ನ್ಯೂಸ್

ಜೆಡಿಎಸ್​ ಪರ ಅನಂತಕುಮಾರ್ ಪುತ್ರಿ ಬ್ಯಾಟಿಂಗ್​: ರಾಜ್ಯ ರಾಜಕೀಯದಲ್ಲಿ ಸಂಚಲನ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಮತ್ತು ರಾಜ್ಯ ಬಿಜೆಪಿ ನಾಯಕತ್ವ ವಿಚಾರ ಕಳೆದೊಂದು ವಾರದಿಂದ ಭಾರೀ ಸಂಚಲನ ಮೂಡಿಸಿತ್ತು. ಇದೀಗ ನೂತನ ಸಿಎಂ ಅಧಿಕಾರ ಸ್ವೀಕರಿಸಿದ್ದು, ಸಂಪುಟ ವಿಸ್ತರಣೆಯೊಂದು ಆಗಿಬಿಟ್ಟರೆ ಎಲ್ಲವೂ ತಿಳಿಯಾಗಲಿದೆ ಎನ್ನುತ್ತಿರುವುವಾಗಲೇ ವಿಜೇತಾ ಅನಂತಕುಮಾರ್​ ಅವರ ಟ್ವೀಟ್​ ಚರ್ಚೆಗೆ ಗ್ರಾಸವಾಗಿದೆ.

ಕೇಂದ್ರದ ಮಾಜಿ ಸಚಿವ ದಿವಗಂತ ಅನಂತಕುಮಾರ್​ ಅವರ ಪುತ್ರಿ ವಿಜೇತಾ, 'ಕರ್ನಾಟಕ ರಾಜಕೀಯ ನಿಜಕ್ಕೂ ಆಸಕ್ತಿದಾಯಕ ಏಕೆ? ಜೆಡಿಎಸ್​ ಇನ್ನೂ ಪ್ರಬಲ ರಾಜಕೀಯ ಶಕ್ತಿಯಾಗುತ್ತಿದೆ..' ಎಂದು ಟ್ವೀಟ್​ ಮಾಡಿಕೊಂಡಿದ್ದಾರೆ. ಬಿಜೆಪಿಯ ಪ್ರಭಾವಿ ನಾಯಕರಾಗಿದ್ದ ಅನಂತಕುಮಾರ್​ರ ಮಗಳು ಜೆಡಿಎಸ್​ ಪರ ಬ್ಯಾಟಿಂಗ್​ ಮಾಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ್​ರ ಪತ್ನಿ ತೇಜಸ್ವಿನಿ ಅನಂತಕುಮಾರ್​ ಅವರಿಗೆ ಟಿಕೆಟ್​ ನೀಡಲಾಗುತ್ತೆ ಎಂದೇ ನಿರೀಕ್ಷಿಸಲಾಗಿತ್ತು. ಅಂತಿಮ ಕ್ಷಣದಲ್ಲಿ ಬಿ ಫಾರಂ ಸೇರಿದ್ದು ತೇಜಸ್ವಿ ಸೂರ್ಯ ಕೈಗೆ. ತಂದೆ ನಿಧನದ ಬಳಿಕ ಬಿಜೆಪಿ, ತಮ್ಮ ಕುಟುಂಬದವರನ್ನು ಕಡೆಗಣಿಸುತ್ತಿದೆ ಎಂಬುದಕ್ಕೆ ಪುಷ್ಟಿ ನೀಡುತ್ತಿದೆ ವಿಜೇತಾ ಅವರ ಈ ಟ್ವೀಟ್​.

ಹಲವರು ವಿಜೇತಾ ಅವರ ಈ ಹೇಳಿಕೆ ಕಂಡು ಜೆಡಿಎಸ್​ಗೆ ಬರುತ್ತಾರೆ ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ರಾಜ್ಯ ಬಿಜೆಪಿಯಲ್ಲಿನ ಈ ಬೆಳವಣಿಗೆಗಳು ಪ್ರಾದೇಶಿಕ ಪಕ್ಷ ಜೆಡಿಎಸ್​ ಪಾಲಿಗೆ ವರವಾಗಿ ಪರಿಣಮಿಸುತ್ತಿದೆ. ಇದನ್ನು ಮನಗಂಡ ವಿಜೇತಾ ಅವರು ಸತ್ಯವನ್ನೇ ಹೇಳಿದ್ದಾರೆ ಎನ್ನುತ್ತಿದ್ದಾರೆ.