ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ವಿವಿಧ ಜಿಲ್ಲೆಗಳ ರಾಷ್ಟ್ರಭಕ್ತ ಹಾಗೂ ಧರ್ಮನಿಷ್ಠ ವಕೀಲರ ಧರ್ಮಸಂಸ್ಥಾಪನೆ ಮತ್ತು ಹಿಂದೂ ರಾಷ್ಟ್ರದ ಸಂಕಲ್ಪವನ್ನು ಜಾಗೃತಗೊಳಿಸಲು ಬೋಳೂರಿನ ಪ್ರಭು ನಿವಾಸ ಸಭಾಗೃಹದಲ್ಲಿ ವಿಶೇಷ ಶಿಬಿರ ನಡೆಯಿತು.
ಮಂಗಳೂರು: ಸ್ವಾತಂತ್ರ್ಯವೀರ ಸಾವರ್ಕರ್, ಲೋಕಮಾನ್ಯ ತಿಲಕ್, ಮದನ್ ಮೋಹನ್ ಮಾಳವೀಯ ಮತ್ತು ಲಾಲಾ ಲಜಪತ್ ರಾಯ್ ಅವರಂತಹ ಮಹಾನ್ ನಾಯಕರ ಆದರ್ಶಗಳನ್ನಿಟ್ಟುಕೊಂಡು, ಇಂದು ದೇಶ ಮತ್ತು ಧರ್ಮದ ರಕ್ಷಣೆಗಾಗಿ ವಕೀಲರು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯ ಇದೆ. ಎಲ್ಲ ನ್ಯಾಯವಾದಿಗಳ ಉದ್ದೇಶ ಮತ್ತು ಗುರಿ ಒಂದೇ ಆದಾಗ ಮಾತ್ರ ಅದನ್ನೊಂದು ಬಲಿಷ್ಠ ಸಂಘಟನೆಯನ್ನಾಗಿ ರೂಪಿಸಲು ಸಾಧ್ಯ ಎಂದು ಹಿಂದೂ ಜನಜಾಗೃತಿ ಸಮಿತಿ ಮುಂದಾಳು ಗುರುಪ್ರಸಾದ ಗೌಡ ಹೇಳಿದರು.
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕರ್ನಾಟಕದ ವಿವಿಧ ಜಿಲ್ಲೆಗಳ ರಾಷ್ಟ್ರಭಕ್ತ ಹಾಗೂ ಧರ್ಮನಿಷ್ಠ ವಕೀಲರ ಸಂಘಟಿಸಿ, ಅವರಲ್ಲಿ ಧರ್ಮಸಂಸ್ಥಾಪನೆ ಮತ್ತು ಹಿಂದೂ ರಾಷ್ಟ್ರದ ಸಂಕಲ್ಪವನ್ನು ಜಾಗೃತಗೊಳಿಸಲು ಬೋಳೂರಿನ ಪ್ರಭು ನಿವಾಸ ಸಭಾಗೃಹದಲ್ಲಿ ನಡೆದ ವಿಶೇಷ ಶಿಬಿರದಲ್ಲಿ ಮಾತನಾಡಿದರು.
ಸನಾತನ ಹಿಂದೂ ಧರ್ಮವು ಜಗತ್ತಿಗೆ ವಸುಧೈವ ಕುಟುಂಬಕಂ ಮತ್ತು ಸರ್ವೇ ಜನಾಃ ಸುಖಿನೋ ಭವಂತು ಎಂಬ ಜಾಗತಿಕ ಶಾಂತಿಯ ದಿವ್ಯ ಚಿಂತನೆಯನ್ನು ನೀಡಿದೆ. ಆದರೆ ಇದಕ್ಕೆ ಸಂಪೂರ್ಣ ವಿರುದ್ಧವಾಗಿ, ಇಸ್ಲಾಮಿಕ್ ರಾಷ್ಟ್ರನ್ನು ಸ್ಥಾಪಿಸುವ ಮತಾಂಧ ಆಕಾಂಕ್ಷೆಯೊಂದಿಗೆ ಸರ್ ತನ್ ಸೆ ಜುದಾ (ಶಿರಚ್ಛೇದನ) ದಂತಹ ದೇಶವಿಭಜಕ ಘೋಷಣೆಗಳನ್ನು ಕೂಗಲಾಗುತ್ತಿದೆ. ಒಂದು ಕಡೆ ಸಾತ್ವಿಕ, ಆದರ್ಶ ಹಿಂದೂ ರಾಷ್ಟ್ರ’ದ ಭವ್ಯ ಕಲ್ಪನೆಯಿದ್ದರೆ, ಮತ್ತೊಂದು ಕಡೆ ಧಮಾರ್ಂಧತೆ ಮತ್ತು ಹಿಂಸೆಯ ಹಾದಿ ಎದ್ದು ಕಾಣುತ್ತಿದೆ ಎಂದರು.
ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಮೋಹನ ಗೌಡ ಮಾತನಾಡಿ, ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಕೇವಲ ಮತಬ್ಯಾಂಕ್ ರಾಜಕಾರಣ ಮತ್ತು ಹಿಂದೂ ವಿರೋಧಿ ತುಷ್ಟೀಕರಣ ನೀತಿಯಿಂದಾಗಿ ಹಿಂದೂ ಸಮಾಜದ ಭಾವನೆಗಳನ್ನು ನಿರಂತರವಾಗಿ ತುಳಿಯುತ್ತಿದೆ. ದೇವಸ್ಥಾನಗಳ ಅವಮಾನ, ಹಿಂದೂ ಕಾರ್ಯಕರ್ತರ ಮೇಲಿನ ದಾಳಿಗಳ ಪ್ರಕರಣಗಳು, ಶಾಲೆಗಳಲ್ಲಿ ಹಿಜಾಬ್ ಪ್ರೋತ್ಸಾಹಿಸುವುದು ಮತ್ತು ಮುಸ್ಲಿಂ ಸಮುದಾಯಕ್ಕೆ ಏಕಪಕ್ಷೀಯವಾಗಿ ಸಾವಿರಾರು ಕೋಟಿ ರೂ. ಅನುದಾನ ನೀಡುತ್ತಿರುವುದು ಸಂವಿಧಾನದ ಸಮಾನತೆಯ ತತ್ವಕ್ಕೇ ದ್ರೋಹ ಬಗೆದಂತಾಗಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಇದ್ದರೂ ಬಕ್ರೀದ್ ಸಂದರ್ಭದಲ್ಲಿ ರಾಜಾರೋಷವಾಗಿ ನಡೆಯುವ ಗೋಮಾತೆಯರ ಹತ್ಯೆಯನ್ನು ತಡೆಯಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಭಟ್ಕಳ ಸೇರಿದಂತೆ ಹಲವೆಡೆ ಹಿಂದೂ ಧಾರ್ಮಿಕ ಶ್ರದ್ಧಾಕೇಂದ್ರಗಳ ಮೇಲೆ ಜಿಹಾದಿ ಶಕ್ತಿಗಳಿಂದ ದಾಳಿ ನಡೆಯುತ್ತಿದ್ದರೂ ಸರ್ಕಾರ ಮೌನ ವಹಿಸಿದೆ ಎಂದರು.
ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾ ಸಮಿತಿ ಸಮನ್ವಯಕ ವಿಜಯ ಕುಮಾರ್ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳ ವಕೀಲರು, ಹಿಂದೂ ಜನಜಾಗೃತಿ ಸಮಿತಿಯ ಮುಂದಳುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿಂದೂ ಸಮಾಜದ ಧಾರ್ಮಿಕ ಹಕ್ಕುಗಳ ಮೇಲಿನ ಈ ಆಘಾತಗಳ ವಿರುದ್ಧ ಉಚ್ಚ ನ್ಯಾಯಾಲಯದ ಮಟ್ಟದಲ್ಲಿ ಸಂವಿಧಾನಾತ್ಮಕ ಹೋರಾಟವನ್ನು ತೀವ್ರಗೊಳಿಸಲು ಶಿಬಿರದಲ್ಲಿ ದೃಢ ನಿರ್ಣಯ ಕೈಗೊಳ್ಳಲಾದೆ. ಹಿಂದೂ ಸಂಘಟನೆಗಳು ಮತ್ತು ಕಾರ್ಯಕರ್ತರಿಗೆ ಭದ್ರ ಕಾನೂನು ಕವಚವನ್ನು ನೀಡಲು, ಪ್ರತಿಯೊಂದು ಜಿಲ್ಲೆಯಲ್ಲೂ ರಾಷಟ್ರೆಭಕ್ತ ವಕೀಲರ ಬಲಿಷ್ಠ ಜಾಲವನ್ನು ನಿರ್ಮಿಸಲು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ನ್ಯಾಯವಾದಿಗಳ ಅಧಿವೇಶನಗಳನ್ನು ಆಯೋಜಿಸಲಾಗುವುದು.
-ಮೋಹನ ಗೌಡ, ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