ನ್ಯೂಸ್

ಬೈಂದೂರಿನಲ್ಲಿ ದೋಣಿ ಮಗುಚಿ ಮೀನುಗಾರರಿಬ್ಬರ ಸಾವು

ಉಡುಪಿ: ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಮಗುಚಿ ಮೀನುಗಾರರಿಬ್ಬರು ಮೃತಪಟ್ಟಿದ್ದು, ಐವರು ಅಪಾಯದಿಂದ ಪಾರಾದ ಘಟನೆ ಬೈಂದೂರು ತಾಲೂಕಿನಲ್ಲಿ ಉಪ್ಪುಂದ ತಾರಾಪತಿಯಲ್ಲಿ ನಡೆದಿದೆ.

ಶರಣ್ (25 ) ಮತ್ತು ಅಣ್ಣಪ್ಪ(30) ಮೃತರು. ವಿಜೇತ್, ಪ್ರವೀಣ, ಸಚಿನ್, ಸುಮಂತ, ವಾಸುದೇವ ಖಾರ್ವಿ ಅವರು ಅಪಾಯದಿಂದ ಪಾರಾದವರು. ತಾರಾಪತಿಯ ಭಾಗದ ಸಮುದ್ರದಲ್ಲಿ ಶುಕ್ರವಾರ ಸಂಜೆ ಮೀನು ಹಿಡಿಯಲೆಂದು 7 ಮಂದಿ ನಾಡ ದೋಣಿಯಲ್ಲಿ ಹೋಗಿದ್ದರು. ಮಾರ್ಗಮಧ್ಯೆ ದೋಣಿ ಮಗುಚಿದ್ದು, ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮತ್ತಿಬ್ಬರಿಗಾಗಿ ಕರಾವಳಿ ಕಾವಲು ಪಡೆ ಶೋಧ ಕಾರ್ಯ ನಡೆಸಿತ್ತು.

ಶನಿವಾರ ಮಧ್ಯಾಹ್ನ ಚರಣ್ ಮತ್ತು ಅಣ್ಣಪ್ಪ ಎಂಬುವರ ಮೃತದೇಹಗಳು ಪತ್ತೆಯಾಗಿವೆ. ಸ್ಥಳಕ್ಕೆ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಭೇಟಿ ನೀಡಿದ್ದರು. ಕುಂದಾಪುರ ಡಿವೈಎಸ್​ಪಿ ಶ್ರೀಕಾಂತ್, ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಪಿಎಸ್ಐ ಪವನ್ ನಾಯ್ಕ್ ಸ್ಥಳ ಪರಿಶೀಲನೆ ನಡೆಸಿದರು, ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.