ಬೆಂಗಳೂರು: ನಿರುಪಯುಕ್ತ ಗುಂಡುಗಳಲ್ಲಿ (ಕೋಕಾ) ಹಿತ್ತಾಳೆ ಬೇರ್ಪಡಿಸುವಾಗ ಗನ್ ಪೌಡರ್ ಸಿಡಿದು ರಾಜ್ಯ ಸಶಸ ಮೀಸಲು ಪಡೆ (ಕೆಎಸ್‌ಆರ್‌ಪಿ) ಇಬ್ಬರು ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದಾರೆ.
ಕೆಎಸ್‌ಆರ್‌ಪಿ 9ನೇ ಬೆಟಾಲಿಯನ್‌ನ ರಾಮಲಿಂಗ ಮತ್ತು ಚಂದ್ರಶೇಖರ್ ಗಣಿ ಗಾಯಗೊಂಡವರು. ಕೂಡ್ಲು ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆದಿದ್ದಾರೆ. ಗುಂಡಿನ ಚೂರು ಕಾಲಿಗೆ ಹೊಕ್ಕಿ ಗಂಭೀರವಾಗಿ ಗಾಯಗೊಂಡಿದ್ದ ಚಂದ್ರಶೇಖರ್‌ಗೆ ಶಸ್ತ್ರಚಿಕಿತ್ಸೆ ನಡೆಸಿ ಗುಂಡಿನ ಚೂರನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಶಸ್ತ್ರಾಗಾರಕ್ಕೆ ಕೆಎಸ್‌ಆರ್‌ಪಿ ಹಾಗೂ ನಗರ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳಲ್ಲಿ ಬಳಸಿದ ಗುಂಡುಗಳನ್ನು ಸಂಗ್ರಹಿಸಿ ಕಳುಹಿಸಲಾಗುತ್ತದೆ. ಆ ನಿರುಪಯುಕ್ತ ಗುಂಡುಗಳ ಕವಚದಲ್ಲಿರುವ ಹಿತ್ತಾಳೆಯನ್ನು ಬೇರ್ಪಡಿಸಿ ಲೋಹವನ್ನು ಶಸ್ತ್ರಾಗಾರಕ್ಕೆ ರವಾನಿಸಲಾಗುತ್ತದೆ. ವರ್ಷಕ್ಕೊಮ್ಮೆ ಹರಾಜು ನಡೆಸಿ ವಿಲೇವಾರಿ ಮಾಡಲಾಗುತ್ತದೆ.
ಕೆಎಸ್‌ಆರ್‌ಪಿ 9ನೇ ಬೆಟಾಲಿಯನ್‌ನಲ್ಲಿ ಸಹ ನಿರುಪಯುಕ್ತ ಗುಂಡುಗಳಲ್ಲಿ ರಾಜ್ಯ ಶಸ್ತ್ರಾಗಾರಕ್ಕೆ ಕಳುಹಿಸಲು ನಿರ್ಧರಿಸಲಾಗಿತು. ಬಳಸಿ ಬಿಸಾಡಿದ ಗುಂಡುಗಳಲ್ಲಿ ಹಿತ್ತಾಳೆ ಬೇರ್ಪಡಿಸುವ ಕೆಲಸದಲ್ಲಿ ಸೋಮವಾರ ಮಧ್ಯಾಹ್ನ ರಾಮಲಿಂಗ ಹಾಗೂ ಚಂದ್ರಶೇಖರ್ ನಿರತರಾಗಿದ್ದರು.
ಕಲ್ಲಿನಿಂದ ಜಜ್ಜಿ ಬೇರ್ಪಡಿಸುವಾಗ ಆಕಸ್ಮಿಕವಾಗಿ ಗನ್ ಪೌಡರ್ ಸಿಡಿದು ಗುಂಡಿನ ಚೂರು ಇಬ್ಬರ ಕಾಲಿಗೆ ಹೊಕ್ಕಿತು. ಗಾಯಾಳುಗಳನ್ನು ಸಿಬ್ಬಂದಿ ಸಮೀಪದ ನಾರಾಯಣ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಪ್ರಾಣಕ್ಕೆ ಯಾವುದೇ ಅಪಾಯ ಇಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.