ನ್ಯೂಸ್

ಡಿಕೆಶಿ-ಸಿದ್ದು ಟಿಕೆಟ್ ಫೈಟ್; ಹೈಕಮಾಂಡ್​ಗೂ ಇಕ್ಕಟ್ಟು | ಖರ್ಗೆ ಸುತ್ತ ಆಕಾಂಕ್ಷಿಗಳ ಗಿರಕಿ

Bengaluru - General - Rama Kishan K V

ಬೆಂಗಳೂರು: ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಮಾಡಿಕೊಂಡು ಚುನಾವಣೆಯಲ್ಲಿ ಕ್ಷೇತ್ರ ಕಳೆದುಕೊಳ್ಳಬಾರದೆಂದು ಸಾಕಷ್ಟು ಮುಂಚಿತವಾಗಿ ಅಭ್ಯರ್ಥಿ ಘೋಷಿಸಲು ತಯಾರಿ ಆರಂಭಿಸಿದ್ದ ಕಾಂಗ್ರೆಸ್​ಗೆ ಒಂದೊಂದೇ ಅಡೆತಡೆ ಎದುರಾಗುತ್ತಿದ್ದು, ಪ್ರಸ್ತುತ ಇಬ್ಬರು ಮಹಾ ನಾಯಕರ ನಡುವೆ ಟಿಕೆಟ್ ಫೈಟ್ ಆರಂಭವಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ನಾಯಕತ್ವದ ಹಿಡಿತಕ್ಕಾಗಿ ಪೈಪೋಟಿ ಗುಟ್ಟಾಗಿ ಉಳಿದ ವಿಚಾರವೇನಲ್ಲ. ಅದರ ಮುಂದುವರಿದ ಭಾಗವಾಗಿ ತಮ್ಮವರಿಗಾಗಿ ಟಿಕೆಟ್ ಪಡೆದುಕೊಳ್ಳಲು ಇಬ್ಬಣಗಳು ಶತಪತ ಪ್ರಯತ್ನ ನಡೆಸಿವೆ. ಈ ನಡುವೆ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸುವ ಹೊಸ ಸಂಪ್ರದಾಯ ಆರಂಭಿಸಿದ ಕೆಪಿಸಿಸಿಗೆ 1,300ಕ್ಕಿಂತ ಹೆಚ್ಚು ಅರ್ಜಿ ಬಂದಿದ್ದು, ಹಾಲಿ ಶಾಸಕರಿರುವ ಕ್ಷೇತ್ರಗಳಲ್ಲೂ ಅರ್ಜಿ ಬಂದಿತ್ತು. ಈ ಬೆಳವಣಿಗೆ ಶಾಸಕರ ಬೇಸರಕ್ಕೂ ಕಾಣವಾಗಿತ್ತು. ಬಳಿಕ ಈ ಬೆಳವಣಿಗೆಯನ್ನು ಧನಾತ್ಮಕವಾಗಿ ತೆಗೆದುಕೊಂಡು ಆಕಾಂಕ್ಷಿಗಳನ್ನು ಸಮಾಧಾನಪಡಿಸಿ ಎಂದು ಕೆಪಿಸಿಸಿ ಅಧ್ಯಕ್ಷರು ಹಿತವಚನ ಹೇಳಿದ್ದರು.

ಪ್ರಸ್ತುತ ಜನವರಿ 15ರೊಳಗೆ 150 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಪ್ರಯತ್ನ ನಡೆದಿದೆ. ಈ ಹಂತದಲ್ಲಿ ಶೇ.80 ಕ್ಷೇತ್ರಗಳಲ್ಲಿ ಡಿ.ಕೆ.ಶಿವಕುಮಾರ್ ಆಪ್ತರು ಮತ್ತು ಸಿದ್ದರಾಮಯ್ಯ ಬೆಂಬಲಿಗರು ಟಿಕೆಟ್​ಗೆ ಅರ್ಜಿ ಸಲ್ಲಿಸಿದ್ದು, ಟಿಕೆಟ್ ಪಡೆದುಕೊಳ್ಳಲೇಬೇಕೆಂದು ಪ್ರಯತ್ನ ನಡೆಸಿದ್ದಾರೆ. ಒಂದು ಅಂದಾಜಿನ ಪ್ರಕಾರ 30-35 ಕ್ಷೇತ್ರಗಳಲ್ಲಿ ಪೈಪೋಟಿ ತೀವ್ರಗೊಂಡಿದೆ.

