ತಮಿಳುನಾಡು ತಿರುಪರಂಕುಂದ್ರಂ ದೀಪ ವಿವಾದ 
ನ್ಯೂಸ್

ತಿರುಪರಂಕುಂದ್ರಂ ದೀಪ ವಿವಾದ​; ಸುಪ್ರೀಂ ಆದೇಶ ಮರುಪರಿಶೀಲನೆಗೆ ತಮಿಳುನಾಡು ಅರ್ಜಿ! | Thiruparankundram

Thiruparankundram: ತಮಿಳುನಾಡಿನ ಮದುರೈ ಜಿಲ್ಲೆಯ ತಿರುಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪ ಬೆಳಗಿಸುವ ವಿಚಾರ ಮತ್ತೆ ಕಾನೂನು ಹೋರಾಟಕ್ಕೆ ಕಾರಣವಾಗಿದೆ. ಬೆಟ್ಟದ ಮೇಲಿರುವ ವಿವಾದಿತ ದೀಪಸ್ತಂಭದಲ್ಲಿ ನವೆಂಬರ್ 24ರಂದು ದೀಪ ಬೆಳಗಿಸಲು ಸುಪ್ರೀಂ ಕೋರ್ಟ್ ನೀಡಿದ್ದ ಒಂದು ಬಾರಿಯ ಅನುಮತಿಯನ್ನು ಮರುಪರಿಶೀಲಿಸುವಂತೆ ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿದೆ.

ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ (HR&CE) ಆಯುಕ್ತರು ಈ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದು, ನವೆಂಬರ್ 20ರಂದು ಸುಪ್ರೀಂ ಕೋರ್ಟ್ ನೀಡಿದ್ದ ಮಧ್ಯಂತರ ಆದೇಶವನ್ನು ಪ್ರಶ್ನಿಸಿದ್ದಾರೆ. ವಿವಾದಿತ ಕಲ್ಲಿನ ಸ್ತಂಭದಲ್ಲಿ ದೀಪ ಬೆಳಗಿಸಲು ಒಂದು ಬಾರಿಗೆ ಮಾತ್ರ ಅನುಮತಿ ನೀಡಿರುವ ಕೋರ್ಟ್, ಇದರಿಂದ ಆ ಸ್ಥಳದ ಮೇಲೆ ಯಾವುದೇ ಸಾಂಪ್ರದಾಯಿಕ, ಧಾರ್ಮಿಕ ಅಥವಾ ಮಾಲೀಕತ್ವದ ಹಕ್ಕು ಸ್ಥಾಪನೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ದೀಪ ಬೆಳಗಿಸುವ ವೇಳೆ ದೇವಸ್ಥಾನದ ಅಧಿಕೃತ ಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಸ್ಥಳಕ್ಕೆ ತೆರಳಲು ಅನುಮತಿ ನೀಡಲಾಗಿದೆ. ಸಾರ್ವಜನಿಕರ ಪ್ರವೇಶ, ಮೆರವಣಿಗೆ, ಸಭೆ, ಪ್ರತಿಭಟನೆ ಮತ್ತು ಘೋಷಣೆ ಕೂಗುವುದನ್ನು ನಿರ್ಬಂಧಿಸಲಾಗಿದೆ. ಕಾರ್ಯಕ್ರಮದ ಉಸ್ತುವಾರಿಗಾಗಿ ಮದುರೈ ಜಿಲ್ಲಾಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿ, ಪುರಾತತ್ವ ಇಲಾಖೆ (ASI) ಮತ್ತು ಪೊಲೀಸರ ಸಹಯೋಗದಲ್ಲಿ ವ್ಯವಸ್ಥೆ ಮಾಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ದೀಪ ಬೆಳಗಿಸುವ ಸ್ಥಳದ ಬಗ್ಗೆ ವಿವಾದವೇನು?

ತಿರುಪರಂಕುಂದ್ರಂ ಬೆಟ್ಟದ ಮೇಲಿರುವ ದೀಪಸ್ತಂಭದಲ್ಲಿ ದೀಪ ಬೆಳಗಿಸಬೇಕೇ ಅಥವಾ ಉಚ್ಚಿ ಪಿಳ್ಳೈಯಾರ್ ದೇವಸ್ಥಾನದ ಸಮೀಪದ ದೀಪ ಮಂಟಪದಲ್ಲೇ ಹಿಂದಿನ ಸಂಪ್ರದಾಯದಂತೆ ದೀಪ ಬೆಳಗಿಸಬೇಕೇ ಎಂಬುದೇ ವಿವಾದದ ಕೇಂದ್ರಬಿಂದು. ವಿವಾದಿತ ದೀಪಸ್ತಂಭವು ಬೆಟ್ಟದ ಮೇಲಿರುವ ಹಜರತ್ ಸುಲ್ತಾನ್ ಸಿಕಂದರ್ ಬಾದುಷಾ ಔಲಿಯಾ ದರ್ಗಾದಿಂದ ಸುಮಾರು 50 ಮೀಟರ್ ದೂರದಲ್ಲಿದೆ.

ದೀಪಸ್ತಂಭದಲ್ಲಿ ದೀಪ ಬೆಳಗಿಸುವ ಪದ್ಧತಿ ಇಲ್ಲ

2025ರ ಡಿಸೆಂಬರ್‌ನಲ್ಲಿ ಮದ್ರಾಸ್ ಹೈಕೋರ್ಟ್‌ನ ಏಕಸದಸ್ಯ ಪೀಠ ದೀಪಸ್ತಂಭದಲ್ಲಿ ದೀಪ ಬೆಳಗಿಸುವಂತೆ ಆದೇಶಿಸಿತ್ತು. 2026ರ ಜನವರಿ 6ರಂದು ವಿಭಾಗೀಯ ಪೀಠವೂ ಇದನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ತಮಿಳುನಾಡು ಸರ್ಕಾರ, ದೀಪಸ್ತಂಭದಲ್ಲಿ ದೀಪ ಬೆಳಗಿಸುವ ಸಂಪ್ರದಾಯವಿಲ್ಲ. ಹಿಂದಿನಿಂದಲೂ ದೀಪ ಮಂಟಪದಲ್ಲೇ ದೀಪ ಬೆಳಗಿಸಲಾಗುತ್ತಿದ್ದು, ಪದ್ಧತಿ ಬದಲಿಸಿದರೆ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಎದುರಾಗಬಹುದು ಎಂದು ವಾದಿಸಿತ್ತು.

ಇದನ್ನೂ ಓದಿ: ಫುಟ್‌ಪಾತ್‌ನಲ್ಲಿ ಬೈಕ್ ಸವಾರರ ಹಾರ್ನ್‌ಗೆ ಕ್ಯಾರೇ ಅನ್ನದ ಯುವತಿಯರು! ವಿಡಿಯೋಗೆ ಭಾರೀ ಮೆಚ್ಚುಗೆ | Footpath Video

ನವೆಂಬರ್ 20ರಂದು ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪಿನ ಸಂಬಂಧಿತ ನಿರ್ದೇಶನಗಳಿಗೆ ತಡೆ ನೀಡಿದರೂ, ನವೆಂಬರ್ 24ರಂದು ದೀಪಸ್ತಂಭದಲ್ಲಿ ದೀಪ ಬೆಳಗಿಸಲು ಒಂದು ಬಾರಿಯ ಅನುಮತಿ ನೀಡಿತ್ತು. ಈ ಪ್ರಕರಣದ ಮುಂದಿನ ವಿಚಾರಣೆ 2027ರ ಜನವರಿಯಲ್ಲಿ ನಡೆಯಲಿದೆ.