| ರಾಘವ ಶರ್ಮ ನಿಡ್ಲೆ ನಾಗಾಂವ್ (ಅಸ್ಸಾಂ)
ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ (ಮಾರ್ಚ್ 27) ಸಜ್ಜುಗೊಳ್ಳುತ್ತಿರುವ ಅಸ್ಸಾಂ, ಮುಖ್ಯಮಂತ್ರಿ ಸರ್ಬಾನಂದ ಸೊನೋವಾಲ್ ನೇತೃತ್ವದ ಬಿಜೆಪಿ ಮತ್ತು ಸಾಮೂಹಿಕ ನಾಯಕತ್ವದ ಕಾಂಗ್ರೆಸ್ ನಡುವಿನ ಸೆಣಸಾಟಕ್ಕೆ ಸಾಕ್ಷಿಯಾಗುತ್ತಿದೆ. ಇಲ್ಲಿ ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ಪಾತ್ರವಹಿಸಿದರೂ, ಮೈತ್ರಿಕೂಟಗಳಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯದ್ದೇ ಪಾರುಪತ್ಯ. ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಅಧಿಕಾರದ ಕನಸು ಕಾಣುತ್ತಿದೆ. ಆದರೆ, ಸಿಎಂ ಅಭ್ಯರ್ಥಿ ಯಾರೆಂಬುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.
ಕರೊನಾ ಅವಧಿಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದಲ್ಲದೆ, ಸಿಎಎ ವಿರೋಧಿ ಪ್ರತಿಭಟನೆ, ಅಭಿಯಾನಗಳನ್ನು ರಾಜಕೀಯವಾಗಿ ಮಟ್ಟಹಾಕು ವಲ್ಲಿಯೂ ಹಿಮಾಂತ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಾರೆ ಎಂದು ಕಳೆದ ವರ್ಷ ಹೇಳಿದ್ದರೂ, ಜಾಲುಕ್ ಬರಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಅವರಿಗೆ ಸಿಎಂ ಗಾದಿ ಇನ್ನೂ ಜೀವಂತ.
2016ರ ವಿಧಾನಸಭೆ ಚುನಾವಣೆ ಗೆದ್ದ ಕೂಡಲೇ ಸರ್ಬಾನಂದ ಸೊನೋವಾಲ್ರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿದ್ದ ಪ್ರಧಾನಿ ನರೇಂದ್ರ ಮೋದಿ-ಅಮಿತ್ ಷಾ, ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಬೇರು ಬಲಗೊಳಿಸುವ ಸಲುವಾಗಿ ರಚನೆ ಮಾಡಿದ್ದ ಈಶಾನ್ಯ ರಾಜ್ಯಗಳ ಪ್ರಜಾತಾಂತ್ರಿಕ ಒಕ್ಕೂಟದ (ಎನ್ಇಡಿಎ) ಸಂಚಾಲಕರನ್ನಾಗಿ ಹಿಮಾಂತರನ್ನು ನೇಮಕ ಮಾಡಿದ್ದರು. ತಾವು ಸಿಎಂ ಹುದ್ದೆಯ ಆಕಾಂಕ್ಷಿ ಎಂದು ಹಿಮಾಂತ ಘೊಷಿಸಿಕೊಂಡಿಲ್ಲ. ಆದರೆ, ತಮ್ಮನ್ನು ಸಿಎಂ ಮಾಡಬೇಕು ಎಂಬ ಪರೋಕ್ಷ ಸಂದೇಶವನ್ನಂತೂ ದಿಲ್ಲಿಗೆ ರವಾನಿಸಿದ್ದಾರೆ. ಫಲಿತಾಂಶ ಬರಲಿ, ಆಮೇಲೆ ನೋಡೋಣ ಎಂದು ಮೌನದಿಂದಿರುವ ವರಿಷ್ಠರು, ಗೊಂದಲಗಳಿಗೆ ತೆರೆ ಎಳೆಯುವ ಯತ್ನ ಮಾಡಿದ್ದಾರೆ.
ಅಸ್ಸಾಂ ಮಾಜಿ ಸಿಎಂ, ಕಾಂಗ್ರೆಸ್ನ ಹಿರಿಯ ನಾಯಕ ದಿವಂಗತ ತರುಣ್ ಗೊಗೋಯ್ ವಿರುದ್ಧ ಬಂಡೆದಿದ್ದ ಹಿಮಾಂತ, ರಾಹುಲ್ ಗಾಂಧಿ ಕೂಡ ತಮ್ಮನ್ನು ನಿರ್ಲಕ್ಷಿಸಿದ್ದಾರೆ ಎಂದು ಆಕ್ರೋಶಗೊಂಡು ಕಾಂಗ್ರೆಸ್ ಸಂಬಂಧಕ್ಕೆ 2015ರಲ್ಲಿ ಎಳ್ಳುನೀರು ಬಿಟ್ಟಿದ್ದರು. ಆಗ ಬಿಜೆಪಿ ಹಿಮಾಂತರನ್ನು ತನ್ನತ್ತ ಸೆಳೆದು ಈಶಾನ್ಯಮುಕ್ತ ಕಾಂಗ್ರೆಸ್ ಅಭಿಯಾನಕ್ಕೆ ಚಾಲನೆ ನೀಡಿತ್ತು.
