ನ್ಯೂಸ್

ಬೇಸಿಗೆಯ ತೊಂದರೆಗಳಿಗೆ ‘ಲಾವಂಚ’ದಲ್ಲಿದೆ ಸೂಕ್ತ ಪರಿಹಾರ

ರಮೇಶ್​ ಕುಮಾರ್​​ ಬಿ ಎಡಮೋಳೆ

| ಡಾ. ವೆಂಕಟ್ರಮಣ ಹೆಗಡೆ

ಬೇಸಿಗೆಯ ಝುಳ ಆಗಲೇ ಪ್ರಾರಂಭವಾಗಿಬಿಟ್ಟಿದೆ. ಈ ಸಂದರ್ಭದಲ್ಲಿ ನಾವು ಬೇಸಿಗೆಯಲ್ಲಿ ನಮ್ಮ ದೇಹವನ್ನು ತಂಪಾಗಿಸುವ ಒಂದು ವಿಶೇಷ ಗಿಡಮೂಲಿಕೆಯ ಬಗ್ಗೆ ತಿಳಿದುಕೊಳ್ಳೋಣ. ಅದು ಲಾವಂಚ. ಲಾವಂಚವು ತಂಪು ಗುಣವನ್ನು ಹೊಂದಿದ್ದು ಅತಿಯಾದ ಬಾಯಾರಿಕೆ, ಜ್ವರ, ರಕ್ತಕ್ಕೆ ಸಂಬಂಧಪಟ್ಟ ಸಮಸ್ಯೆಗಳು, ಬೆವರಿನ ವಾಸನೆ, ಅತಿಯಾದ ಬೆವರುವಿಕೆ, ಮೂತ್ರದ ತೊಂದರೆಗಳು, ಚರ್ಮದ ಸಮಸ್ಯೆಗಳು, ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಆಗುವ ವಾಂತಿ, ಗುಣವಾಗದೇ ಇರುವ ಗಾಯ, ಮಧುಮೇಹ ಮುಂತಾದ ತೊಂದರೆಗಳಲ್ಲಿ ತುಂಬಾ ಉಪಯುಕ್ತ. ತಂಪು ಗುಣವನ್ನು ಹೊಂದಿದ್ದರೂ ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಇದು ದೇಹದಲ್ಲಿರುವ ವಿಷವನ್ನು ಹೊರಹಾಕಲು ಅಂದರೆ ದೇಹವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದರ ಪರಿಮಳಕ್ಕೆ ಬ್ರಿಟಿಷರು ಕೂಡ ಮನಸೋತಿದ್ದರು. ಹಾಗಾಗಿ ಬೇಸಿಗೆಯಲ್ಲಿ ಅವರು ಕಿಟಕಿಗಳಿಗೆ ಇದರ ಬೇರಿನ ಪರದೆಯನ್ನು ಇಳಿಬಿಟ್ಟು ಅದಕ್ಕೆ ಆಗಾಗ ನೀರನ್ನು ಚಿಮುಕಿಸುತ್ತಿದ್ದರು. ಇದರಿಂದ ಮನೆಯ ವಾತಾವರಣ ತಂಪಾಗಿರಲು ಸಾಧ್ಯವಾಗುತ್ತಿತ್ತು.

ಬೇಸಿಗೆಯಲ್ಲಿ ರಾಸಾಯನಿಕ ಭರಿತ ಸಿದ್ಧ ತಂಪುಪಾನೀಯಗಳನ್ನು ಸೇವಿಸುವುದು ಹಲವರ ರೂಢಿ. ಆದರೆ ಇದರಿಂದ ಆರೋಗ್ಯ ಹಾಳಾಗುವುದು ಶತಃಸಿದ್ಧ. ಆದ್ದರಿಂದ ಆರೋಗ್ಯ ಹೆಚ್ಚಿಸುವ, ಚರ್ಮದ ತೊಂದರೆಗಳನ್ನು ನಿವಾರಿಸುವ, ಚರ್ಮದ ಸೌಂದರ್ಯವನ್ನು ಕಾಪಾಡುವ, ಉರಿಮೂತ್ರ, ಚರ್ಮದಲ್ಲಿ ಉರಿ, ತುರಿಕೆ, ಬೆವರುಸಾಲೆ, ಚರ್ಮ ಕಪ್ಪಾಗುವುದು ಮುಂತಾದ ಉಷ್ಣದಿಂದಾಗುವ ಸಮಸ್ಯೆಗಳನ್ನು ನಿವಾರಿಸುವ ಒಂದು ಪಾನೀಯವನ್ನು ಮಾಡಿಕೊಂಡು ಬಳಸುವ ವಿಧಾನವನ್ನು ತಿಳಿದುಕೊಳ್ಳೋಣ. ಲಾವಂಚ ಮತ್ತು ರಕ್ತ ಚಂದನಗಳನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ಇಡೀ ದಿನ ಮನೆಯವರಿಗೆಲ್ಲಾ ಸಾಲುವಷ್ಟು ನೀರಿಗೆ ಹಾಕಿ ಕುದಿಸಬೇಕು. ನೀರು ಕುದಿಯುತ್ತಿದ್ದಂತೆಯೇ ಅದಕ್ಕೆ ಸೊಗದೇ ಬೇರಿನ ಪುಡಿ ಅಥವಾ ಚೂರುಗಳನ್ನು ಹಾಕಿ ಪಾತ್ರೆಯನ್ನು ಮುಚ್ಚಿ ಬೆಂಕಿ ಆರಿಸಬೇಕು. ನೀರು ತಣಿದ ನಂತರ ಮನೆಮಂದಿಯೆಲ್ಲಾ ಇಡೀ ದಿನ ಇದೇ ನೀರನ್ನು ಸೇವಿಸಬಹುದು. ನಾಲ್ಕು ಲೀಟರ್ ನೀರನ್ನು ತಯಾರಿಸುವುದಿದ್ದರೆ ಲಾವಂಚದ ತುಂಡುಗಳನ್ನು ನಾಲ್ಕು ಚಮಚದಷ್ಟು ಮತ್ತು ಸೊಗದೇ ಬೇರು ಹಾಗೂ ಚಂದನಗಳನ್ನು ಒಂದು ಚಮಚದಷ್ಟು ಬಳಸಬೇಕು.