ಈ ಪೈಪೋಟಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಬಂದಿರುವ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಜಿಲ್ಲಾ ಹಂತದಲ್ಲಿ ಬಣಗಳ ಕಾದಾಟ ನಡೆಯಬಾರದೆಂದು ಒಗ್ಗಟ್ಟಿನ ಸೂತ್ರ ರೂಪಿಸಿಕೊಟ್ಟಿದ್ದರು. ಒಂದರಿಂದ ಮೂರು ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಹೊಣೆಯನ್ನೂ ಜಿಲ್ಲಾ ಘಟಕಗಳಿಗೆ ನೀಡಲಾಗಿತ್ತು. ಜಿಲ್ಲಾ ಘಟಕಗಳು ಸಂಭಾವ್ಯ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಪ್ರಯತ್ನದಲ್ಲಿರುವಾಗಲೇ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಟಿಕೆಟ್ ಫೈಟ್ ಕಾವು ಪಡೆದುಕೊಂಡಿದೆ.

ಈ ನಡುವೆ ಯಾವ ಆಕಾಂಕ್ಷಿ ಯಾರ ಪರವಾಗಿದ್ದಾರೆಂದು ಅರಿತಿರುವ ಜಿಲ್ಲಾ ಘಟಕಗಳು ಆ ಎರಡು ಹೆಸರನ್ನು ಕೆಪಿಸಿಸಿಗೆ ಶಿಫಾರಸು ಮಾಡುತ್ತಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅಲ್ಲದೇ ಕೆಲವು ಆಕಾಂಕ್ಷಿಗಳು ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ತಾವು ಆಕಾಂಕ್ಷಿ ಎಂದೂ, ಅವಕಾಶ ಕೊಡುವಂತೆ ದಂಬಾಲು ಬೀಳಲಾರಂಭಿಸಿದ್ದಾರೆ. ಈ ರೀತಿ ನೂರಕ್ಕೂ ಹೆಚ್ಚು ಮಂದಿ ಖರ್ಗೆಯವರನ್ನು ಎಡತಾಕಿದ್ದಾರೆ.

ಎಲ್ಲೆಲ್ಲಿ ಹೊಯ್ದಾಟ?

ತೀರ್ಥಹಳ್ಳಿ: ಮಂಜುನಾಥ ಗೌಡ- ಕಿಮ್ಮನೆ ರತ್ನಾಕರ್, ದಾಸರಹಳ್ಳಿ: ನಾಗಲಕ್ಷ್ಮೀ ಚೌಧರಿ- ಗೀತಾ ಶಿವರಾಮ್ ರಾಜಾಜಿನಗರ: ಪುಟ್ಟರಾಜು- ಪದ್ಮಾವತಿ, ಹೊನ್ನಾಳಿ: ಮಂಜಪ್ಪ- ಶಾಂತನಗೌಡ, ಹರಪನನಹಳ್ಳಿ: ಲತಾ- ವೀಣಾ, ಹೊಳಲ್ಕೆರೆ: ಸವಿತಾ ರಘು- ಆಂಜನೇಯ, ಚಿತ್ರದುರ್ಗ: ಬಸವರಾಜನ್- (ಜೆಡಿಎಸ್​ನಿಂದ ಆಪರೇಷನ್), ಮೊಳಕಾಲ್ಮೂರು: ಯೋಗೇಶ್ ಬಾಬು- ತಿಪ್ಪೇಸ್ವಾಮಿ, ಕಲಘಟಗಿ: ನಾಗರಾಜ್ ಛಬ್ಬಿ- ಸಂತೋಷ್ ಲಾಡ್, ಹುಬ್ಬಳ್ಳಿ ಧಾರವಾಡ ಕೇಂದ್ರ: ರಜತ್ ಉಳ್ಳಾಗಟ್ಟಿ ಮಠ- ಗದಿಗೆಪ್ಪ ಗೌಡರ್, ಬೆಂಗಳೂರು ದಕ್ಷಿಣ: ಆರ್.ಕೆ.ರಮೇಶ್- ರಾಜಗೋಪಾಲ ರೆಡ್ಡಿ, ಬಳ್ಳಾರಿ ನಗರ: ಅನಿಲ್ ಲಾಡ್- ಭರತ್ ರೆಡ್ಡಿ, ಪುಲಿಕೇಶಿ ನಗರ: ಅಖಂಡ ಶ್ರೀನಿವಾಸಮೂರ್ತಿ- ಪ್ರಸನ್ನ ಕುಮಾರ್, ನಂಜನಗೂಡು: ಧ್ರ್ರುವ ನಾರಾಯಣ- ಮಹದೇವಪ್ಪ, ಸಿಂಧನೂರು: ಹಂಪನಗೌಡ- ಬಸವನಗೌಡ ಬಾರ್ದಲಿ, ಮಡಿಕೇರಿ: ಪೊನ್ನಣ್ಣ- ವೀಣಾ ಅಚ್ಚಯ್ಯ, ಹಿರಿಯೂರು: ಸೋಮಶೇಖರ್- ಸುಧಾಕರ್, ಲಿಂಗಸೂಗೂರು: ಡಿ.ಎಸ್.ಹೂಲಿಗೇರಿ- ರುದ್ರಪ್ಪಯ್ಯ, ಹುಬ್ಬಳ್ಳಿ ಧಾರವಾಡ: ನಾಗರಾಜ ಗೌರಿ- ದೀಪಕ್ ಚಿಂಚೋರಿ, ಧಾರವಾಡ ಗ್ರಾಮೀಣ: ಶಿವಲೀಲಾ ವಿನಯ ಕುಲಕರ್ಣಿ- ಇಸ್ಮಾಯಿಲ್ ತಮಟಗಾರ, ನವಲಗುಂದ: ವಿನೋದ ಅಸೂಟಿ- ಎನ್.ಎಚ್. ಕೋನರಡ್ಡಿ,ಕುಂದಗೋಳ: ಕುಸುಮಾವತಿ ಶಿವಳ್ಳಿ-ಎಂ.ಎಸ್. ಅಕ್ಕಿ

