ಲಂಡನ್: ಬ್ರಿಟನ್ ಸರ್ಕಾರದಲ್ಲಿ ರಾಜಕೀಯ ಅಸ್ಥಿರತೆ ಭುಗಿಲೆದ್ದಿದ್ದು, ಅವಧಿಗೂ ಮುನ್ನವೇ ಪ್ರಧಾನಿ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದ್ದಾರೆ.
ಸಮರ್ಪಕ ಆಡಳಿತ ನೀಡುತ್ತಿಲ್ಲ ಎಂದು ಬೋರಿಸ್ ಜಾನ್ಸನ್ ವಿರುದ್ಧ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕದಲ್ಲೇ ಭಾರೀ ಅಸಮಾಧಾನವಿತ್ತು. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಹಲವು ತಿಂಗಳಿಂದ ಒತ್ತಾಯಿಸುತ್ತಿದ್ದರೂ ಬೋರಿಸ್ ಮಾತ್ರ ಮಣಿದಿರಲಿಲ್ಲ. ಇವರ ಸಂಪುಟದಲ್ಲೇ ಸ್ಫೋಟಗೊಂಡ ಅಸಮಾಧಾನದ ಪರಿಣಾಮ ಕಳೆದ ಎರಡು ದಿನಗಳಲ್ಲಿ 40ಕ್ಕೂ ಹೆಚ್ಚು ಸಚಿವರು ಮತ್ತು ಸಹಾಯಕರು ರಾಜೀನಾಮೆ ನೀಡಿದ್ದರು. ಯುಕೆ ಹಣಕಾಸು ಸಚಿವ ಸ್ಥಾನಕ್ಕೆ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಕೂಡ ರಾಜೀನಾಮೆ ನೀಡಿದ್ದರು.
ಸರಣಿ ರಾಜೀನಾಮೆಯಿಂದ ಇಕ್ಕಟ್ಟಿಗೆ ಸಿಲುಗಿದ್ದ ಬೋರಿಸ್ ಜಾನ್ಸನ್, ಕೊನೆಗೂ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡಲು ಒಪ್ಪಿದ್ದೇನೆ ಎಂದು ಗುರುವಾರ ಮಧ್ಯಾಹ್ನ ಘೋಷಿಸಿದ್ದರು. ಇದಾದ ಕೆಲವೇ ಗಂಟೆಯಲ್ಲೇ ರಾಜೀನಾಮೆ ನೀಡಿದ್ದಾರೆ.
ಬೋರಿಸ್ ಜಾನ್ಸನ್ ಅವರ ಬಳಿಕ ನೂತನ ಪ್ರಧಾನಿ ಯಾರಾಗ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಆರಂಭದಿಂದಲೂ ಭಾರತ ಮೂಲದ ರಿಷಿ ಸುನಾಕ್ ಅವರು ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಕ್ಟೋಬರ್ನಲ್ಲಿ ಚುನಾವಣೆ ನಡೆಯಲಿದ್ದು, ಹೊಸ ಪ್ರಧಾನಿ ಆಯ್ಕೆಯಾಗುವವರೆಗೂ ಹಂಗಾಮಿ ಪ್ರಧಾನಿ ಆಗಿ ಮುಂದುವರಿಯುವುದಾಗಿ ಬೋರಿಸ್ ಹೇಳಿದ್ದಾರೆ.
