ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಶಿವಮೊಗ್ಗದ ನಿಲ್ದಾಣಬಿಕೋ ಎನ್ನುತ್ತಿತ್ತು  
ನ್ಯೂಸ್

ಹೆಚ್ಚೇನೂ ಬಾಧಿಸದ ನೌಕರರ ಮುಷ್ಕರ

ಅರವಿಂದ ಅಕ್ಲಾಪುರ

ಶಿವಮೊಗ್ಗ: ವೇತನ ಪರಿಷ್ಕರಣೆಯ ಬಾಕಿ ಹಣ ಬಿಡುಗಡೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ನೌಕರರು ಬಸ್‌ಗಳನ್ನು ರಸ್ತೆಗಿಳಿಸದೆ ಮಂಗಳವಾರದಿಂದ ಮುಷ್ಕರ ಆರಂಭಿಸಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲೂ ನೌಕರರು ಮುಷ್ಕರ ನಡೆಸಿದರು. ಆದರೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಎಸ್‌ಆರ್‌ಟಿಸಿ ನಿಲ್ದಾಣ ಕೊಂಚ ಬಿಕೋ ಎನ್ನುತ್ತಿತ್ತು. ಆದರೆ ಪಕ್ಕದಲ್ಲೇ ಇರುವ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಎಂದಿಗಿಂತ ಹೆಚ್ಚಾಗಿತ್ತು.

ಮಂಗಳವಾರ ಬೆಳಗ್ಗೆಯಿಂದಲೇ ಶಿವಮೊಗ್ಗ ಬಸ್ ನಿಲ್ದಾಣದಿಂದ ಹಲವು ಕಡೆಗಳಿಗೆ ಬಸ್ ಸಂಚಾರ ಕಲ್ಪಿಸಲಾಗಿತ್ತು. ಶೇ.40ರಷ್ಟು ಬಸ್‌ಗಳು ಶಿವಮೊಗ್ಗ ಡಿಪೋದಿಂದ ವಿವಿಧೆಡೆಗೆ ತೆರಳಿದವು. ಕೆಎಸ್‌ಆರ್‌ಟಿಸಿಯಲ್ಲಿ ತರಬೇತಿ ಪಡೆಯುತ್ತಿರುವ ಚಾಲಕರು ಕಂ ನಿರ್ವಾಹಕರು ಹಾಗೂ ಖಾಸಗಿ ಬಸ್ ಚಾಲಕರನ್ನು ಬಳಸಿಕೊಂಡು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ರಸ್ತೆಗಿಳಿಸಲಾಗಿತ್ತು.

ಮುಷ್ಕರದ ಬಗ್ಗೆ ಸಾರ್ವಜನಿಕರಿಗೆ ಮೊದಲೇ ಮಾಹಿತಿ ಇದ್ದುದರಿಂದ ಬಹುತೇಕ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಬೆಳಗ್ಗೆ 6ರಿಂದ 10ರವರೆಗೆ ಬಸ್ ಸಂಚಾರ ತುಸು ಹೆಚ್ಚು ಎನ್ನಿಸುವಷ್ಟಿತ್ತು. ಬಳಿಕ ಸಂಚಾರ ಕಡಿಮೆಯಾಯಿತು. ಆದರೆ ಇದು ಸಂಚಾರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿಲ್ಲ. ಏಕೆಂದರೆ ಶಿವಮೊಗ್ಗ-ಭದ್ರಾವತಿ ನಡುವೆ ಟ್ಯಾಕ್ಸಿ ಸಂಚಾರ ಇರುವುದರಿಂದ ಜನರಿಗೆ ಸಮಸ್ಯೆಯಾಗಲಿಲ್ಲ. ಜಿಲ್ಲೆಯ ಉಳಿದ ಕಡೆಗೆ ಖಾಸಗಿ ಬಸ್‌ಗಳು ನೆರವಾದವು. ಪ್ರತಿ ದಿನ ಶಕ್ತಿ ಯೋಜನೆಯಡಿ ತೆರಳುವ ಕೆಲವು ಮಹಿಳೆಯರಿಗೆ ಸಕಾಲದಲ್ಲಿ ಕೆಎಸ್‌ಆರ್‌ಟಿಸಿ ಸೇವೆ ದೊರೆಯದೆ ಗೊಣಗಿಕೊಂಡು ಖಾಸಗಿ ಬಸ್‌ಗಳಲ್ಲೇ ತೆರಳುವ ಅನಿವಾರ್ಯತೆ ಉಂಟಾಗಿತ್ತು.

ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ನಿಲ್ದಾಣದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆಎಸ್‌ಆರ್‌ಪಿ ತುಕಡಿಯೊಂದನ್ನು ನಿಯೋಜಿಸಲಾಗಿತ್ತು. ಹಿರಿಯ ಅಧಿಕಾರಿಗಳು ಆಗಾಗ್ಗೆ ಬಂದು ನಿಲ್ದಾಣದಲ್ಲಿ ಪರಿಶೀಲನೆ ನಡೆಸುತ್ತಿದ್ದರು. ಮುಷ್ಕರದ ಹೆಸರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಬಸ್ ಸಂಚಾರವನ್ನು ಒತ್ತಾಯಪೂರ್ವಕವಾಗಿ ತಡೆಯದಂತೆ ಪೊಲೀಸರು ಕ್ರಮ ಕೈಗೊಂಡರು.