ಕೋಲಾರದ ಜಿಲ್ಲಾಸ್ಪತ್ರೆಗೆ ಗುರುವಾರ ಭೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ರೋಗಿಗಳೊಂದಿಗೆ ಚರ್ಚಿಸಿದರು. 
ನ್ಯೂಸ್

ಜಿಲ್ಲಾಸ್ಪತ್ರೆಯಲ್ಲಿ ಅವ್ಯವಸ್ಥೆಯ ದರ್ಶನ

ಕೋಲಾರ: ನಗರದ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಗುರುವಾರ ಭೇಟಿ ನೀಡಿ, ವ್ಯವಸ್ಥೆ ಪರಿಶೀಲಿಸಿದ ಜತೆಗೆ ರೋಗಿಗಳ ಸಮಸ್ಯೆ ಆಲಿಸಿದರು.

ಆಸ್ಪತ್ರೆ ಆವರಣದಲ್ಲಿ ಕುಳಿತಿದ್ದ ಹೊರ ರೋಗಿಗಳ ಕ್ಷೇಮ ವಿಚಾರಿಸಿ ವಿಶೇಷ ವಾರ್ಡ್, ಮಹಿಳಾ ವಾರ್ಡ್, ತಾಯಿ ಮತ್ತು ಮಕ್ಕಳ ತೀವ್ರ ನಿಗಾ ಘಟಕ, ಪ್ರಸೂತಿ ವಿಭಾಗದಲ್ಲಿ ಪರಿಶೀಲಿಸಿದರು.
ಈ ವೇಳೆ ಆಸ್ಪತ್ರೆಯಲ್ಲಿ ಕಂಡು ಬಂದ ಅನೈರ್ಮಲ್ಯ, ವಿಲೇವಾರಿಯಾದ ಕಸದ ಬುಟ್ಟಿಗಳು ಹಾಗೂ ದುರ್ವಾಸನೆ, ಒಳ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ನೀಡದಿರುವುದು, ಶೌಚಗೃಹಗಳಿಗೆ ಬೀಗ ಹಾಕಿದನ್ನು ಕಂಡು ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ಮಮತಾ, ಶುಶ್ರೂಷಾಧಿಕಾರಿ ವಿಜಯಮ್ಮ ಹಾಗೂ ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆಗೆ ದಾಖಲಾಗಿ ವಾರ ಕಳೆದಿದೆ, ವಿಶೇಷ ವಾರ್ಡಿನಲ್ಲಿ ಸ್ವಚ್ಛತೆ ಮಾಡಿಲ್ಲ, ನಾನೇ ಖುದ್ದು ಸ್ವಚ್ಛತೆ ಮಾಡಿಕೊಂಡಿದ್ದೇನೆ. ಕಸದ ಬುಟ್ಟಿಯಲ್ಲಿ ತ್ಯಾಜ್ಯ ತುಂಬಿ ದುರ್ನಾತ ಬೀರುತ್ತಿದೆ. ಶೌಚಗೃಹ ಬಾಗಿಲು ಹಾಳಾಗಿವೆ. ಸಮರ್ಪಕವಾಗಿ ನೀರು ಬರುವುದಿಲ್ಲ ಎಂದು ಮಾಲೂರಿನ ನಿವಾಸಿ, ಅಧ್ಯಕ್ಷೆಯ ಗಮನಕ್ಕೆ ತಂದರು. ಆಗ, ಗರಂ ಆದ ನಾಗಲಕ್ಷ್ಮೀ ಚೌಧರಿ, ಏನಿದು?, ಕೇಳಿದ್ದಕ್ಕೆ ಏನೂ ಸಮಸ್ಯೆಯಿಲ್ಲ ಎಂದು ಹೇಳುತ್ತೀರಿ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿ.ಎಸ್.ಡಾ.ಮಮತಾ, ರಿಪೇರಿ ಕೆಲಸ ಮಾಡಿಸಲು ಹಣ ಬಂದಿದೆ, ಶೀಘ್ರದಲ್ಲೇ ಕೆಲಸ ಪ್ರಾರಂಭಿಸಲಾಗುವುದು ಎಂದು ಸಮಜಾಯಿಷಿ ನೀಡಿದರು. ಸಣ್ಣಪುಟ್ಟ ಸಮಸ್ಯೆಯಾದರೆ ಪರವಾಗಿಲ್ಲ, ನೀರು ಬರುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಆಗಮಿಸಿ ಮಕ್ಕಳ ತೀವ್ರ ನಿಗಾ ಘಟಕ ವೀಕ್ಷಿಸಿದ್ದು, ಕುಡಿಯುವ ನೀರು ಖಾಲಿ ಆಗಿತ್ತು, ಆರ್‌ಒ ಘಟಕದಲ್ಲಿ ಅತಿಯಾಗಿ ಬಿಸಿ ನೀರು ಬರುತ್ತಿದ್ದುದನ್ನು ಕಂಡು ಅಧಿಕಾರಿಗಳು, ಸಿಬ್ಬಂದಿ ಗಂಭೀರವಾಗಿ ಕೆಲಸ ಮಾಡಿ, ಇಲ್ಲಿಗೆ ಬಹುತೇಕವಾಗಿ ಬಡ ರೋಗಿಗಳೇ ಚಿಕಿತ್ಸೆಗಾಗಿ ಬರುತ್ತಾರೆ. ಕನಿಷ್ಠ ಕುಡಿಯುವ ನೀರು ಕಲ್ಪಿಸಿಲ್ಲ ಎಂದರೆ ಏನರ್ಥ ಎಂದು ಕಿಡಿಕಾರಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ಮಮತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾರಾಯಣಸ್ವಾಮಿ ಇತರರಿದ್ದರು.

