ನ್ಯೂಸ್

ತೆಲುಗು ಗಾಯಕಿ ಹರಿಣಿ ತಂದೆ ಶವ ಬೆಂಗಳೂರಿನ ರೈಲ್ವೆ ಹಳಿ ಮಧ್ಯೆ ಪತ್ತೆ! ಸಾವಿನ ಸುತ್ತ ಅನುಮಾನದ ಹುತ್ತ

ಬೆಂಗಳೂರು: ತೆಲುಗು ಸಿನಿಮಾ ಗಾಯಕಿ ಹರಿಣಿ ಅವರ ತಂದೆ ಶವ ಬೆಂಗಳೂರಿನ ರೈಲ್ವೆ ಹಳಿ ಮೇಲೆ ಪತ್ತೆಯಾಗಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ.

ಹರಿಣಿ ತಂದೆ ಎ.ಕೆ.ರಾವ್ ಕೆಲ ದಿನಗಳಿಂದ ನಾಪತ್ತೆಯಾಗಿದ್ದರು. ಈ ಕುರಿತು ಕುಟುಂಬಸ್ಥರು ಸ್ಥಳೀಯ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಈ ನಡುವೆ ನ.22ರ ರಾತ್ರಿ ಯಲಹಂಕ- ರಾಜಾನುಕುಂಟೆ ರೈಲ್ವೆ ಹಳಿ ಮಧ್ಯೆ ಎ.ಕೆ.ರಾವ್​ ಶವವಾಗಿ ಪತ್ತೆಯಾಗಿದ್ದರು. ಚಾಕುವಿನಿಂದ‌ ಕೈ ಮತ್ತು ಕುತ್ತಿಗೆಯನ್ನು ಚುಚ್ಚಿದ್ದ ಸ್ಥಿತಿಯಲ್ಲಿ ಶವ ಕಂಡು ಬಂದಿತ್ತು.

ವಿಷಯ ತಿಳಿಯುತ್ತಿದ್ದಂತೆ ರಾವ್ ಕುಟುಂಬಸ್ಥರು ಇದು ಕೊಲೆ ಎಂದು ಬೆಂಗಳೂರು ನಗರ ರೈಲ್ವೆ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಇದು ಆತ್ಮಹತ್ಯೆ ಎಂದಿದ್ದಾರೆ. ಸಾವಿಗೂ ಮುನ್ನ ಎ.ಕೆ. ರಾವ್, ಬೆಂಗಳೂರಿನ ಹೋಟೆಲ್​ವೊಂದರಲ್ಲಿ ಉಳಿದುಕೊಂಡಿದ್ದರು. ಮೃತಪಟ್ಟ ಸ್ಥಳದಲ್ಲಿ ಆಧಾರ್ ಕಾರ್ಡ್, ಕೆಲ ದಾಖಲಾತಿ ಜತೆಗೆ ವಂಚನೆ ಪ್ರಕರಣವೊಂದರ ಬಗ್ಗೆ ನೀಡಬೇಕಿದ್ದ ದೂರಿನ‌ ಪ್ರತಿಯೂ ಪತ್ತೆಯಾಗಿದೆ. ಈ ಜಾಡು ಹಿಡಿದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ವಂಚನೆ ಪ್ರಕರಣ ಸಂಬಂಧ ಬೆಂಗಳೂರಲ್ಲಿ ಈ ಹಿಂದೆ ಎ.ಕೆ.ರಾವ್​ ವಿರುದ್ಧ ಕೇಸ್​ವೊಂದು ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.