ನ್ಯೂಸ್

ಧರ್ಮ ಸೂಕ್ಷ್ಮ ತಿಳಿವಳಿಕೆಯೇ ಲೋಕ ಸೂತ್ರದ ಸುಳಿವು

ಪಿರಿದೆಲ್ಲ ಮತನೀತಿಗಳಿಗಿಂತ ಜೀವಿತವು|

ನೆರೆಬಂದ ನದಿ ದಡಕೆ ಬಾಗಿ ಪರಿಯುವುದೇಂ?||

ಧರುಮಸೂಕ್ಷ್ಮದ ತಿಳಿವೆ ಲೋಕಸೂತ್ರದ ಸುಳುವು|

ಅರಸು ಜೀವಿತ ಹಿತವ-ಮಂಕುತಿಮ್ಮ||524||

ಜೀವಿತವು ಎಲ್ಲಾ ಮತನೀತಿಗಳಿಗಿಂತಲೂ ಹಿರಿದು. ನೆರೆ ಬಂದ ನದಿಯು ದಡವಿದೆಯೆಂದು ಬಾಗಿ, ತನ್ನ ಮಿತಿಯೊಳಗೆಯೇ ಹರಿಯುತ್ತದೆಯೇನು? ಧರ್ಮ ಸೂಕ್ಷ್ಮದ ತಿಳಿವಳಿಕೆಯೇ ಲೋಕ ಸೂತ್ರದ ಸುಳಿವು. ಹಾಗಾಗಿ ಏನೇ ಮಾಡಿದರೂ ಜೀವನಕ್ಕೆ ಯಾವುದು ಹಿತವೋ ಅದನ್ನು ಅರಸು ಎನ್ನುತ್ತದೆ ಈ ಕಗ್ಗ.

ಎಲ್ಲಾ ಮತ-ಧರ್ಮಗಳಿಗೂ ಆಧಾರವಾಗಿ ದೇವರ ಪರಿಕಲ್ಪನೆ ಇದೆ. ಮತದ ನೀತಿ-ನಿಯಮಗಳು, ಧರ್ಮ ಗ್ರಂಥಗಳು ಜೀವನದ ಮಹತ್ವ ಮತ್ತು ಉದ್ದೇಶವನ್ನು ವಿವರಿಸುತ್ತವೆ. ಆದರೆ ಲೋಕಹಿತವನ್ನು ಬಯಸದೆ, ಸ್ವಜನ ಹಿತವನ್ನಷ್ಟೇ ಹಾರೈಸುವ ಮತನೀತಿಗಳು ಸಾಮಾಜಿಕ ಸಾಮರಸ್ಯಕ್ಕೆ ದಕ್ಕೆಯುಂಟು ಮಾಡುತ್ತವೆ. ಪ್ರಾಜ್ಞರಿಂದ ಸ್ವೀಕೃತವಾದ, ಹಿರಿಯರಿಂದ ಅನುಸರಿಸಲ್ಪಟ್ಟ, ದೀರ್ಘಕಾಲದಿಂದ ಉಳಿದುಬಂದಿರುವ ನೀತಿ-ನಿಯಮಗಳು, ತತ್ತ್ವ-ಸಿದ್ಧಾಂತಗಳು ಜನರನ್ನು ಒಗ್ಗೂಡಿಸುತ್ತವೆ. ಸತತ ವಿಶ್ಲೇಷಣೆ, ವಿಮರ್ಶೆಗೆ ಒಳಗಾಗುತ್ತಾ ಕಾಲಕಾಲಕ್ಕೆ ಮಾರ್ಪಾಡುಗಳನ್ನು ಮಾಡಿಕೊಳ್ಳುವ ಸಂಪ್ರದಾಯಗಳ ಹಿಂದೆ ವಿಶಾಲವಾದ ಚಿಂತನೆ ಇರುತ್ತದೆ.

