ನ್ಯೂಸ್

101 ವರ್ಷದ ಗಟ್ಟಿಗಿತ್ತಿ ಅಜ್ಜಿ ಕರೊನಾವನ್ನೇ ಮಣಿಸಿಬಿಟ್ರು...ಹೇಳಿದ್ದನ್ನು ಚಾಚೂತಪ್ಪದೆ ಪಾಲಿಸಿದ ಇವರು 'ಭರವಸೆಯ ಬೆಳಕು' ಅಂದ್ರು ವೈದ್ಯರು...

ನೆದರ್​​ಲ್ಯಾಂಡ್​: ಕರೊನಾ ವೈರಸ್​ನಿಂದ ಮೃತಪಡುತ್ತಿರುವವರು ಬಹುಪಾಲು ವೃದ್ಧರು. ಅದರಲ್ಲೂ ಅಸ್ತಮಾ, ಹೃದಯತೊಂದರೆಯಂತಹ ಕಾಯಿಲೆ ಇರುವವರನ್ನು ಉಳಿಸಿಕೊಳ್ಳುವುದು ತೀರ ಸವಾಲಿನ ಕೆಲಸವಾಗಿದೆ.

ಆದರೆ 101ವರ್ಷದ ವೃದ್ಧೆಯೋರ್ವರು ಮಾರಣಾಂತಿಕ ಕರೊನಾ ವೈರಸ್​ನಿಂದ ಅಚ್ಚರಿಯ ರೀತಿಯಲ್ಲಿ ಪಾರಾಗಿದ್ದಾರೆ. ಸೋಂಕನ್ನು ಮಣಿಸಿ ಜೀವ ಉಳಿಸಿಕೊಂಡಿದ್ದಾರೆ.

ನೆದರ್​ಲ್ಯಾಂಡ್​ನ ರೋಟರ್ಡ್ಯಾಮ್ ಬಳಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಈ ವೃದ್ಧೆ ಕರೊನಾ ವೈರಸ್​ನಿಂದ ಸಂಪೂರ್ಣ ಮುಕ್ತಿಹೊಂದಿದ್ದಕ್ಕೆ ಅಲ್ಲಿನ ವೈದ್ಯರೂ ಸಂತೋಷ ವ್ಯಕ್ತಪಡಿಸಿದ್ದಾರೆ. ಇದೊಂದು ಭರವಸೆಯ ಬೆಳಕು ಎಂದು ಹೇಳಿದ್ದಾರೆ.

ವೃದ್ಧೆ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ತಪಾಸಣೆಗೆ ಒಳಪಡಿಸಿದಾಗ ಕರೊನಾ ಪಾಸಿಟಿವ್​ ಎಂದು ವರದಿ ಬಂತು. ಐಸೋಲೇಶನ್​ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗಿತ್ತು. ಒಂದು ವಾರಕ್ಕೂ ಹೆಚ್ಚು ಕಾಲ ಟ್ರೀಟ್​ಮೆಂಟ್​ ನೀಡಿದ ಬಳಿಕ ಈಗ ಅವರನ್ನು ಡಿಸ್​​ಚಾರ್ಜ್​ ಮಾಡುವಷ್ಟು ಗುಣಮುಖರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಈ ಮಹಿಳೆ ಗಟ್ಟಿಗಿತ್ತಿ. ನಾವು ನೀಡಿದ ಸಲಹೆ, ಸೂಚನೆಗಳನ್ನು ಚಾಚೂತಪ್ಪದೆ ಅನುಸರಿಸುವುದನ್ನು ನೋಡಿ ತುಂಬ ಖುಷಿಯಾಯಿತು. ಸೀನುವಾಗೆಲ್ಲ ತಮ್ಮ ಮೊಣಕೈ ಅಡ್ಡ ಹಿಡಿಯುತ್ತಿದ್ದರು. ಅಂತರ ಕಾಯ್ದುಕೊಳ್ಳಿ, ಸುಮ್ಮನೆ ಹತ್ತಿರ ಬರಬೇಡಿ ಎಂದು ನಮಗೇ ಹೇಳುತ್ತಿದ್ದರು. ಅಷ್ಟರ ಮಟ್ಟಿಗೆ ತಿಳಿವಳಿಕೆ ಇತ್ತು ಎಂದು ವೃದ್ಧೆಗೆ ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.(ಏಜೆನ್ಸೀಸ್​)