2016ರಲ್ಲಿ ಹೀನಾಯವಾಗಿ ಸೋತಿದ್ದ ಕಾಂಗ್ರೆಸ್ ಈ ಬಾರಿ ಸಾಮೂಹಿಕ ನಾಯಕತ್ವದ ಹೆಸರಲ್ಲಿ ಚುನಾವಣೆ ಎದುರಿಸುತ್ತಿದೆ. ತರುಣ್ ಗೊಗೋಯ್ ಕಳೆದ ನವೆಂಬರ್ನಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ನಿಧನರಾಗಿದ್ದಾರೆ. ಪಕ್ಷದಲ್ಲೀಗ ಸಮರ್ಥ ನಾಯಕತ್ವದ ಕೊರತೆಯಿದೆ. ‘ತರುಣ್ ಗೊಗೋಯ್ಜೀ ಇದ್ದಾಗ ಮಿತ್ರಪಕ್ಷಗಳ ಟಿಕೆಟ್ ಹಂಚಿಕೆ ಬಗ್ಗೆ ಸ್ಪಷ್ಟತೆ ಇರುತ್ತಿತ್ತು ಮತ್ತು ದಿಲ್ಲಿ ನಾಯಕರ ಹಸ್ತಕ್ಷೇಪ ಇರುತ್ತಿರಲಿಲ್ಲ. ಮಿತ್ರಪಕ್ಷಗಳ ಅಸಮಾಧಾನಗಳನ್ನೂ ಗೊಗೋಯ್ ಸಮರ್ಥವಾಗಿ ನಿಭಾಯಿಸುತ್ತಿದ್ದರು. ಆದರೆ, ಗೊಗೋಯ್ ಸ್ಥಾನ ತುಂಬಬಲ್ಲ ಹಿರಿಯಾಳು ನಮ್ಮಲ್ಲಿಲ್ಲ’ ಎಂದು ನಾಗಾಂವ್ ಕ್ಷೇತ್ರದ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ 126 ಸೀಟುಗಳಲ್ಲಿ 92ರಲ್ಲಿ ಸ್ಪರ್ಧಿಸುತ್ತಿದ್ದು, ಉಳಿದ ಕ್ಷೇತ್ರಗಳನ್ನು ಮಿತ್ರರಿಗೆ ಬಿಟ್ಟುಕೊಟ್ಟಿದೆ. ಅಸ್ಸಾಂ ಮುಸ್ಲಿಂ ನಾಯಕ ಎಂದೇ ಗುರುತಿಸಿಕೊಂಡಿರುವ ಮೌಲಾನಾ ಬದ್ರುದ್ದೀನ್ ಅಜ್ಮಲ್ ನೇತೃತ್ವದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಕಾಂಗ್ರೆಸ್ ಜತೆ ಕೈಜೋಡಿಸಿದೆ. 2011 ಮತ್ತು 2016ರಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಎಐಯುಡಿಎಫ್ ಕ್ರಮವಾಗಿ 18 ಮತ್ತು 13 ಸೀಟುಗಳನ್ನು ಗೆದ್ದುಕೊಂಡಿತ್ತು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಐಯುಡಿಎಫ್ ನಡುವಿನ ಮತ ವಿಭಜನೆಯಿಂದಲೇ ಬಿಜೆಪಿ ಸುಮಾರು 20 ಸೀಟುಗಳಲ್ಲಿ ಗೆಲ್ಲಲು ಸಾಧ್ಯವಾಗಿತ್ತು. ಇದನ್ನು ತಪ್ಪಿಸಲು ಈ ಬಾರಿ ಎರಡೂ ಪಕ್ಷಗಳು ಪರಸ್ಪರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿವೆ. ಈ ಮೈತ್ರಿಯನ್ನೇ ಗುರಿ ಮಾಡಿರುವ ಬಿಜೆಪಿ, ಹಿಂದು ಮತಗಳ ಕ್ರೋಡೀಕರಣಕ್ಕೆ ಮುಂದಾಗಿದೆ. ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಕೆಳ ಅಸ್ಸಾಂನ ಜಿಲ್ಲೆಗಳಲ್ಲಿ ಮಹಾಮೈತ್ರಿಗೆ ನೆರವಾದರೆ, ಮೇಲ್ಭಾಗದ ಜಿಲ್ಲೆಗಳಲ್ಲಿ ಹಿಂದುಗಳನ್ನು ಬಿಜೆಪಿ ಪರ ಒಗ್ಗೂಡಿಸಲಿದೆ ಎಂಬುದನ್ನು ಕಾಂಗ್ರೆಸ್ಸಿಗರೂ ಒಪ್ಪಿಕೊಳ್ಳುತ್ತಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ನಾಗಾಂವ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರದ್ಯುತ್ ಬದೋಲೋಯ್ ಬಿಜೆಪಿಯ ರೂಪಕ್ ಶರ್ಮ ವಿರುದ್ಧ ಗೆಲ್ಲಲು ಬದ್ರುದ್ದೀನ್ ಜತೆಗೆ ಕಾಂಗ್ರೆಸ್ ಮಾಡಿಕೊಂಡಿದ್ದ ಆಂತರಿಕ ಮೈತ್ರಿಯೇ ಕಾರಣ. ಇಲ್ಲಿ ಮುಸ್ಲಿಂ ವೋಟುಗಳು ನಿರ್ಣಾಯಕ. ಇದೇ ಮಾದರಿ ಫಲಿತಾಂಶ ಈ ಚುನಾವಣೆಯಲ್ಲಿ ಬಂದರೂ ಅಚ್ಚರಿ ಇಲ್ಲ ಎನ್ನುತ್ತಾರೆ ನಾಗಾಂವ್ ಜಿಲ್ಲೆಯ ಹೈಸ್ಕೂಲ್ ಶಿಕ್ಷಕ ರಾಮ್ ನಿವಾಸ್ ಪಾಂಡೆ.
ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾನೂನನ್ನು (ಸಿಎಎ) ಬಿಜೆಪಿ-ವಿರೋಧಿ ಪಕ್ಷಗಳು ಮತದಾರನ ಮುಂದಿಡುತ್ತಿದ್ದರೂ, ಸಿಎಎ ಕಾನೂನು ಜಾರಿಯಾದ ಬಳಿಕ ರಾಜ್ಯದಲ್ಲಿ ನಡೆದ ಲೋಕಸಭೆ, ಮುನ್ಸಿಪಲ್ ಕೌನ್ಸಿಲ್ ಚುನಾವಣೆಗಳಲ್ಲಿ ಸಿಎಎ ವಿರೋಧಿ ಆಕ್ರೋಶ ದೊಡ್ಡ ಮಟ್ಟದಲ್ಲೇನೂ ಪ್ರತಿಫಲಿಸಿಲ್ಲ. ಹೀಗಾಗಿ, ಕೋಮುವಾದ, ತೈಲ ಬೆಲೆ ಏರಿಕೆ, ನೇರ ನಗದು ವರ್ಗಾವಣೆಯಲ್ಲಿನ ಲೋಪದೋಷಗಳನ್ನೇ ಪ್ರಮುಖ ವಿಷಯಗಳನ್ನಾಗಿ ಪರಿಗಣಿಸಿರುವ ಕಾಂಗ್ರೆಸ್, ಸಿಎಎಗೆ ನಂತರದ ಸ್ಥಾನ ನೀಡಿದೆ. ಸಿಎಎ ಕಾನೂನು 2014ಕ್ಕೆ ಮುನ್ನ ಅಸ್ಸಾಂನಲ್ಲಿ ಬಂದು ನೆಲೆಸಿದ ಬಾಂಗ್ಲಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹಿಂದುಗಳಿಗೆ ಪೌರತ್ವ ಕಲ್ಪಿಸುತ್ತದೆ. ಇದು ಮೂಲ ಅಸ್ಸಾಂ ಜನರನ್ನು ಕೆರಳಿಸಿದೆ. ‘ಬಂಗಾಳಿ ಮಾತನಾಡುವ ಹಿಂದುಗಳ ಮಧ್ಯೆ ನಾವು ಅಲ್ಪಸಂಖ್ಯಾತರಾಗಿದ್ದೇವೆ’ ಎಂಬ ಮಾತುಗಳೂ ಅಲ್ಲಲ್ಲಿ ಕೇಳಿಬರುತ್ತಿವೆ. ಹೀಗಾಗಿಯೇ, ಎದುರಾಳಿಗಳ ಸಿಎಎ ಕುರಿತ ಪ್ರಶ್ನೆಗಳನ್ನು ಬಿಜೆಪಿ ಬದಿಗೆ ಸರಿಸುತ್ತಿದೆ.