Seeliger Effect: ಶನಿಗ್ರಹ ಇಂದು ‘ವಿರುದ್ಧ ಸ್ಥಾನ’ ತಲುಪಲಿದೆ. ಅಂದರೆ ಸೂರ್ಯ ಮತ್ತು ಶನಿಗ್ರಹದ ನಡುವೆ ಭೂಮಿ ಬರುವುದರಿಂದ, ಭೂಮಿಯಿಂದ ನೋಡಿದಾಗ ಶನಿಗ್ರಹ ಸೂರ್ಯನಿಗೆ ವಿರುದ್ಧ ದಿಕ್ಕಿನಲ್ಲಿ ಕಾಣಿಸಿಕೊಳ್ಳಲಿದೆ. ಹೀಗಾಗಿ ಸೂರ್ಯಾಸ್ತದ ಬಳಿಕ ಉದಯಿಸುವ ಶನಿಗ್ರಹವನ್ನು ಬಹುತೇಕ ಇಡೀ ರಾತ್ರಿ ಆಕಾಶದಲ್ಲಿ ನೋಡಬಹುದು.
ಭಾರತದಲ್ಲಿ ಶನಿಗ್ರಹ ಸಂಜೆ ಸುಮಾರು 6.11ಕ್ಕೆ ಪೂರ್ವ ಆಕಾಶದಲ್ಲಿ ಕಾಣಿಸಿಕೊಳ್ಳಲು ಆರಂಭಿಸಲಿದೆ. ರಾತ್ರಿ 12.17ರ ವೇಳೆಗೆ ಆಕಾಶದಲ್ಲಿ ಅತ್ಯಂತ ಎತ್ತರದ ಸ್ಥಾನ ತಲುಪಲಿದ್ದು, ಬಳಿಕ ಅಕ್ಟೋಬರ್ 5ರ ಬೆಳಗ್ಗೆ ಸುಮಾರು 6.23ಕ್ಕೆ ಅಸ್ತಮಿಸಲಿದೆ.
ಈ ವೇಳೆ ‘ಸೀಲಿಗರ್ ಎಫೆಕ್ಟ್’ ಎಂಬ ವಿಶೇಷ ವಿದ್ಯಮಾನವೂ ಗಮನ ಸೆಳೆಯಲಿದೆ. ಶನಿಯ ಉಂಗುರಗಳಲ್ಲಿರುವ ಕೋಟ್ಯಂತರ ಸಣ್ಣ ಕಣಗಳು ಮುಖ್ಯವಾಗಿ ನೀರಿನ ಮಂಜುಗಡ್ಡೆಯಿಂದ ಕೂಡಿವೆ.
ಸಾಮಾನ್ಯವಾಗಿ ಈ ಕಣಗಳ ಮೇಲೆ ಬೀಳುವ ಸೂರ್ಯನ ಬೆಳಕಿನಿಂದ ಒಂದರ ನೆರಳು ಮತ್ತೊಂದರ ಮೇಲೆ ಬೀಳುತ್ತದೆ. ಆದರೆ ಶನಿ ಸೂರ್ಯನಿಗೆ ವಿರುದ್ಧ ಸ್ಥಾನದಲ್ಲಿರುವಾಗ, ಸೂರ್ಯನ ಬೆಳಕು ಬಹುತೇಕ ನೇರವಾಗಿ ಉಂಗುರಗಳ ಮೇಲೆ ಬೀಳುತ್ತದೆ. ಹೀಗಾಗಿ ಕಣಗಳ ನೆರಳು ಭೂಮಿಯಿಂದ ಅಷ್ಟಾಗಿ ಕಾಣಿಸುವುದಿಲ್ಲ. ಪರಿಣಾಮ, ಉಂಗುರಗಳ ಹೆಚ್ಚಿನ ಭಾಗ ನೇರವಾಗಿ ಬೆಳಗಿದಂತೆ ಕಾಣಿಸಿ ಅವುಗಳ ಹೊಳಪು ಸ್ವಲ್ಪ ಹೆಚ್ಚಾಗುತ್ತದೆ.
