ಬಾಗಲಕೋಟೆ: ಕ್ವಾರಂಟೈನಲ್ಲೇ ಇದ್ದರೆ ದುಡಿಮೆ ಹೇಗೆ? ಎಂದು ಚಿಂತಿಸುತ್ತಿದ್ದ ಕುಟುಂಬಗಳಿಗೆ ಮಾನಸಿಕ ಸ್ಥೈರ್ಯ ತುಂಬಿದ ಇಲ್ಲಿನ ಜಿಲ್ಲಾ ಪಂಚಾಯಿತಿ, ಕೆಲಸ ಕೊಟ್ಟು ಕೂಲಿ ಹಣವನ್ನೂ ನೀಡಿದೆ!
ಕುಡಿವ ನೀರು, ಶೌಚಗೃಹ, ಸ್ವಚ್ಛತೆ ಸೇರಿ ಮೂಲ ಸೌಕರ್ಯಗಳ ಕೊರತೆಯ ಆಗರವಾಗಿರುವ ಕೆಲ ಕ್ವಾರಂಟೈನ್ ಕೇಂದ್ರಗಲ್ಲಿ ಕಾರ್ಮಿಕರ ಬದುಕು ದುಸ್ತರವಾಗಿದೆ. ಈ ನಡುವೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿರುವ ಕ್ವಾರಂಟೈನ್ ಕೇಂದ್ರ ವಿಶೇಷ ಎನಿಸಿದೆ. ಇನ್ಸ್ಟಿಟೂಶನಲ್ ಕ್ವಾರಂಟೈನ್ನಲ್ಲೇ
ಕಾರ್ಮಿಕರಿಗೆ ಕೂಲಿ ಕೆಲಸ ಸಿಕ್ಕಿದೆ.
ಮಹಾರಾಷ್ಟ್ರ ಮತ್ತು ಕೇರಳದಿಂದ ಬಂದು ಕ್ವಾರಂಟೈನ್ನಲ್ಲಿದ್ದ ಮೂರು ಕುಟುಂಬಕ್ಕೆ ಗಿರಿಸಾಗರ ಗ್ರಾಪಂ ಮೂಲಕ ಮನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಲಾಗಿದೆ. ಕ್ವಾರಂಟೈನ್ನಲ್ಲಿದ್ದ ಶಾಲೆ ಆವರಣದಲ್ಲಿ ಗಿಡ ನೆಡುವುದು, ಶಾಲೆ ಕಾಂಪೌಂಡ್, ಶೌಚಗೃಹ, ನೀರಿನ ಟ್ಯಾಂಕ್ಗೆ ಬಣ್ಣ ಬಳಿಯುವ ಕೆಲಸ ಮಾಡಿದ್ದಾರೆ.
ಮೂರು ಕುಟುಂಬದ ಐವರಿಗೆ ಪ್ರತಿದಿನ 275 ರೂ. ಕೂಲಿ ಸಿಕ್ಕಿದ್ದು, ಜಿಪಂ ಸಿಇಒ ಗಂಗೂಬಾಯಿ ಮಾನಕರ್ ಅವರ ವಿಶೇಷ ಕಾಳಜಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.