ನ್ಯೂಸ್

ಒಂದು ದಿನದ ಪೂಜೆಗೆ ಸಾವಿರ ವರ್ಷಗಳ ಪೂಜಾಫಲ!

ಪ್ರಾಚೀನ ಧರ್ಮ ಶಾಸ್ತ್ರಗಳ ಪ್ರಕಾರ ಭಗವಂತನ ಅನುಗ್ರಹ ಸಂಪಾದಿಸಲು ಅನೇಕ ವ್ರತ ನಿಯಮ ಹೇಳಲಾಗಿದೆ. ಅದರಲ್ಲೂ ಕೆಲವು ಗ್ರಂಥಗಳಲ್ಲಿ ಭಗವಂತ ತನಗೆ ಪ್ರಿಯವಾಗುವ ಕರ್ಮಗಳ ಬಗೆಗೆ ತಾನೇ ಉಲ್ಲೇಖಿಸಿರುವನು.

ಬೃಹತ್ಸಾಂ ತಥಾ ಸಾಮ್ನಾಂ ಗಾಯತ್ರೀ ಛಂದಸಾಮಹಂ| ಮಾಸನಾಂ ಮಾರ್ಗಶೀಷೋಹಮೃತುನಾಂ ಕುಸುಮಾಕರಃ ||

-ಸಾಮವೇದದಲ್ಲಿನ ಸ್ತೋತ್ರಗಳಲ್ಲಿ ನನ್ನನ್ನು ಬೃಹತ್ಸಮ ಎಂದು ತಿಳಿಯಿರಿ; ಶ್ಲೋಕಗಳಲ್ಲಿ ಗಾಯತ್ರೀ, ತಿಂಗಳುಗಳಲ್ಲಿ ಮಾರ್ಗಶೀರ್ಷ ಮತ್ತು ಋತುಗಳಲ್ಲಿ ವಸಂತಋತು ನನಗೆ ಪ್ರಿಯ ಎಂದಿದ್ದಾನೆ ಶ್ರೀಕೃಷ್ಣ. (ಭಗವದ್ಗೀತೆ). ಧನುರ್ವಸವೂ ಈ ಮಾಸದಲ್ಲೇ ಪ್ರಾರಂಭವಾಗುವುದು. ಧನುರ್ವಸ (ಖಾರ್ವಸ) ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಆಚರಿಸಲ್ಪಡುತ್ತದೆ. ಇದರ ನಿಯಮಗಳು ಮತ್ತು ಪ್ರಾಮುಖ್ಯವು ಚಾತುರ್ವಸದ ನಿಯಮವನ್ನು ಹೋಲುತ್ತದೆ. ಇಲ್ಲಿ ಯಾವುದೇ ತರಹದ ಶುಭ ಕಾರ್ಯಗಳನ್ನು ಆಚರಿಸಲು ನಿರ್ಬಂಧ ಸೂಚಿಸಲಾಗಿದೆ. ಕಾರಣ ಇದು ಕೂಡ ಅಧಿಕಮಾಸದಂತೆ ಶೂನ್ಯಮಾಸ. ಇದು ಮಾರ್ಗಶೀರ್ಷ ಮಾಸದ ಮಧ್ಯಂತರದಲ್ಲಿ ಪ್ರಾರಂಭವಾಗಿ ಪುಷ್ಯ ಮಾಸದ ಮಧ್ಯದಲ್ಲಿ ಮುಕ್ತಾಯಗೊಳ್ಳುತ್ತದೆ. ಒಂದು ವರ್ಷದಲ್ಲಿ ಆರು ತಿಂಗಳಿಗೊಂದು ಆಯನವು ಬದಲಾ ಗುವುದು- ಉತ್ತರಾಯಣ ಹಾಗೂ ದಕ್ಷಿಣಾಯಣ. ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯ ಕಾಲ, ಉತ್ತರಾಯಣವು ಬೆಳಗಿನ ಸಮಯ. ದಕ್ಷಿಣಾಯನ ಮುಗಿಯುವ ಸಮಯ, ಉತ್ತರಾಯಣ ಪ್ರಾರಂಭದ ಮೊದಲಿನ ಕಾಲವೇ ಧನುರ್ವಸದ ಸಂಭವಕ್ಕೆ ಕೂಡುವಿಕೆಯಾಗಿದೆ. (ಅಂದರೆ ದೇವತೆಗಳೆಲ್ಲ ಏಳುವ ಸಮಯ ಇದಾಗಿದೆ).