ಮಾನವೀಯತೆಯನ್ನು ಮೀರಿದ ಧರ್ಮವಾಗಲಿ, ದೇವರ ಪರಿಕಲ್ಪನೆಯಾಗಲಿ ಅದರಲ್ಲಿರುವುದಿಲ್ಲ. ಜಗತ್ತನ್ನು ಬದಲಾವಣೆಗೆ ಒಡ್ಡುತ್ತಾ ಮುಂದೋಡುವ ಕಾಲನ ಓಟದಲ್ಲಿ ಸಂಪ್ರದಾಯ, ಜೀವನ ಶೈಲಿ, ಪ್ರಾಮುಖ್ಯತೆಗಳೂ ಬದಲಾಗುವುದು ಸ್ವಾಭಾವಿಕ. ನದಿಯಲ್ಲಿ ನೆರೆ ಬಂದಾಗ ಅದು ಎರಡೂ ದಂಡೆಗಳ ಒಳಗೆಯೇ ಇರುವ ನಿಯಮವನ್ನು ಪಾಲಿಸುತ್ತದೆಯೇನು? ನೀರಿನ ರಭಸ, ಒತ್ತಡಗಳಿಂದಾಗಿ ತೀರವನ್ನು ಸವರಿಕೊಂಡು ವಿಸ್ತಾರವಾಗಿ ಪ್ರವಹಿಸುತ್ತದೆ. ಏನೇ ಆದರೂ ಕಡಲನ್ನು ಸೇರುವ ತನ್ನ ಗುರಿಯನ್ನು ನದಿಯು ಬಿಟ್ಟುಕೊಡುವುದಿಲ್ಲ. ಶಾಸ್ತ್ರ-ಸಂಪ್ರದಾಯ, ಮತಾಚರಣೆಗಳೆಲ್ಲವೂ ಜೀವನದ ಎರಡು ತೀರಗಳಂತೆ. ಜೀವನ ಪ್ರವಾಹದಲ್ಲಿ ಹೇಗೆ ಬದುಕಬೇಕು ಎನ್ನುವುದನ್ನು ಅವು ಬೋಧಿಸುತ್ತವೆ. ಬದುಕಿನೊಳಗೆ ಹಾಸುಹೊಕ್ಕಾಗಿರುವ ಹತ್ತು ಹಲವು ಸಂಪ್ರದಾಯ, ಮತಾಚರಣೆ, ನಂಬಿಕೆಗಳು ಕಾಲ ಧರ್ಮಕ್ಕೆ ಅನುಗುಣವಾಗಿ, ಮಾನವ ಹಿತಕ್ಕಾಗಿ ಬದಲಾವಣೆಗೆ ಒಳಗಾಗಬೇಕು.

ಎಲ್ಲಾ ಮತಧರ್ಮಗಳ ಸಿದ್ಧಾಂತಗಳು ಮಾನವೀಯತೆಯಿಂದ ಕೂಡಿರಬೇಕು. ಅಂಧಶ್ರದ್ಧೆ, ಅರ್ಥವಿಲ್ಲದ ನಂಬಿಕೆಗಳು, ವಿವೇಚನಾ ರಹಿತ ಆಚರಣೆಗಳು ಸಾಮಾಜಿಕ ಪಿಡುಗಾಗಿ ಪರಿಣಮಿಸುತ್ತವೆ. ಭಯೋತ್ಪಾದನೆಗೆ ಕಾರಣವಾಗುತ್ತವೆ. ಮಾನವೀಯತೆಯನ್ನು ಮರೆತ, ಸ್ವಾರ್ಥ ಚಿಂತನೆಯಷ್ಟೇ ಇರುವ, ಸಂಕುಚಿತ ದೃಷ್ಟಿಯ ಮತನೀತಿಗಳು ಬಹಳ ಕಾಲ ಉಳಿಯುವುದಿಲ್ಲ. ಕಣ್ಣಿನ ಇದಿರಿನಲ್ಲಿಯೇ ಅಪಘಾತವಾದಾಗ ತೊಂದರೆಗೀಡಾ ದವರಿಗೆ ಮಾನವೀಯತೆಯಿಂದ ಸ್ಪಂದಿಸುವ ಜೀವಗಳಿಗೆ ಆ ಕ್ಷಣಕ್ಕೆ ಯಾವ ತತ್ತ್ವ-ಸಿದ್ದಾಂತಗಳೂ ನೆನಪಾಗುವುದಿಲ್ಲ. ಹಿರಿಯರು, ಧರ್ಮಗುರುಗಳು ಹೇಳಿದುದನ್ನು ಅನುಸರಿಸುವುದು ತಪ್ಪಲ್ಲ. ಅವು ಅನುಭವದ ಮಾತುಗಳೆ ಇರಬಹುದು. ಆದರೆ ಅವು ತಾನಿರುವ ಸಂದರ್ಭಕ್ಕೆ, ಕಾಲಕ್ಕೆ ಸರಿಹೊಂದುತ್ತದೆಯೇ ಎಂದು ಪರಾಮಶಿಸಬೇಕು. ಕುರುಡರಂತೆ ಅನುಸರಿಸುವುದು ಖಂಡಿತಾ ಸರಿಯಲ್ಲ.

