ಬೆಂಗಳೂರು: ವಿದ್ಯಾರ್ಥಿಗಳ ಗುಂಪೊಂದು ಶಾಲಾ ಸಮವಸ್ತ್ರದಲ್ಲೇ ಧೂಮಪಾನ ಮಾಡಿರುವ ಫೋಟೋ ವೈರಲ್ ಆಗಿದ್ದು, ಸಾಕಷ್ಟು ಆತಂಕವನ್ನು ಸೃಷ್ಟಿಸಿದೆ.
ಒಂದೆಡೆ ನಗರದ ಪೊಲೀಸರು ಶಾಲಾ-ಕಾಲೇಜುಗಳಿಗೆ ತೆರಳಿ ಧೂಮಪಾನ, ಮಾದಕ ವಸ್ತು ವ್ಯಸನದಂತಹ ದುಶ್ಚಟಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ, ಮತ್ತೊಂದೆಡೆ ಪೊಲೀಸರ ಬುದ್ಧಿ ಮಾತಿಗೂ ತಲೆಕೆಡಿಸಿಕೊಳ್ಳದ ಕೆಲ ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ.
ಪೆನ್ನು, ಬುಕ್ ಹಿಡಿಯಬೇಕಾದ ಕೈಗಳಲ್ಲಿ ಸಿಗರೇಟು ಹಿಡಿದಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಪೊಲೀಸರು ಕ್ರಮ ಜರುಗಿಸಬೇಕೆಂಬ ಒತ್ತಾಯಿಸಿದ್ದಾರೆ.
ವಿವಿ ಪುರಂ ಜೈನ್ ಟೆಂಪಲ್ ಸಮೀಪದ ಪೋಲರ್ ಬೇರ್ ಐಸ್ ಕ್ರೀಂ ಪಾರ್ಲರ್ ಹಿಂಭಾಗದಲ್ಲಿ ವಿದ್ಯಾರ್ಥಿಗಳ ಗುಂಪೊಂದು ಶಾಲಾ ಸಮವಸ್ತ್ರದಲ್ಲೇ ಧೂಮಪಾನ ಮಾಡಿದೆ. ವಿದ್ಯಾರ್ಥಿಗಳು ಶಾಲೆಗೆ ಗೈರಾಗಿ ಸಿಗರೇಟ್ ಸೇದುತ್ತಾ ಧೂಮಪಾನದ ಚಟಕ್ಕೆ ಬಿದ್ದಿರುವ ಈ ೆಟೊವನ್ನು ಕೆ.ಅನಂತ ಎಂಬುವವರು ಮೊಬೈಲ್ನಲ್ಲಿ ಸೆರೆ ಹಿಡಿದು ನಗರ ಪೊಲೀಸರ ಪೇಜ್ಗೆ ಟ್ಯಾಗ್ ಮಾಡಿದ್ದಾರೆ. ವಿದ್ಯಾರ್ಥಿಗಳ ಈ ದುಶ್ಚಟ ತಡೆಗೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಮನವಿ ಮಾಡಿದ್ದಾರೆ. ಇದಕ್ಕೆ ಟ್ವಿಟರ್‌ನಲ್ಲೇ ಪ್ರತಿಕ್ರಿಯಿಸಿರುವ ನಗರ ಪೊಲೀಸರು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲು ವಿವಿ ಪುರ ಠಾಣೆ ಪೊಲೀಸರಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಹದಿಹರೆಯಕ್ಕೆ ಕಾಲಿಡುವ ಮುನ್ನವೇ ಪ್ರೌಢ ವಯಸ್ಕರ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ಈ ಹಿಂದೆ ಆತಂಕ ವ್ಯಕ್ತವಾಗಿತ್ತು. ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲನೆ ವೇಳೆ ಕಾಂಡೋಮ್, ಗರ್ಭ ನಿರೋಧಕ ಮಾತ್ರೆಗಳು ಸಿಕ್ಕಿದ್ದ ಪ್ರಕರಣಗಳು ಇತ್ತೀಚೆಗೆ ವರದಿಯಾಗಿದ್ದವು. ನಗರದ ಖಾಸಗಿ ಶಾಲೆಯೊಂದರ ೭ ವರ್ಷದ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ಪತ್ತೆಯಾಗಿತ್ತು. ವಿದ್ಯಾರ್ಥಿಗಳು ಪಾಲಕರಿಗೆ ತಿಳಿಯದಂತೆ ಎಲೆಕ್ಟ್ರಾನಿಕ್ ಸಿಗರೇಟ್ ಸೇದುತ್ತಿದ್ದರು. ಇದೀಗ ವಿದ್ಯಾರ್ಥಿಗಳು ರಾಜರೋಷವಾಗಿ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದುತ್ತಿರುವುದು ಕಂಡುಬಂದಿದೆ. ಧೂಮಪಾನಕ್ಕೆ ಮೂವರು ಬಾಲಕಿಯರಿಗೆ ಇಬ್ಬರು ಬಾಲಕರು ಸಾಥ್ ಕೊಟ್ಟಿದ್ದಾರೆ. ಐವರು ವಿದ್ಯಾರ್ಥಿಗಳು ಶಾಲಾ ಬ್ಯಾಗ್ ಹಾಕಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇದುತ್ತಾ ನಿಂತಿದ್ದಾರೆ.
ಮಕ್ಕಳು ಧೂಮಪಾನದ ದುಶ್ಚಟಕ್ಕೆ ಬಲಿಯಾಗದಂತೆ ಕಠಿಣ ಕಾನೂನು ಬೇಕು ಎಂದು ಶಿಕ್ಷಕರು ಹಾಗೂ ಪಾಲಕರು ಆಗ್ರಹಿಸಿದ್ದಾರೆ. ಮಕ್ಕಳ ಕೈಗೆ ಸಿಗರೇಟ್ ಸಿಗದಂತೆ ಮತ್ತು ಅಂಗಡಿಯವರು ಮಕ್ಕಳಿಗೆ ಸಿಗರೇಟ್ ಸೇರಿ ತಂಬಾಕು ವಸ್ತುಗಳನ್ನು ಮಾರಾಟ ಮಾಡದಂತೆ ಕ್ರಮ ಕೈಗೊಳ್ಳಬೇಕು. ಶಿಕ್ಷಣ ಇಲಾಖೆ, ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ನೆಟ್ಟಿಗರು ಮನವಿ ಮಾಡಿದ್ದಾರೆ.