ನ್ಯೂಸ್

ಇಂದು ವೈಕುಂಠ ಏಕಾದಶಿ: ದೇವರ ನಾಮ ಭಜಿಸುತ್ತಲೇ ವೈಂಕುಠ ದ್ವಾರ ಪ್ರವೇಶಿಸುತ್ತಿರುವ ಭಕ್ತರು

arunakunigal

ಬೆಂಗಳೂರು: ವೈಕುಂಠ ಏಕಾದಶಿ ಪ್ರಯುಕ್ತ ಇಂದು ರಾಜ್ಯಾದ್ಯಂತ ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ವೈಂಕುಠ ದ್ವಾರಗಳೊಂದಿಗೆ ವಿಶೇಷ ಪೂಜೆ ನಡೆಯುತ್ತಿದೆ.

ಕರೊನಾ ಹಿನ್ನೆಲೆ ಕೆಲ ದೇವಾಲಯಗಳಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧವಿದೆಯಾದರೂ ಹಲವು ದೇಗುಲಗಳಲ್ಲಿ ಮುಂಜಾಗ್ರತಾ ಕ್ರಮದೊಂದಿಗೆ ಕಡಿಮೆ ಸಂಖ್ಯೆಯಲ್ಲಿ ಭಕ್ತರ ಪ್ರವೇಶಕ್ಕೆ  ಅನುವು ಮಾಡಿಕೊಡಲಾಗಿದೆ.

ದಾವಣಗೆರೆ ಜಿಲ್ಲೆಯ ಹರಿಹರೇಶ್ವರ: ಶೈವ-ವೈಷ್ಣವರ ಭಾವೈಕ್ಯ ಕ್ಷೇತ್ರ ಹರಿಹರ. ವಿಷ್ಣು-ಮಹೇಶ್ವರರ ಸಮ್ಮಿಳಿತ ಅವತಾರ ಹರಿಹರೇಶ್ವರ. ವೈಕುಂಠ ಏಕಾದಶಿ ಪ್ರಯುಕ್ತ ಇಲ್ಲಿನ ಹರಿಹರೇಶ್ವರನಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಗಿದೆ. ಮಾಗಿಯ‌ ಕೊರೆವ ಚಳಿಯನ್ನೂ ಲೆಕ್ಕಿಸದೆ ಭಕ್ತ ಸಮೂಹ ದೇಗುಲಕ್ಕೆ ಬಂದು ವೈಕುಂಠ ದ್ವಾರ ಪ್ರವೇಶಿಸುತ್ತಿದ್ದ ದೃಶ್ಯ ಕಂಡು ಬಂತು.

ಮಂತ್ರಾಲಯದಲ್ಲಿ ವೈಕುಂಠ ದ್ವಾರ: ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲೂ ವೈಕುಂಠ ಏಕಾದಶಿ ಹಿನ್ನೆಲೆ ವಿಶೇಷ ಪೂಜೆ ನಡೆಯುತ್ತಿದೆ. ಶ್ರೀನಿವಾಸ ದೇವಸ್ಥಾನಕ್ಕೆ ವಿಶೇಷಾಲಂಕಾರ ಮಾಡಲಾಗಿದ್ದು, ವೈಕುಂಠ ದ್ವಾರ ನಿರ್ಮಿಸಲಾಗಿದೆ. ರಾಯರ ದರ್ಶನಕ್ಕೆ ಬಂದಿದ್ದ ಭಕ್ತರಿಗೆ ಅನುಗ್ರಹ ಸಂದೇಶ ನೀಡಿ ಶ್ರೀ ಸುಭುದೇಂದ್ರ ತೀರ್ಥರು ಆಶೀರ್ವದಿಸಿದರು.

ಆನೇಕಲ್​ನ ಚನ್ನಕೇಶವ ದೇಗುಲ: ಆನೇಕಲ್ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಚನ್ನಕೇಶವ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರುತ್ತಿದೆ. ಸರ್ಕಾರದ ಕೋವಿಡ್ ಮಾರ್ಗಸೂಚಿಯನ್ನ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ದೇವಾಲಯಕ್ಕೆ ಆಗಮಿಸುವ ಭಕ್ತರು ಕಡ್ಡಾಯವಾಗಿ ಮಾಸ್ಕ್​ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ದೇವಾಲಯದ ಆಡಳಿತ ಮಂಡಳಿಯವರು ಅಲ್ಲಲ್ಲಿ ನಿಂತು ಭಕ್ತರಿಗೆ ಸಲಹೆ ನೀಡುತ್ತಲೇ ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಬಾಗಲಕೋಟೆಯ ನವನಗರದ ಬಾಲಾಜಿ ದೇವಸ್ಥಾನ: ಬಾಗಲಕೋಟೆಯ ನವನಗರದ ಬಾಲಾಜಿ ದೇವಸ್ಥಾನಕ್ಕೆ ಬೆಳಗ್ಗೆಯಿಂದಲೇ ಭಕ್ತರು ಆಗಮಿಸುತ್ತಿದ್ದಾರೆ. ಭಕ್ತರ ದರ್ಶನಕ್ಕೆ ಹೊರಗಡೆ ಉತ್ಸವ ಮೂರ್ತಿ ಇಡಲಾಗಿದ್ದು, ಮತ್ತೊಂದು ಮೂರ್ತಿಯನ್ನು ಉತ್ತರ ಭಾಗಕ್ಕೆ ಬಾಲಾಜಿಯ ಪಾದದ ಕೆಳಗಡೆ ಹಾಯ್ದು ದರ್ಶನಕ್ಕೆ ಅವಕಾಶ ಮಾಡಲಾಗಿದೆ.