ನ್ಯೂಸ್

ಶಾಲೆ ಮೇಲೆ ಪುಲ್ವಾಮಾ ಮಾದರಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿ, ಪೊಲೀಸರ ಕೈಗೆ ಸಿಕ್ಕಿಬಿದ್ದ 10ನೇ ತರಗತಿ ವಿದ್ಯಾರ್ಥಿ

ಬರೇಲಿ: ಶಾಲೆ ಆಡಳಿತ ಮಂಡಳಿಗೆ ಬೆದರಿಕೆ ಪತ್ರ ಬರೆದ 10 ನೇ ತರಗತಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಾನು ಶಾಲೆಯನ್ನು ಬಿಡುವಾಗ ಎರಡು ಲಕ್ಷ ರೂಪಾಯಿ ಹಣ ಪಾವತಿ ಮಾಡಬೇಕು. ಇಲ್ಲದಿದ್ದರೆ ಪುಲ್ವಾಮಾ ಮಾದರಿಯ ದಾಳಿ ಮಾಡುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದ ವಿದ್ಯಾರ್ಥಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಈ 10ನೇ ತರಗತಿ ವಿದ್ಯಾರ್ಥಿ ಪೇಪರ್​ ಹಂಚುವ ಕೆಲಸವನ್ನೂ ಮಾಡುತ್ತಾನೆ ಎನ್ನಲಾಗಿದೆ.

ಎರಡು ಲಕ್ಷ ರೂಪಾಯಿ ನೀಡದೆ ಹೋದರೆ ಶಾಲೆ ಮೇಲೆ ಪುಲ್ವಾಮಾ ಮಾದರಿಯ ದಾಳಿ ನಡೆಸಲಾಗುವುದು. ಶಾಲೆ ಆವರಣದಲ್ಲಿ ಬಾಂಬ್​ ಇಡಲಾಗಿದೆ ಎಂದು ನಮಗೊಂದು ಪತ್ರ ಬಂದಿದೆ ಎಂದು ಶಾಲೆ ಆಡಳಿತ ಮಂಡಳಿ ಮ್ಯಾನೇಜರ್​ ಅನಿಲ್​ ಸಿಂಗ್​ ಅವರು ಭಾನುವಾರ ಪೊಲೀಸರಿಗೆ ದೂರು ನೀಡಿದ್ದರು.

ಬಾಂಬ್​ ಇದೆ ಎಂದ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಬಾಂಬ್​ ನಿಷ್ಕ್ರಿಯ ದಳಕ್ಕೆ ಕರೆ ಮಾಡಿದರು. ಆದರೆ ಪರಿಶೀಲನೆ ನಡೆಸಿದಾಗ ಶಾಲೆಯಲ್ಲಿ ಎಲ್ಲೂ ಬಾಂಬ್​ ಇರಲಿಲ್ಲ. ಹಾಗೇ ಮಂಗಳವಾರ ಇನ್ನೊಂದು ಪತ್ರ ಆಡಳಿತ ಮಂಡಳಿ ಕೈ ಸೇರಿತು.

ಆ ಪತ್ರವನ್ನು ವಶಪಡಿಸಿಕೊಂಡ ಪೊಲೀಸರು ಅದರ ಹಿಂಭಾಗದಲ್ಲಿ 10 ನೇ ತರಗತಿಯ ವಿಜ್ಞಾನ ವಿಷಯದ ಬರಹಗಳು ಇದ್ದುದು ಕಂಡುಬಂತು. ಅದನ್ನೇ ಹಿಡಿದು ಪರಿಶೀಲನೆ ನಡೆಸಿದಾಗ ಪತ್ರ ಬರೆದ 10ನೇ ತರಗತಿ ವಿದ್ಯಾರ್ಥಿ ಸಿಕ್ಕಿಬಿದ್ದ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಆದರೆ ಈ ಪ್ರಕರಣದಲ್ಲಿ ಇನ್ನೊಬ್ಬನ ಕೈವಾಡವಿದೆ. ಆತನನ್ನು ಪತ್ತೆಹಚ್ಚಲು ಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಶಾಲೆಯಲ್ಲಿ ಸುಮಾರು 400 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.(ಏಜೆನ್ಸೀಸ್​​)