ಬ್ರಾಹ್ಮೀಮುಹೂರ್ತ: ನಮ್ಮ ಋಷಿಮುನಿಗಳು ಅರುಹಿದ ಆರೋಗ್ಯದ ರಹಸ್ಯ ಬ್ರಾಹ್ಮೀ ಮುಹೂರ್ತದಲ್ಲಿ ಎಳುವುದು, ಧ್ಯಾನ- ಯೋಗರತನಾಗá-ವುದು. ಬ್ರಾಹ್ಮಿ ಮುಹೂರ್ತವು ಸೂರ್ಯೋದಯಕ್ಕೆ ಮೊದಲು ಒಂದೂವರೆ ಗಂಟೆಗಳ ಅವಧಿ ಅಥವಾ ಹೆಚ್ಚು ನಿಖರವಾಗಿ 1 ಗಂಟೆ 36 ನಿಮಿಷಗಳು ಅಂದರೆ 96 ನಿಮಿಷಗಳು = 2 ಮುಹೂರ್ತ ಅಥವಾ 4 ಘಟಿಕಾ. ಒಂದು ಮುಹೂರ್ತದ ಅವಧಿ 48 ನಿಮಿಷಗಳು. ಧನುರ್ವಸದಲ್ಲಿ ಈ ಬ್ರಹ್ಮ ಮುಹೂರ್ತದ ಸಮಯವನ್ನು ಪವಿತ್ರ ಮತ್ತು ಮಂಗಳಕರವೆಂದು ಪರಿಗಣಿಸುತ್ತಾರೆ.

ಧನುರ್ವಸ: ಈ ಮಾಸದ ಒಂದು ತಿಂಗಳು ಪರ್ಯಂತ ವ್ರತಾಚರಣೆಯನ್ನು ಧರ್ಮಶಾಸ್ತ್ರದಲ್ಲಿ ತಿಳಿಸಿದ್ದಾರೆ. ಸೂರ್ಯನು ಒಂದೊಂದು ರಾಶಿಯಲ್ಲಿ ಒಂದು ತಿಂಗಳವರೆಗೆ ನೆಲೆಸುವನು. ಆತ ಧನು ರಾಶಿಗೆ ಪ್ರವೇಶಿಸಿದಾಗ ಅದು ಧನುರ್ವಸ. ಧನುಸಂಕ್ರಮಣ ಎಂದೂ ಕರೆಯುವರು. ಈ ಮಾಸದಲ್ಲಿ ಉಷಃತ್ಕಾಲದಲ್ಲಿನ ಪೂಜೆ ಮತ್ತು ನೈವೇದ್ಯಕ್ಕೆ ಅತ್ಯಂತ ಪ್ರಶಸ್ತ ಫಲವನ್ನು ಆಗ್ನೇಯ ಪುರಾಣವು ತಿಳಿಸಿದೆ. ಆಹ್ನಿಕದ ಬಳಿಕ ಜಪತಪಾದಿ ಕರ್ಮಗಳನ್ನು ಮೊಟಕು ಮಾಡಿದರೂ ಪರವಾಗಿಲ್ಲ, ಪೂಜೆ ಮತ್ತು ನೈವೇದ್ಯ ಸಮರ್ಪಣೆಯನ್ನು ನಕ್ಷತ್ರಗಳಿರುವಾಗಲೇ ಆಚರಿಸಬೇಕು. ಇನ್ನು ನಕ್ಷತ್ರ ಕಾಣದ ಸಮಯದ ಆಚರಣೆ ಮಧ್ಯಮ ಹಾಗೂ ಸೂರ್ಯೋದಯದ ನಂತರ ಆಚರಿಸುವ ಕರ್ಮ ಅಧಮವೆನಿಸಿದೆ ಈ ಧನುರ್ವಸದಲ್ಲಿ.

