ಚೆನ್ನೈ: ತಮಿಳು ಸಿನಿಮಾರಂಗದ ಖ್ಯಾತ ನಿರ್ದೇಶಕ, ಸಿನಿಮಾಟೋಗ್ರಾಫರ್ ಕೆ.ವಿ. ಆನಂದ್(54) ಹೃದಯಾಘಾತದಿಂದ ಇಂದು(ಶುಕ್ರವಾರ) ನಸುಕಿನಲ್ಲಿ ನಿಧನರಾಗಿದ್ದಾರೆ.
ನಿನ್ನೆ ರಾತ್ರಿ ಆನಂದ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಅವರೇ ಕಾರು ಚಲಾಯಿಸಿಕೊಂಡು ಚೆನ್ನೈನ ಖಾಸಗಿ ಆಸ್ಪತ್ರೆಗೆ ಹೋಗಿದ್ದರು ಎನ್ನಲಾಗಿದೆ. ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಛಾಯಾಗ್ರಾಹಕರಾಗಿ ಚಿತ್ರರಂಗಕ್ಕೆ ಬಂದಿದ್ದ ಆನಂದ್ ನಿರ್ದೇಶಕರಾಗಿ ಹಲವು ಸಿನಿಮಾಗಳನ್ನ ಮಾಡಿ ಗೆದ್ದಿದ್ದರು. ಅಯಾನ್, ಕೋ, ಮಾಟ್ರಾನ್, ಕಾಪ್ಪನ್... ಹೀಗೆ ಹಿಟ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ ಕೀರ್ತಿ ಇವರದ್ದು.
ತಮಿಳಿನಲ್ಲಿ ಸ್ಟಾರ್ ನಟರೊಂದಿಗೆ ಕೆಲಸ ಮಾಡಿರುವ ಆನಂದ್, ಕೆಲ ಸಮಯ ಫೋಟೋ ಜರ್ನಲಿಸ್ಟ್ ಆಗಿದ್ದರು. ಬಾಲಿವುಡ್ ಹಾಗೂ ದಕ್ಷಿಣ ಭಾರತೀಯ ಸಿನಿರಂಗದಲ್ಲಿ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಖ್ಯಾತ ನಿರ್ದೇಶಕನ ನಿಧನ ಸುದ್ದಿ ಕೇಳಿದ ಅಭಿಮಾನಿಗಳು ಹಾಗೂ ಸಿನಿರಗಂದ ಗಣ್ಯರು ಕಂಬನಿ ಮಿಡಿದಿದ್ದಾರೆ.