ಕುಡಿಯುವ ನೀರು ಸಹ ಇಲ್ಲ
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ, ಆಸ್ಪತ್ರೆಯ ವೀಕ್ಷಣೆ ಸಮಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಕಂಡು ಬಂದಿದ್ದು, ಸರ್ಕಾರದ ಮಟ್ಟದಲ್ಲಿ ಆಗಬೇಕಾಗಿರುವ ಕೆಲಸಗಳಿಗೆ ವರದಿ ನೀಡಿ ಪರಿಹಾರ ಕಲ್ಪಿಸಲಾಗುವುದು. ವೈದ್ಯರಿಂದ ಉತ್ತಮ ಸೇವೆ ಸಿಗುತ್ತಿದೆ, ಆದರೆ ಹಾಸಿಗೆಗಳ ಸಾಮರ್ಥ್ಯ ಹೆಚ್ಚಿದ್ದು, ಅದಕ್ಕೆ ತಕ್ಕಂತೆ ವೈದ್ಯರು, ಸಿಬ್ಬಂದಿ, ಶುಶ್ರೂಷಕಿಯರ ಕೊರತೆಯಿದೆ. ಹೆಚ್ಚಿನ ರೋಗಿಗಳು ಬರುತ್ತಿದ್ದಾರೆ, ಆದರೆ ಅದೇ ವೈದ್ಯರು ಕೆಲಸ ಮಾಡುತ್ತಿದ್ದಾರೆ. ಇನ್ನೂ ಹೆಚ್ಚು ವೈದ್ಯರನ್ನು ಒದಗಿಸುವಂತೆ ಮನವಿ ಮಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಮುಖ್ಯವಾಗಿ ಸ್ವಚ್ಛತೆ ಇರಬೇಕು. ಕುಡಿಯುವ ನೀರು ಕಲ್ಪಿಸಿಲ್ಲ ಎಂದರೆ ಸಹಿಸಲಾಗುವುದಿಲ್ಲ. ಬಿಸಿನೀರಿನ ವ್ಯವಸ್ಥೆ ಇಲ್ಲ, ಇದೆಲ್ಲ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಸೂಚಿಸಲಾಗಿದೆ. ಇಲ್ಲಿನ ಹಂತದಲ್ಲಿ ಆಗದಿದ್ದರೆ ಸರ್ಕಾರದ ಗಮನಕ್ಕೆ ತಂದು ಬಗೆಹರಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಬಾಕ್ಸ್..

  • ಬಾಕಿ ವೇತನ ಪಾವತಿಗೆ ತಾಕೀತು
    ಹೊರಗುತ್ತಿಗೆ ನೌಕರರು, ಶುಶ್ರೂಷಕಿಯರು ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು. 6 ತಿಂಗಳಿಂದ ವೇತನ ಬಾಕಿ ಹಾಗೂ ಕಡಿಮೆ ಸಂಬಳ ನೀಡುತ್ತಿದ್ದು, ಕುಟುಂಬ ನಿರ್ವಹಣೆ, ಮಕ್ಕಳನ್ನು ಓದಿಸಲು ಆಗುತ್ತಿಲ್ಲ. ವೇತನ ಹೆಚ್ಚಳ ಮಾಡಬೇಕು ಎಂದು ಹಲವಾರು ವರ್ಷಗಳಿಂದ ಅಽಕಾರಿಗಳಿಗೆ ಮನವಿ ಸಲ್ಲಿಸಿದರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ನೌಕರರು ಅಳಲು ತೋಡಿಕೊಂಡರು.
    ಇದಕ್ಕೆ ಸ್ಪಂದಿಸಿದ ನಾಗಲಕ್ಷ್ಮೀ, ಡಿಎಚ್‌ಒ ಅವರಿಂದ ಮಾಹಿತಿ ಪಡೆದರು. ಕೂಡಲೇ ವ್ಯವಸ್ಥಾಪಕರಿಗೆ ದೂರವಾಣಿ ಕರೆ ಮಾಡಿ, ಏಕೆ ವೇತನ ಪಾವತಿಸಿಲ್ಲ, ನಿಮಗೆ ಒಂದು ತಿಂಗಳು ಸಂಬಳ ಆಗಿಲ್ಲ ಎಂದರೆ ಎಷ್ಟು ತೊಂದರೆ ಆಗುತ್ತದೆ. ಕೂಡಲೇ ಪಾವತಿ ಮಾಡಬೇಕು. ಈ ಬಗ್ಗೆ ವರದಿ ನೀಡಬೇಕು ಎಂದು ತಾಕೀತು ಮಾಡಿದರು.
    ಆಸ್ಪತ್ರೆಗಳಲ್ಲಿ ಮುಖ್ಯವಾಗಿ ರಕ್ಷಣೆ ಬಹಳ ಮುಖ್ಯ. ಕೂಡಲೇ ಭದ್ರತಾ ವ್ಯವಸ್ಥೆ ಮಾಡುವಂತೆ ಡಿಎಚ್‌ಒಗೆ ಸೂಚಿಚಿಸಿದರು.