ಚಿಕ್ಕಮಗಳೂರಿನಲ್ಲಿ ನ್ಯೂ ಇಂಡಿಯನ್ ಕ್ರಾಫ್ಟ್ ಎಕ್ಸ್‌ಪೋ ಮಳಿಗೆಯನ್ನು ಶಾಸಕ ಎಚ್.ಡಿ.ತಮ್ಮಯ್ಯ ಉದ್ಘಾಟಿಸಿದರು. ಅನ್ಸರ್ ಆಲಿ, ಡಾ. ಡಿ.ಎಲ್.ವಿಜಯ್‌ಕುಮಾರ್, ಎ.ಎನ್.ಮಹೇಶ್, ಶಿವಾನಂದಸ್ವಾಮಿ, ವರಸಿದ್ಧಿ ವೇಣುಗೋಪಾಲ್ ಇತರರಿದ್ದರು. 
ನ್ಯೂಸ್

ಒಂದೇ ಸೂರಿನಡಿ ವೈವಿಧ್ಯಮಯ ಕರಕುಶಲ ವಸ್ತುಗಳು

ಚಿಕ್ಕಮಗಳೂರು: ವಿವಿಧ ರಾಜ್ಯಗಳ ಕರಕುಶಲ ವಸ್ತುಗಳು ಒಂದೇ ಸೂರಿನಡಿ ರಿಯಾಯಿತಿ ದರದಲ್ಲಿ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ನಗರದ ರತ್ನಗಿರಿ ರಸ್ತೆ ಸಮೀಪದ ರೇಣುಕಾಚಾರ್ಯ ಕಲ್ಯಾಣ ಮಂಟಪ ಎದುರು ಕಲಾಸುರಭಿ ಸಹಯೋಗದಲ್ಲಿ ಏರ್ಪಡಿಸಿದ್ದ ನ್ಯೂ ಇಂಡಿಯನ್ ಕ್ರಾಫ್ಟ್ ಎಕ್ಸ್‌ಪೋ ಮಳಿಗೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ದೇಶದ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ತಯಾರಾಗಿರುವ ಗುಣಮಟ್ಟದ ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಪ್ರಾರಂಭಗೊಂಡಿದೆ. ಇವುಗಳ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಅನ್ಸರ್‌ಆಲಿ ಹಾಗೂ ಪಾಲುದಾರರು ರಾಜ್ಯಾದ್ಯಂತ ಸಂಚರಿಸಿ ಕ್ರಾಫ್ಟ್ ಮೇಳಗಳನ್ನು ಆಯೋಜಿಸಿ ರಿಯಾಯಿತಿ ದರದಲ್ಲಿ ವಸ್ತುಗಳ ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದು ಸಂತಸದ ಸಂಗತಿ. ಮೇಳದಲ್ಲಿ ಬಟ್ಟೆ, ಕರಕುಶಲ ವಸ್ತುಗಳು, ಆಹಾರ ಪದಾರ್ಥಗಳು, ಉಡುಗೆ ಸೇರಿದಂತೆ ವಿಭಿನ್ನ ರೀತಿಯ ವಸ್ತುಗಳಿವೆ ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ. ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ, ಗೃಹಿಣಿಯರಿಗೆ ಗುಣಮಟ್ಟದ ವಸ್ತುಗಳನ್ನು ಒಂದೇ ಸೂರಿನಡಿ ಕಲ್ಪಿಸಿರುವುದು ಸಂತಸದ ವಿಷಯ ಎಂದರು.
ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಎಕ್ಸ್‌ಪೋ ಮೇಳದಲ್ಲಿ ಇಲ್ಲದಿರುವ ವಸ್ತುಗಳಿಲ್ಲ. ಎಕ್ಸ್‌ಪೋ ಮೇಳದಲ್ಲಿ ವೈವಿಧ್ಯಮಯ ವಸ್ತುಗಳು ಮಾರಾಟಕ್ಕಿದ್ದು ವಿವಿಧ ಖಾದ್ಯಗಳ ಕೌಂಟರ್‌ನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ನ್ಯೂ ಇಂಡಿಯನ್ ಕ್ರಾಫ್ಟ್ ಎಕ್ಸ್‌ಪೋ ಮಾಲೀಕ ಅನ್ಸರ್ ಆಲಿ ಮಾತನಾಡಿ, ಸುಮಾರು ಒಂದು ತಿಂಗಳ ಕಾಲ ನಡೆಯಲಿರುವ ಎಕ್ಸ್ ಪೋ ಮೇಳದಲ್ಲಿ ಕೈಮಗ್ಗ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟವಿದೆ. ಮಹಿಳೆಯರು, ಮಕ್ಕಳು ಹಾಗೂ ಪುರುಷರಿಗೆ ಉಪಯೋಗವಾಗುವ ವಿವಿಧ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಮಾರಾಟಕ್ಕಿದ್ದು ಪ್ರವೇಶ ಉಚಿತವಾಗಿದೆ ಎಂದು ತಿಳಿಸಿದರು.
ಮೇಳದಲ್ಲಿ ಜುವೆಲ್ಲರ್, ಶಾಂತಿನಿಕೇತನ್ ಬ್ಯಾಗ್ಸ್, ಚನ್ನಪಟ್ಟಣ ಗೊಂಬೆಗಳು, ಬಗಲ್ಪುರ್ ಡ್ರೆಸ್ ಮೆಟಿರಿಯಲ್ಸ್, ಕಾಶ್ಮೀರ ಡ್ರೆಸ್ ಮತ್ತು ಸೀರೆಗಳು, ಉಡನ್ ಸ್ಟ್ಯಾಟು, ಫೋಟೋ ಫೇಮ್, ಜೈಪುರ ಬೆಡ್‌ಶೀಟ್, ದೆಹಲಿ, ಮುಂಬೈ, ರಾಜಸ್ತಾನಿ ಡ್ರೆಸ್ ಸೇರಿದಂತೆ ವಿವಿಧ ಬಗೆಯ ವಸ್ತುಗಳು ಒಂದೇ ಸೂರಿನಡಿ ಲಭ್ಯವಿದೆ ಎಂದರು.
ರಾಜ್ಯ ಪರಿಸರ ತಜ್ಞ ಮೌಲ್ಯಮಾಪನ ಸಮಿತಿ ಅಧ್ಯಕ್ಷ ಎ.ಎನ್.ಮಹೇಶ್, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮಹಮ್ಮದ್ ನಯಾಜ್, ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್, ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ನಗರಸಭಾ ಸದಸ್ಯರಾದ ಮುನೀರ್ ಅಹ್ಮದ್, ಖಲಂದರ್, ಶಾದಬ್, ಲಕ್ಷ್ಮಣ್, ಪ್ರಮುಖರಾದ ಪ್ರಕಾಶ್, ತನೋಜ್‌ನಾಯ್ಡು ಇತರರಿದ್ದರು.