ಕೆಲವರು ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿ ಎಂದು ಕಾಯುತ್ತಿದ್ದಾರೆ, ಯಾವುದೇ ಪಕ್ಷ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರಬಾರದೆಂದು ಬಯಸುತ್ತಿದ್ದಾರೆ. ಅಂತಹ ಪಕ್ಷಗಳಿಗೆ ಏನೆಂದು ಕರೆಯಬೇಕು ಹೇಳಿ? ಇವರದ್ದು ಸಮಯ ಸಾಧಕ ರಾಜಕಾರಣದ ಹಾಗೆ ಅಲ್ಲವೇ? ದೇಶಕ್ಕಾಗಿ ಸಂಪತ್ತನ್ನ ತ್ಯಾಗ ಮಾಡಿ ಹೋರಾಟ ಮಾಡಿದವರು ಕಾಂಗ್ರೆಸ್​ನವರು. ಬಿಜೆಪಿಯವರು ಹೋರಾಟದ ಉದಾಹರಣೆ ಹೇಳಲಿ ನೋಡೋಣ.

| ಎಚ್.ಸಿ.ಮಹದೇವಪ್ಪಮಾಜಿ ಸಚಿವಕಾಂಗ್ರೆಸ್​ನಿಂದ ಮಹಿಳಾ ಪ್ರಣಾಳಿಕೆಬೆಂಗಳೂರು: ವಿಧಾನಸಭಾ ಚುನಾವಣೆಗೆ ಬಗೆಬಗೆಯ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ ಮಹಿಳಾ ಮತದಾರರನ್ನು ಸೆಳೆಯಲು ಪ್ರತ್ಯೇಕ ಪ್ರಣಾಳಿಕೆ ಹೊರತರಲು ನಿರ್ಧರಿಸಿದೆ.

ಪ್ರಣಾಳಿಕೆ ಸಿದ್ಧಪಡಿಸಲು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಅವರಿಗೆ ಜವಾಬ್ದಾರಿ ನೀಡಲಾಗಿದ್ದು, ಮಹಿಳಾ ಪ್ರಣಾಳಿಕೆಗೆ ಸೇರಬೇಕಾದ ಅಂಶಗಳ ಬಗ್ಗೆ ಸಲಹೆಗಳನ್ನು ಲಿಖಿತ ರೂಪದಲ್ಲಿ ಕಳಿಸಿಕೊಡಬೇಕೆಂದು ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು, 2018 ಹಾಗೂ 2019ರ ವಿಧಾನಸಭೆ, ಲೋಕಸಭೆ ಚುನಾವಣೆ ಸ್ಪರ್ಧಿಗಳು, 2023ರ ವಿಧಾನಸಭಾ ಚುನಾವಣೆ ಸ್ಪರ್ಧಾಕಾಂಕ್ಷಿಗಳು, ಜಿಲ್ಲೆ ಹಾಗೂ ಬ್ಲಾಕ್ ಅಧ್ಯಕ್ಷರು, ಪದಾಧಿಕಾರಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪತ್ರ ಬರೆದಿದ್ದಾರೆ.