2020ರ ಫೆಬ್ರವರಿಯಲ್ಲಿ ಬ್ರಿಟನ್ನ ಆರ್ಥಿಕ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದ ರಿಷಿ ಸುನಾಕ್, 2020ರಲ್ಲಿ ಕೋವಿಡ್ ಭೀತಿಯ ಮಧ್ಯೆಯೂ ಮಂಡಿಸಿದ ಮೊದಲ ಬಜೆಟ್ ಭಾರೀ ಪ್ರಶಂಸೆಗೆ ಪಾತ್ರವಾಗಿತ್ತು. ಕೋವಿಡ್ನಂತಹ ಸಂಕಷ್ಟ ಕಾಲದಲ್ಲಿ ಆರ್ಥಿಕ ಉತ್ತೇಜನಕ್ಕಾಗಿ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ರಿಷಿ ಸುನಾಕ್ ಜಾರಿಗೆ ತಂದಿದ್ದರು. ಯುವ ನಾಯಕ ರಿಷಿ ಸುನಕ್ ಅವರಿಗೆ ಕನ್ಸರ್ವೇಟಿವ್ ಪಕ್ಷದಲ್ಲಿ ಒಳ್ಳೆಯ ಬೆಂಬಲವಿದೆ. ಸಾರ್ವಜನಿಕರ ವಲಯದಲ್ಲೂ ಜನಮನ್ನಣೆ ಗಳಿಸಿದ್ದಾರೆ. ಹಾಗಾಗಿ ಬ್ರಿಟನ್ನ ಪ್ರಧಾನಿಯಾಗಿ ರಿಷಿ ಸುನಾಕ್ ಆಯ್ಕೆಯಾಗಲಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿದೆ. ಇವರ ಜತೆಗೆ ಇನ್ನೂ ಹಲವರು ಪ್ರಧಾನಿ ರೇಸ್ನಲ್ಲಿದ್ದು, ಶೀಘ್ರವೇ ಗಂಟೆಯಲ್ಲಿ ಸ್ಟಷ್ಟ ಉತ್ತರ ಸಿಗಲಿದೆ.
57 ವರ್ಷದ ಬೋರಿಸ್ ಜಾನ್ಸನ್ಗೆ ಸ್ವಪಕ್ಷೀಯದವರಿಂದಲೇ ತೀವ್ರ ವಿರೋಧ ಎದುರಾಗಿತ್ತು. ಇಡೀ ಬ್ರಿಟನ್ 2020ರ ಮೇ ತಿಂಗಳಲ್ಲಿ ಮೊದಲ ಕೋವಿಡ್ ಲಾಕ್ಡೌನ್ನಲ್ಲಿ ಇರುವಾಗ ಲಂಡನ್ನ 10 ಡ್ರೌವ್ನಿಂಗ್ ಸ್ಟ್ರೀಟ್ನಲ್ಲಿ ಪ್ರಧಾನಿ ಜಾನ್ಸನ್ ಮದ್ಯದ ಪಾರ್ಟಿ ನಡೆಸಿದ್ದರು. ಇದನ್ನು ಸ್ವತಃ ಪ್ರಧಾನಿಯೇ ಒಪ್ಪಿಕೊಂಡಿದ್ದು, 2020ರ ಬೇಸಿಗೆಯಲ್ಲಿ ತನ್ನ ಕಚೇರಿಯಲ್ಲಿ ಪಾರ್ಟಿ ಆಯೋಜಿಸಿದ್ದಾಗಿ ಹೇಳಿದ್ದರು. ಆದರೆ, ಕರೊನಾ ಸಂಕಷ್ಟ ಕಾಲದಲ್ಲಿ ತಮ್ಮ ಸಿಬ್ಬಂದಿಯ ಶ್ರಮಕ್ಕೆ ಪ್ರತಿಫಲವಾಗಿ ಈ ಕಾರ್ಯಕ್ರಮ ನಡೆಸಲಾಯಿತು ಎಂದು ಜಾನ್ಸನ್ ಸಮರ್ಥಿಸಿಕೊಂಡಿದ್ದರು. ಇನ್ನು ಪಾರ್ಟಿಗೆ ಸಂಬಂಧಿಸಿದ ವಿಡಿಯೋವೊಂದು ಸಹ ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಪ್ರತಿಪಕ್ಷ ಲೇಬರ್ ಪಾರ್ಟಿ ಮತ್ತು ತಮ್ಮದೇ ಕನ್ಸರ್ವೇಟಿವ್ ಪಕ್ಷದಲ್ಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ, ಬ್ರಿಟನ್ ಜನರ ಕೆಂಗಣ್ಣಿಗೂ ಜಾನ್ಸನ್ ಅವರ ನಡೆ ಗುರಿಯಾಗಿತ್ತು. ಇವರ ವಿರುದ್ಧ ಅಕ್ರಮಗಳ ಆರೋಪವೂ ಇದೆ.