ನ್ಯೂಸ್

ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ: ಐಸಿಸ್​ ಜತೆ ನಿಕಟ ಸಂಪರ್ಕ

ಶಿವಮೊಗ್ಗ: ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರನ್ನು ಗ್ರಾಮಾಂತರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಇವರಿಬ್ಬರಿಗೂ ನಿಷೇಧಿತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್​ನೊಂದಿಗೆ ನಿಕಟ ಸಂಪರ್ಕ ಇತ್ತು. ಐಸಿಸ್ ಜೊತೆ ನಿಕಟ ಸಂಪರ್ಕ ಹೊಂದಿದ್ದರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಮಂಗಳೂರು ಮೂಲದ ಮಾಜ್ ಮತ್ತು ಶಿವಮೊಗ್ಗ ಮೂಲದ ಸೈಯದ್ ಯಾಸಿನ್​ ಬಂಧಿತರು. ಶಿವಮೊಗ್ಗದ ಯುವಕ ಪ್ರೇಮ್​ಸಿಂಗ್​ಗೆ ಚಾಕು ಇರಿದ ಪ್ರಕರಣದ ಪ್ರಮುಖ ಆರೋಪಿ ಜಬಿ ಜೊತೆಗೂ ಯಾಸಿನ್ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.

ಒಟ್ಟು ಮೂವರು ಶಂಕಿತ ಉಗ್ರರರ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು. ಈ ಪೈಕಿ ಮೊದಲ ಆರೋಪಿ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ಮೂಲದ ಶಾರಿಕ್ ತಲೆಮರೆಸಿಕೊಂಡಿದ್ದಾನೆ. 2ನೇ ಆರೋಪಿ ಮಾಜ್ ಮತ್ತು 3ನೇ ಆರೋಪಿ ಸೈಯದ್ ಯಾಸಿನ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಮಾಜ್ ಕದ್ರಿಯಲ್ಲಿ ಗೋಡೆ ಬರಹ ಬರೆದ ಪ್ರಕರಣದ ಪ್ರಮುಖ ಆರೋಪಿ ಕೂಡ. 2020ರಲ್ಲಿ ಮಂಗಳೂರು ನಗರದ ಬಿಜೈ ಮತ್ತು ಕೋರ್ಟ್ ರಸ್ತೆಯಲ್ಲಿ 'ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆಗೆ ಜಿಂದಾಬಾದ್' ಎಂದು ಬರೆದಿದ್ದರು. ರಾಷ್ಟ್ರಧ್ವಜವನ್ನು ಯಾಸಿನ್​ ಸುಟ್ಟಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.