ಬೆಂಗಳೂರು: ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಫೆಬ್ರವರಿ ಮೊದಲ ವಾರ ರಾಜ್ಯಕ್ಕೆ ಕರೊನಾ ಸಂಕಷ್ಟ ಎದುರಾಗಲಿದೆ. ಎಲ್ಲರೂ ಲಸಿಕೆ ತೆಗೆದುಕೊಳ್ಳಿ, ಕರೊನಾ ಮಾರ್ಗಸೂಚಿ ಪಾಲಸಿ ಎಂದು ಮನವಿ ಮಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ಲಾಕ್ಡೌನ್ ಮಾಡಲ್ಲ ಎಂದಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಕರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಇಲ್ಲದೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಆತಂಕಕಾರಿಯಾದ ನಿಯಮ ಜಾರಿ ಮಾಡಲ್ಲ. ಲಾಕ್ಡೌನ್ ಒಂದದಿಂದಲೇ ಸೋಂಕು ನಿಯಂತ್ರಣ ಆಗುವುದಿಲ್ಲ. ಎರಡು ಬಾರಿ ಲಾಕ್ಡೌನ್ ಮಾಡಿ ಜನರಿಗೆ ಸಮಸ್ಯೆ ಆಗಿದೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ ಕೂಡ ಆರ್ಥಿಕ ನಷ್ಟ ಆಗದಂತೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ ಎಂದು ವಿವರಿಸಿದರು.
ರಾಜ್ಯದಲ್ಲಿ ಸೋಂಕು ದಿನೇ ದಿನೇ ಹೆಚ್ಚಳ ಆಗ್ತಿದೆ. ನರ್ಸ್ಗಳೂ ಸೋಂಕಿಗೆ ತುತ್ತಾಗುತ್ತಿದ್ದಾರೆ. ಇದು ನಮಗೆ ಆಂತಕದ ವಿಷಯ. ಹಾಗಾಗಿ ಮತ್ತಷ್ಟು ಎಚ್ಚರಿಕೆ ಅವಶ್ಯಕ. ಕಳೆದ ವಾರದಿಂದ ವೀಕೆಂಡ್ ಲಾಕ್ ಮಾಡಿದ್ದೇವೆ. 7 ದಿನಕ್ಕೆ ಸೋಂಕು ಕಡಿಮೆ ಆಗುವುದಿಲ್ಲ. ಮೊದಲ ಎರಡು ಅಲೆಯಲ್ಲಿ 14 ದಿನಗಳ ಚೈನ್ ಇತ್ತು. ಆದರೆ ಈ ಅಲೆಯಲ್ಲಿ ಸ್ವಲ್ಪ ಕಡಿಮೆ ಇದೆ. ಈ ಸೋಂಕು 5-6 ಪಟ್ಟು ವೇಗವಾಗಿ ಹರಡುತ್ತಿದೆ. ಹಾಗಾಗಿ ಇನ್ನು ಸ್ವಲ್ಪ ದಿನ ಹೋದರೆ ವೀಕೆಂಡ್ ಕರ್ಫ್ಯೂ ರಿಸಲ್ಟ್ ಸಿಗಬಹುದು ಎಂದು ಸುಧಾಕರ್ ತಿಳಿಸಿದರು.
ಬಹಿರಂಗ ಸಮಾವೇಶ, ಗುಂಪು ಗೂಡುವುದು ಮಾಡಬೇಡಿ. ಒಂದೂವರೆ ತಿಂಗಳು ಎಚ್ಚರಿಕೆಯಿಂದ ಇರಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದ ಸುಧಾಕರ್, ರಾಜ್ಯದಲ್ಲಿ ಕರೊನಾ ಇನ್ನು ಪೀಕ್ಗೆ ಹೋಗಿಲ್ಲ. ತಜ್ಞರು ಕೂಡ ಇದನ್ನ ಹೇಳಿದ್ದಾರೆ. ಫೆಬ್ರವರಿ ಮೊದಲ ವಾರ ಪೀಕ್ಗೆ ಹೋಗುತ್ತದೆ. 3-4ನೇ ವಾರದಿಂದ ಕಡಿಮೆ ಆಗುತ್ತೆ ಅಂತ ತಜ್ಞರು ಹೇಳಿದ್ದಾರೆ ಎಂದು ವಿವರಿಸಿದರು.