ಈ ವಿದ್ಯಮಾನಕ್ಕೆ ಜರ್ಮನ್ ಖಗೋಳಶಾಸ್ತ್ರಜ್ಞ ಹ್ಯೂಗೋ ವಾನ್ ಸೀಲಿಗರ್ ಅವರ ಹೆಸರನ್ನೇ ಇಡಲಾಗಿದೆ. ಬರಿಗಣ್ಣಿನಿಂದ ನೋಡಿದಾಗ ಶನಿಯ ಹೊಳಪಿನಲ್ಲಿ ಅಂತಹ ಬದಲಾವಣೆ ಕಾಣಿಸುವುದಿಲ್ಲ. ಆದರೆ ಟೆಲಿಸ್ಕೋಪ್ ಮೂಲಕ ನೋಡಿದರೆ ಉಂಗುರಗಳಲ್ಲಿನ ಈ ಸಣ್ಣ ಬದಲಾವಣೆಯನ್ನು ಗಮನಿಸಬಹುದು.
ಶನಿಗ್ರಹವನ್ನು ಬರಿಗಣ್ಣಿನಿಂದಲೇ ನೋಡಬಹುದು. ಸೂರ್ಯಾಸ್ತದ ಬಳಿಕ ಪೂರ್ವ ಆಕಾಶದತ್ತ ಕಣ್ಣಾಯಿಸಿದರೆ, ಹೆಚ್ಚು ಮಿನುಗದ ಪ್ರಕಾಶಮಾನ ಬಿಂದುವಿನಂತೆ ಶನಿ ಕಾಣಿಸುತ್ತಾನೆ. ಟೆಲಿಸ್ಕೋಪ್ ಇದ್ದರೆ ಶನಿಯ ಉಂಗುರಗಳನ್ನು ಇನ್ನಷ್ಟು ಕ್ಲಿಯರ್ ಆಗಿ ನೋಡಬಹುದು. ಉತ್ತಮ ಟೆಲಿಸ್ಕೋಪ್ ಮೂಲಕ ಕ್ಯಾಸಿನಿ ವಿಭಜನೆ ಜೊತೆಗೆ ಶನಿಯ ಕೆಲವು ಉಪಗ್ರಹಗಳನ್ನೂ ವೀಕ್ಷಿಸುವ ಅವಕಾಶ ಸಿಗುತ್ತದೆ.
2025ರ ಮಾರ್ಚ್‌ನಲ್ಲಿ ಭೂಮಿ ಶನಿಯ ಉಂಗುರಗಳ ಸಮತಲವನ್ನು ದಾಟಿತ್ತು. ಇದಾದ ಬಳಿಕ ಶನಿಯ ಉಂಗುರಗಳು ಮತ್ತೆ ನಿಧಾನವಾಗಿ ತೆರೆದುಕೊಳ್ಳುತ್ತಿವೆ. 2026ರ ಅಕ್ಟೋಬರ್‌ನಲ್ಲಿ ಭೂಮಿಯಿಂದ ನೋಡಿದಾಗ ಅವು ಸುಮಾರು 7.5 ಡಿಗ್ರಿ ವಾಲಿರುವಂತೆ ಕಾಣಿಸಲಿವೆ.
ಹೀಗಾಗಿ ಇವತ್ತು ರಾತ್ರಿ ಶನಿಗ್ರಹ ನೋಡಲು ಖಗೋಳಾಸಕ್ತರಿಗೆ ಒಳ್ಳೆಯ ಅವಕಾಶ ಸಿಗಲಿದೆ. ಅದರಲ್ಲೂ ಟೆಲಿಸ್ಕೋಪ್ ಹೊಂದಿರುವವರು ಶನಿಯ ಉಂಗುರಗಳ ಹೊಳಪಿನಲ್ಲಾಗುವ ಈ ಸಣ್ಣ ಬದಲಾವಣೆಯನ್ನು ಗಮನಿಸಬಹುದು. (ಏಜೆನ್ಸೀಸ್)