ಮೆಣಸೆ ಸರ್ಕಾರಿ ಶಾಲೆಯಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹನಕೋಡು ದಿವಾಕರ, ಸೌಮ್ಯಾ ವಿಜಯ್‌ಕುಮಾರ್, ಮಂಜುಳಾ, ಪೂರ್ಣಿಮಾ, ಶ್ರೀಧರ್ ರಾವ್ ಇದ್ದರು.  
ನ್ಯೂಸ್

ಆ.21ರಂದು ಶ್ರೀಮಠದಲ್ಲಿ ವಿಶೇಷ ಕಾರ್ಯಕ್ರಮ

ಶಿವಕುಮಾರ ಎಸ್.ಪಿ.

ಶೃಂಗೇರಿ: ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ಶೃಂಗೇರಿ ಶ್ರೀ ಶಾರದಾ ಪೀಠವು ಅವಿಚ್ಛಿನ್ನ ಗುರು ಪರಂಪರೆ ಹೊಂದಿದೆ ಎಂದು ಸಾಹಿತಿ ಹನಕೋಡು ದಿವಾಕರ ಹೇಳಿದರು.

ಶ್ರೀ ಶಾರದಾ ಪೀಠದ 37ನೇ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ವರ್ಧಂತಿ ಅಂಗವಾಗಿ ಮೆಣಸೆ ಸರ್ಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಮತ್ತು ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾ ಬುಧವಾರ ಏರ್ಪಡಿಸಿದ್ದ ಶ್ರೀ ಶಾರದಾ ಪೀಠ ಮತ್ತು ಅವಿಚ್ಛಿನ್ನ ಗುರುಪರಂಪರೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರಾವಣ ಪಂಚಮಿ ದಿನ ಶ್ರೀಗಳ ವರ್ಧಂತಿ ನಡೆಯಲಿದ್ದು, ಶಾರದಾ ಪೀಠವು ಧಾರ್ಮಿಕವಾಗಿ ಸಮಾಜಕ್ಕೆ ವಿಶೇಷ ಕೊಡುಗೆ ನೀಡುತ್ತಿದೆ. ಪೀಠಕ್ಕೆ ಅಧಿಪತಿಗಳಾದ ಸ್ವಾಮೀಜಿಗಳು ತಪೋನಿಷ್ಠ, ಆಧ್ಯಾತ್ಮಿಕವಾಗಿ ವಿಶೇಷ ಸಾಧನೆ ಮಾಡಿದ್ದಾರೆ. ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ಪೀಠಕ್ಕೆ ಮೊದಲ ಪೀಠಾಧಿಪತಿಯಾಗಿ ಸುರೇಶ್ವರಾಚಾರ್ಯರನ್ನು ನೇಮಕ ಮಾಡಲಾಗುತ್ತದೆ. ಅಂದಿನಿಂದ ಇಂದಿನವರೆಗೂ ಗುರು ಪರಂಪರೆ ಮುಂದುವರಿದಿದೆ. ವರ್ಧಂತಿ ಅಂಗವಾಗಿ ಆ.21ರಂದು ಶ್ರೀಮಠದಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಸೌಮ್ಯಾ ವಿಜಯಕುಮಾರ್, ಹಿಂದು ಧರ್ಮದ ಉಳಿವಿಗಾಗಿ ಧರ್ಮ ಪ್ರಚಾರ ನಡೆಸುತ್ತಿರುವ ಶ್ರೀ ಶಾರದಾ ಪೀಠ ವಿಶೇಷ ಶಕ್ತಿ ಹೊಂದಿದೆ. ವಿದ್ಯಾರ್ಥಿಗಳು ಶ್ರೀ ಪೀಠದ ಪರಂಪರೆಯನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಶಿಕ್ಷಕಿ ಜಯಂತಿ, ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾ ಅಧ್ಯಕ್ಷ ಎ.ಎಂ.ಶ್ರೀಧರ ರಾವ್, ಕ್ಲಬ್ ಕಾರ್ಯದರ್ಶಿ ಮಂಜುಳಾ ಎಸ್. ಭಟ್, ಪೂರ್ಣಿಮಾ ಸಿದ್ದಪ್ಪ ಇದ್ದರು. ರಸ ಪ್ರಶ್ನೆ ಸ್ಪರ್ಧೆ ವಿಜೇತರಾದ ಭಾಗ್ಯಶ್ರೀ, ಅಂಕಿತಾ ಮತ್ತು ಪ್ರಣವ್‌ಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.