮಸ್ಯೆ ಉಲ್ಬಣಸಿದರೆ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾದರೆ ವೀಕೆಂಡ್​ ಕರ್ಫ್ಯೂ ಜತೆಗೆ ಮತ್ತಷ್ಟು ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ. ಆರೋಗ್ಯದ ಬಗ್ಗೆ ಎಚ್ಚರ ವಹಿಸಿ ಎಂದು ಮನವಿ ಮಾಡಿದರು.

ಸಭೆಯಲ್ಲಿ 12 ತಜ್ಞರು ಪಾಲ್ಗೊಂಡಿದ್ದರು. ಅವರ ಅಭಿಪ್ರಾಯದ ಜತೆಗೆ ಸಚಿವರು, ಇಲಾಖಾವಾರು ಮಾಹಿತಿ ಸಂಗ್ರಹಿಸಿದ ಸಿಎಂ ವಾರಾಂತ್ಯದ ಕರ್ಫ್ಯೂ ರದ್ದು ಮಾಡಿದ್ದಾರೆ. ಆಸ್ಪತ್ರೆಗೆ ಸೇರುವವರ ಪ್ರಮಾಣ ಶೇ.5ಕ್ಕಿಂತ ಹೆಚ್ಚಾದರೆ ಮತ್ತೆ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲಾಗುತ್ತೆ ಎಂದು ಅಶೋಕ್​ ಎಚ್ಚರಿಸಿದರು. ರಾತ್ರಿ ಕರ್ಫ್ಯೂ ಸೇರಿದಂತೆ ಉಳಿದ ನಿರ್ಬಂಧಗಳು ಮುಂದುವರಿಕೆ ಆಗಲಿವೆ. ಧರಣಿ, ಪ್ರತಿಭಟನೆ, ರ್ಯಾಲಿ ನಡೆಸುವಂತಿಲ್ಲ. ಇದು ಇಡೀ ಕರ್ನಾಟಕಕ್ಕೆ ಅನ್ವಯ ಎಂದರು.