ಈ ಮಾಸದ ನಿಯಾಮಕನಾಗಿ ಶ್ರೀಮನ್ನಾರಾಯಣ ನಾಮಕ ಭಗವಂತನನ್ನು ಉಪಾಸಿಸಬೇಕು. ಏಕೆಂದರೆ ಶ್ರೀಕೃಷ್ಣನೇ ಸ್ವತಃ ಗೀತೆಯಲ್ಲಿ ‘ನಾನು ಧನುರ್ವಸದಲ್ಲಿ ಹೆಚ್ಚು ಪ್ರಕಟಗೊಳ್ಳುತ್ತೇನೆ’ ಎಂದಿದ್ದಾನೆ. ಈ ಪುಣ್ಯಕಾಲದಲ್ಲಿ ಒಂದು ದಿನ ಪೂಜಿಸಿದರೆ 1000 ವರ್ಷಗಳ ಕಾಲ ವಿಷ್ಣುವನ್ನು ಭಕ್ತಿಯಿಂದ ಪೂಜಿಸಿದ ಫಲಕ್ಕೆ ಸಮ ಎಂದು ಹೇಳಲಾಗಿದೆ. ಕನ್ಯೆಯರು ಕಾತ್ಯಾಯಿನಿ ವ್ರತವನ್ನಾಚರಿಸಲು ಕೂಡ ಈ ಮಾಸವನ್ನೆ ಸೂಚಿಸಿರುವರು. ಈ ಮಾಸದಲ್ಲಿ ಮುದ್ಗಾನ್ನದ (ಹುಗ್ಗಿ) ನೈವೇದ್ಯವು ಅತೀ ಶ್ರೇಷ್ಠವಾಗಿದೆ. ಅಕ್ಕಿ ಮತ್ತು ಹೆಸರುಬೇಳೆ ಮಿಶ್ರಿತ ವ್ಯಂಜನವಿದಾಗಿದ್ದು, ಅತಿಥಿ ಪೂಜೆ, ಅನ್ನದಾನಕ್ಕೆ ವಿಶೇಷ ಫಲ ಹೇಳ ಲಾಗಿದೆ. ಆ ಬಳಿಕ ಶ್ರೀವಿಷ್ಣುಸಹಸ್ರನಾಮ, ಲಕ್ಷ್ಮೀದೇವಿಯ ದ್ವಾದಶ ಸ್ತೋತ್ರ, ಅಷ್ಟಕ ಮುಂತಾದವು ಪಾರಾಯಣ ಮಾಡುವುದು ರೂಢಿಯಲ್ಲಿದೆ.

ಫಲ: ಧನುರ್ವಸದ ಆಚರಣೆಯಿಂದ ಧನಧಾನ್ಯ, ಸಂತಾನ, ಸಂಪತ್ತು ಅಭಿವೃದ್ಧಿ, ದೀರ್ಘಾಯುಷ್ಯ, ಇಂದ್ರಿಯ ನಿಗ್ರಹ, ಅರಿಷಡ್ವರ್ಗಗಳ ನಾಶ, ವಿಶೇಷವಾಗಿ ವೇದಾಧ್ಯಯನದ ಸುಯೋಗ ದೊರೆಯುವುದೆಂದು ಶಾಸ್ತ್ರಕಾರರು ಉಲ್ಲೇಖಿಸಿದ್ದಾರೆ. ಹಿಂದೆ ಪಾಂಡವರು ವನವಾಸದಲ್ಲಿ ಧನುರ್ವಸ ಆಚರಿಸುವ ಮೂಲಕ ತಮ್ಮ ಇಷ್ಟಾರ್ಥ ಪಡೆದರು ಹಾಗೂ ಇಂದ್ರಪದವಿಯಿಂದ ಚ್ಯುತರದ ತನ್ನ ಪತಿಗೆಂದು ಶಚಿದೇವಿಯು ಈ ವ್ರತ ಆಚರಿಸಿದಳು. ಆಗ ಇಂದ್ರದೇವ ತನ್ನ ಸ್ಥಾನ ಮತ್ತೆ ಪಡೆದರು ಎಂದು ಮಾಸ ಮಾಹಾತ್ಮ್ಯದಲ್ಲಿ ತಿಳಿಸಿದ್ದಾರೆ. ವೈಕುಂಠ ಏಕಾದಶಿ ಹಾಗೂ ಮುಕ್ಕೋಟಿ ದ್ವಾದಶಿಗಳೆಂಬ ಪುಣ್ಯತಮ ದಿನಗಳು ಈ ಮಾಸದಲ್ಲೇ ಬರುತ್ತವೆ.