ಮತದ ಸಿದ್ಧಾಂತಗಳಿಗಾಗಿ ಜೀವಹಾನಿಯನ್ನು ಮಾಡು ವುದು ಲೋಕನೀತಿಯಲ್ಲ. ಬಾಳಿನ ಗೊಂದಲಗಳಲ್ಲಿ ಮತದ ನೀತಿಯನ್ನು ಮೀರಿ ಮನದ ಮಾತಿನಂತೆ ನಡೆದುಕೊಳ್ಳುವುದು ಸಾಧ್ಯವಾಗಬೇಕು. ಜೀವನ ಶೈಲಿಯನ್ನು ಶಿಸ್ತುಬದ್ದಗೊಳಿಸುವ ಮತ ನೀತಿಗಳನ್ನು ವಿವೇಚನೆಯಿಂದ ಅನುಸರಿಸಬೇಕು. ಕೆಲವೊಮ್ಮೆ ಎದುರಾಗುವ ಧರ್ಮಸಂಕಟದ ಸಂದರ್ಭದಲ್ಲಿ ಅಂತರಂಗವು ನುಡಿದಂತೆ ನಡೆಯುವುದೆ ಲೋಕಹಿತದ ಸೂತ್ರ. ಏನನ್ನೇ ಮಾಡಿದರೂ ಸಾಮಾಜಿಕ ಜೀವನವನ್ನು ಹಾಳುಗೆಡಹದೆ ಎಲ್ಲರ ಜೀವನದ ಹಿತವನ್ನು ಕಾಯ್ದುಕೊಳ್ಳುವಂತಾಗಬೇಕು. ಹೀಗೆ ಮಾನವೀಯತೆಯಿಂದ ನಡೆದುಕೊಳ್ಳುವ ಸಂದರ್ಭದಲ್ಲಿ ಅನೂಚಾನವಾಗಿ ನಡೆದು ಬಂದ ಸಂಪ್ರದಾಯಗಳ ಶಿಸ್ತನ್ನು, ಮತದ ನೀತಿ-ನಿಯಮಗಳನ್ನು ಉಲ್ಲಂಘಿಸಬೇಕಾದೀತು. ನದಿಯ ಆಚೆ ದಡವನ್ನು ಸೇರಲೆಂದು ದೋಣಿಯನ್ನು ಏರಿದ ಪಯಣಿಗನಿಗೆ ದೋಣಿಯೇ ಮುಖ್ಯವಾಗಬಾರದು. ಮಾನವೀತೆಯನ್ನುಳಿದು ಯಾವ ಮತ-ಧರ್ಮ,ಜಾತಿ-ಪಂಥಗಳಿಲ್ಲ ಎಂಬ ಅರಿವು ಲೋಕವನ್ನು ಒಗ್ಗೂಡಿಸುತ್ತದೆ. ಜೀವನದಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತದೆ.