ನ್ಯೂಸ್

ಹಾಡಹಗಲೇ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಅಳಿಲುಗಳ ಬೇಟೆ! ಮೂಕ ಪ್ರಾಣಿಯ ರೋದನೆ ನೋಡಿದ್ರೆ ಕರುಳುಹಿಂಡುತ್ತೆ...

ಮೈಸೂರು: ಜಿಲ್ಲಾಧಿಕಾರಿ ಕಚೇರಿ ಬಳಿ ಹಾಡಹಗಲಲ್ಲೇ ರಾಜಾರೋಷವಾಗಿ ಕಬ್ಬಿಣದ ತಂತಿಯ ಉರುಳು ಹಾಕಿ ಪ್ರಾಣಿ-ಪಕ್ಷಿಗಳನ್ನು ಬೇಟೆಯಾಡುತ್ತಿದ್ದಾರೆ. ದುಷ್ಕರ್ಮಿಗಳ ಕೃತ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್​ ಆಗಿದೆ. ಮರುಕ ವ್ಯಕ್ತಪಡಿಸಿರುವ ಸಾರ್ವಜನಿಕರು, ಜಿಲ್ಲಾಧಿಕಾರಿ ಕಚೇರಿ ಬಳಿಯೇ ಪ್ರಾಣಿ-ಪಕ್ಷಿಗಳಿಗೆ ರಕ್ಷಣೆ ಇಲ್ಲವೇ? ಮೂಕ ಪ್ರಾಣಿಗಳ ರೋದನೆ ಕೇಳಿಸುವುದಿಲ್ಲವೇ? ಎಂದು ಆಕ್ರೋಶ ಹೊರಹಾಕಿದ್ದಾರೆ. ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಮೀಪ ರಸ್ತೆ ಬದಿಯ ಮರಗಳಿಗೆ ತಂತಿ ಉರುಳನ್ನು ಸುತ್ತಿರುವ ಬೇಟೆಗಾರರು ದೂರದಲ್ಲೇ ಹೊಂಚು ಹಾಕುತ್ತಾ ಕುಳಿತಿರುತ್ತಾರೆ. ಅಳಿಲು ಸೇರಿದಂತೆ ಪಕ್ಷಿಗಳು ಉರುಳಿಗೆ ಸಿಲುಕುತ್ತಿದ್ದಂತೆ ಅವುಗಳನ್ನು ಹಿಡಿದುಕೊಂಡು ಕ್ಷಣಾರ್ಧದಲ್ಲೇ ಪರಾರಿಯಾಗುತ್ತಾರೆ. ಉರುಳಿಗೆ ಸಿಲುಕಿ ಒದ್ದಾಡುತ್ತಿದ್ದ ಅಳಿಲಿನ ದೃಶ್ಯ ನೋಡಿದ್ರೆ ಮನಕಲಕುತ್ತೆ. ಉರುಳಿಗೆ ಸಿಲುಕಿದ್ದ ಅಳಿಲಿನ ಸಮೇತ ಬೇಟೆಗಾರರು ಹೋಗುತ್ತಿರುವ ದೃಶ್ಯವೂ ವಿಡಿಯೋದಲ್ಲಿದೆ.