ಶಿವಮೊಗ್ಗ: ಶಿವಮೊಗ್ಗದಲ್ಲಿ ಶಂಕಿತ ಉಗ್ರರಿಬ್ಬರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನೂ ಕೋರ್ಟ್ಗೆ ಹಾಜರು ಪಡಿಸಲಾಗಿತ್ತು. 7 ದಿನಗಳ ಕಾಲ ಪೊಲೀಸರ ಕಸ್ಟಡಿಗೆ ಕೋರ್ಟ್ ನೀಡಿದ್ದು, ತೀವ್ರ ವಿಚಾರಣೆ ನಡೆಯುತ್ತಿದೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಶಿವಮೊಗ್ಗದಲ್ಲಿ ಐಎಸ್ಐಎಸ್ ಉಗ್ರ ಸಂಘಟನೆಯ ಮೂರು ಜನ ಪತ್ತೆಯಾಗಿದ್ದಾರೆ. ಇದರಲ್ಲಿ ಮಾಝ್ ಮತ್ತು ಸೈಯದ್ ಯಾಸಿನ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಪ್ರಮುಖ ಆರೋಪಿ ಶಾರೀಕ್ ತಪ್ಪಿಸಿಕೊಂಡಿದ್ದಾನೆ. ಆತನನ್ನು ಪತ್ತೆ ಮಾಡುತ್ತೇವೆ. ಇವರು ಶಿವಮೊಗ್ಗ-ತೀರ್ಥಹಳ್ಳಿ ನಿವಾಸಿಗಳು. ಇವರಿಗೆ ಕಾರವಾರದ ಸಂಪರ್ಕ ಇತ್ತು. ತನಿಖೆ ನಡೆಯುತ್ತಿದೆ, ಈಗಲೇ ಏನು ಹೇಳೋಕೆ ಆಗಲ್ಲ. ಇವರೆಲ್ಲಾ ದೇಶದ ವಿರುದ್ಧ ಆಲೋಚನೆ ಮಾಡುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ ಎಂದರು.
ಶಂಕಿತ ಉಗ್ರರಿಬ್ಬರ ಬಂಧನ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಶಿವಮೊಗ್ಗ ಎಸ್ಪಿ ಲಕ್ಷ್ಮೀಪ್ರಸಾದ್, ಆರೋಪಿಗಳಿಬ್ಬರನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಮಾಝ್ ಮತ್ತು ಶಾರೀಕ್ ಮೇಲೆ ಮಂಗಳೂರಲ್ಲಿ ಗೋಡೆ ಬರಹ ಕೇಸ್ ಇತ್ತು. ಬೇಲ್ನಲ್ಲಿದ್ದರು. ನಿಷೇಶಿಧಿತ ಉಗ್ರ ಸಂಘಟನೆಯಲ್ಲಿ ಇವರು ಕೆಲಸ ಮಾಡ್ತಿದ್ದರು ಎಂಬ ಮಾಹಿತಿ ಇದೆ. ತನಿಖೆ ನಂತರ ಹೆಚ್ಚಿನ ಮಾಹಿತಿ ಕೊಡ್ತೀವಿ ಎಂದರು.