ನ್ಯೂಸ್

ಸರ್ಕಾರಕ್ಕೆ ಸುಪ್ರೀಂ​ ನೋಟಿಸ್​: ಉದ್ಧವ್​ ಠಾಕ್ರೆಗೆ ಹಿನ್ನಡೆ, ಶಿಂಧೆ ಬಣಕ್ಕೆ ಬಿಗ್​ ರಿಲೀಫ್​

ನವದೆಹಲಿ: ಮಹಾರಾಷ್ಟ್ರದಲ್ಲಿ ಶಿವಸೇನೆ ಶಾಸಕರ ಬಂಡಾಯ ಪ್ರಕರಣ ಸಂಬಂಧ ಸಿಎಂ ಉದ್ಧವ್​ ಠಾಕ್ರೆ ಪ್ರಯೋಗಿಸಿದ್ದ ಶಾಸಕ ಸ್ಥಾನ ಅನರ್ಹತೆ ಅಸ್ತ್ರ ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದ ಏಕ್​ನಾಥ್​ ಶಿಂಧೆ ತಂಡಕ್ಕೆ ಸದ್ಯ ಬಿಗ್​ ರಿಲೀಫ್​ ಸಿಕ್ಕಿದೆ. ಶಿಂಧೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜು.11ಕ್ಕೆ ಮುಂದೂಡಿರುವ ಸುಪ್ರೀಂ ಕೋರ್ಟ್, ಶಾಸಕರ ಅನರ್ಹತೆ ನಿರ್ಧಾರಕ್ಕೆ ತಡೆ ನೀಡಿದೆ. ಈ ಮೂಲಕ ಉದ್ಧವ್​ ಠಾಕ್ರೆ ಬಣಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ.

ಏಕ್​ನಾಥ್​ ಶಿಂಧೆ ಬಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​, ಶಾಸಕರ ಅನರ್ಹತೆ ನಿರ್ಧಾರ ಕೈಗೊಳ್ಳದಂತೆ ಮಹಾರಾಷ್ಟ್ರ ಸರ್ಕಾರ ಮತ್ತು ಡೆಪ್ಯೂಟಿ ಸ್ಪೀಕರ್​ಗೆ ನೋಟಿಸ್​ ಜಾರಿ ಮಾಡಿದೆ. 5 ದಿನಗಳ ಒಳಗೆ ಉತ್ತರಿಸುವಂತೆ ಕಾಲಾವಕಾಶ ನೀಡಿದೆ. ಇನ್ನು ಪ್ರಕರಣದ ವಿಚಾರಣೆಯನ್ನು ಜು.11ಕ್ಕೆ ಮುಂದೂಡಿದೆ. ಶಿಂಧೆ ಬಣದ ಶಾಸಕರಿಗೆ ಭದ್ರತೆ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್​ ಸೂಚಿಸಿದೆ.

ಬಂಡಾಯ ಶಾಸಕರಿಗೆ ಅನರ್ಹತೆಯ ನೋಟಿಸ್​ ಜಾರಿ ಮಾಡಿರುವುದನ್ನು ಪ್ರಶ್ನಿಸಿ ಶಿವಸೇನಾ ಮುಖಂಡ ಏಕನಾಥ ಶಿಂದೆ ಸುಪ್ರೀಂಕೋರ್ಟ್​​ ಮೆಟ್ಟಿಲೇರಿದ್ದಾರೆ. 16 ಶಾಸಕರಿಗೆ ಉಪಸಭಾಪತಿ ನರಹರಿ ಜಿರ್ವಾಲ್ ಹೊರಡಿಸಿದ್ದ ಅನರ್ಹತೆಯ ನೋಟಿಸ್​ ಅನ್ನು ಶಿಂಧೆ ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಿದ್ದಾರೆ. ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ತಮ್ಮನ್ನು ತೆಗೆದು ಬೇರೆಯವನ್ನು ನೇಮಿಸಿರುವುದನ್ನೂ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.