ಜ್ವರ ಬಂದಾಗ ಲಾವಂಚ, ಭದ್ರಮುಷ್ಟಿ, ಸ್ವಲ್ಪೇ ಸ್ವಲ್ಪ ಶುಂಠಿಯನ್ನು ಹಾಕಿ ಎರಡು ತಂಬಿಗೆ ನೀರು ಹಾಕಿ ಒಂದು ತಂಬಿಗೆ ಬತ್ತಿಸಿ ಆ ನೀರನ್ನು ಇಡೀ ದಿನ ಕುಡಿಯುತ್ತಿರುವುದರಿಂದ ಜ್ವರ, ಭೇದಿ, ಬಾಯಾರಿಕೆ, ಉಷ್ಣತೆ, ಸುಸ್ತು ಕಡಿಮೆಯಾಗಿ ಹಿತವಾದ ಶಕ್ತಿ ಬರುತ್ತದೆ. ಅತಿಯಾದ ಉಷ್ಣತೆಯ ಕಾರಣದಿಂದ ಬಹಳಷ್ಟು ಜನರಿಗೆ ದೇಹದ ಬಣ್ಣ ಕಪ್ಪಾಗಿರುತ್ತದೆ. ಅಂತಹ ಸಂದರ್ಭದಲ್ಲಿ ನೀರನ್ನು ಕುದಿಸುವಾಗ ನಾಲ್ಕು ತುಂಡು ಲಾವಂಚವನ್ನು ಹಾಕಿ ನೀರು ಕುದಿಸಿ ಸೋಸಿ ಇಟ್ಟುಕೊಂಡು ಆ ನೀರನ್ನು ನಿತ್ಯವೂ ಸೇವಿಸುವ ರೂಢಿಯನ್ನು ಬೆಳೆಸಿಕೊಂಡರೆ ಅನುಕೂಲವಾಗುತ್ತದೆ. ಜೊತೆಗೆ ಲಾವಂಚ, ಜೇಷ್ಠಮಧು, ಸೊಗದೆ ಬೇರು, ಮಂಜಿಷ್ಟ, ಅರಿಶಿಣಗಳನ್ನು ಸಮ ಪ್ರಮಾಣದಲ್ಲಿ ಸೇರಿಸಿ ಹಾಲು ಅಥವಾ ರೋಸ್ ವಾಟರ್​ನಲ್ಲಿ ಕಲಸಿ ಪೇಸ್ಟ್​ಮಾಡಿ ಫೇಸ್ ಪ್ಯಾಕ್ ಮಾಡಿಕೊಳ್ಳುವುದರಿಂದಲೂ ಬಣ್ಣ ಸುಧಾರಿಸಲು ಸಹಾಯವಾಗುತ್ತದೆ. ಚರಕ ಸಂಹಿತೆಯಲ್ಲಿ ರ್ವ್ಯಣ ಗಣ ಅಂದರೆ ಚರ್ಮದ ಬಣ್ಣವನ್ನು ಸುಧಾರಿಸುವ ಅಥವಾ ಕಾಂತಿಯನ್ನು ಹೆಚ್ಚಿಸುವ ದ್ರವ್ಯಗಳ ಗುಂಪಿನಲ್ಲಿ ಲಾವಂಚವನ್ನು ಸೇರಿಸಿದ್ದಾರೆ.

ಉರಿ, ಚರ್ಮದ ಸಮಸ್ಯೆ, ಅತಿಯಾದ ಬೆವರುವಿಕೆಯಲ್ಲಿ ದೇಹದ ಮೇಲೆ ಹಚ್ಚಲು ಲಾವಂಚಕ್ಕಿಂತ ಉತ್ತಮವಾದ ದ್ರವ್ಯ ಇನ್ನೊಂದಿಲ್ಲ ಎಂದು ಚರಕ ಸಂಹಿತೆಯಲ್ಲಿ ಹೇಳಿದ್ದಾರೆ. ಅದರ ಬೇರನ್ನು ಪುಡಿಮಾಡಿ ನೀರು ಹಾಕಿ ಕಲಸಿ ಆ ಪೇಸ್ಟ್ ಅನ್ನು ಉರಿ, ಗಾಯ, ಸುಟ್ಟ ಗಾಯ, ಚರ್ಮದ ಕಾಯಿಲೆಯಲ್ಲಿ ಉರಿ ಇದ್ದರೆ ಅಂತಹ ಕಡೆಗಳಲ್ಲಿ ಗುಣವಾಗುವವರೆಗೆ ನಿತ್ಯವೂ ಹಚ್ಚಬೇಕು. ಲಾವಂಚವು ಬಹುತೇಕ ಎಲ್ಲಾ ಗ್ರಂಥಿಗೆ ಅಂಗಡಿಗಳಲ್ಲಿ ಸಿಗುತ್ತದೆ. ಅದರ ಬೆಲೆ ಕೂಡಾ ಕಡಿಮೆಯೇ. ಹಾಗಾಗಿ ಪ್ರತಿಯೊಬ್ಬರೂ ಇದನ್ನು ಸುಲಭವಾಗಿ ಬಳಸಬಹುದು.