ನ್ಯೂಸ್

ವಿದ್ಯುತ್ ಕಂಬ ಬಿದ್ದು ವಿದ್ಯಾರ್ಥಿನಿ ಗಂಭೀರ; ಕೇಬಲ್ ವೈಯರ್ ಕಾರಣ

ಬೆಂಗಳೂರು: ರಸ್ತೆಬದಿಯ ವಿದ್ಯುತ್ ಕಂಬ ವಿದ್ಯಾರ್ಥಿನಿ ಮೇಲೆ ಬಿದ್ದು, ಗಂಭೀರ ಸುಟ್ಟ ಗಾಯಗಳಾಗಿವೆ.

ಹೊಸೂರು ರಸ್ತೆ ಕ್ರೈಸ್ಟ್ ಕಾಲೇಜು ವಿದ್ಯಾರ್ಥಿನಿ ಪ್ರಿಯಾ(20) ಗಾಯಾಳು. ದೆಹಲಿ ಮೂಲದ ಪ್ರಿಯಾ, ಕ್ರೈಸ್ಟ್ ಕಾಲೇಜಿನಲ್ಲಿ ಬಿಎ ದ್ವಿತೀಯ ವರ್ಷದಲ್ಲಿ ಓದುತ್ತಿದ್ದಾಳೆ. ಕಾಲೇಜು ಸಮೀಪದ ಪೇಯಿಂಗ್ ಗೆಸ್ಟ್‌ನಲ್ಲಿ ಉಳಿದುಕೊಂಡಿದ್ದಳು. ಮಂಗಳವಾರ ಮಧ್ಯಾಹ್ನ 1.45ರಲ್ಲಿ ಊಟ ಮಾಡಲೆಂದು ಕಾಲೇಜಿನಿಂದ ಹೊರಗೆ ಹೋಗಬೇಕಾದರೆ ಕಂಬ ಬಿದ್ದು, ವಿದ್ಯುತ್ ಪ್ರವಹಿಸಿ ಶೇ.40 ಸುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ರೈಸ್ಟ್ ಕಾಲೇಜು ಸಮೀಪದ ರಸ್ತೆಬದಿ ಅಳವಡಿಸಿದ್ದ ವಿದ್ಯುತ್ ಕಂಬಕ್ಕೆ ಕೇಬಲ್ ಅಳವಡಿಸಲಾಗಿತ್ತು. ಈ ವೈಯರ್‌ಗಳು ರಸ್ತೆಯಲ್ಲಿ ಚಲಿಸುತ್ತಿದ್ದ ವಾಟರ್ ಟ್ಯಾಂಕರ್‌ಗೆ ಸಿಲುಕಿಕೊಂಡಿದ್ದು, ಚಾಲಕ ವಾಹನ ಚಲಾಯಿಸಿದಾಗ ಕಂಬ ಯುವತಿ ಮೇಲೆ ಬಿದ್ದಿದೆ. ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿನಿ ಸುಟ್ಟ ಗಾಯಗಳಾಗಿವೆ.

ಟ್ಯಾಂಕರ್ ನಿಲ್ಲಿಸದೆ ಚಾಲಕ ಪರಾರಿ ಆಗಿದ್ದಾನೆ. ಸ್ಥಳೀಯರು ವಿದ್ಯಾರ್ಥಿಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಮೈಕೋ ಲೇಔಟ್ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾಟರ್ ಟ್ಯಾಂಕರ್ ಚಾಲಕನ ಬಂಧನಕ್ಕೆ ಬಲೆಬೀಸಿದ್ದಾರೆ.