ನ್ಯೂಸ್

20 ವರ್ಷದ ಬಳಿಕ ತಾಯಿಯನ್ನು ಹುಡುಕುತ್ತಾ ಬಂದ ಸ್ಪೇನ್ ಮಹಿಳೆ

ಭುವನೇಶ್ವರ: ಸ್ಪೇನ್​ನ ಮಹಿಳೆಯೊಬ್ಬರು 20 ವರ್ಷದ ಹಿಂದೆ ತನ್ನನ್ನು ಬಿಟ್ಟು ಹೊಗಿದ್ದ ತಾಯಿಯನ್ನು ಹುಡುಕುತ್ತಾ ಭಾರತಕ್ಕೆ ಬಂದಿದ್ದಾರೆ. 21 ವರ್ಷದ ಸ್ನೇಹಾ ತನ್ನನ್ನು ದತ್ತು ಪಡೆದ ತಾಯಿ ಗೆಮಾ ವಿಡಾಲ್ ಜತೆ ಒಡಿಶಾದ ಭುವನೇಶ್ವರಕ್ಕೆ ಆಗಮಿಸಿದ್ದು, ಅಲ್ಲಿ ತನ್ನ ತಾಯಿಗಾಗಿ ಹುಡುಕಾಟ ನಡೆಸಿದ್ದಾರೆ.

ಬಾನಲತಾ ದಾಸ್ ಎಂಬ ಮಹಿಳೆ 2005 ರಲ್ಲಿ ತನ್ನ ನಾಲ್ವರು ಮಕ್ಕಳ ಪೈಕಿ ಸ್ನೇಹಾ ಮತ್ತು ಆಕೆಯ ತಮ್ಮ ಸೋಮುನನ್ನು ಬಿಟ್ಟು ಉಳಿದ ಇಬ್ಬರು ಮಕ್ಕಳೊಂದಿಗೆ ತೆರಳಿದ್ದರು. ತಾಯಿ ತ್ಯಜಿಸಿದ್ದರಿಂದ ಅನಾಥರಾಗಿದ್ದ ಒಂದೂವರೆ ವರ್ಷದ ಸ್ನೇಹಾ ಮತ್ತು 6 ತಿಂಗಳ ಸೋಮುರನ್ನು ಅನಾಥಾಶ್ರಮಕ್ಕೆ ಸೇರಿಸಲಾಗಿತ್ತು. ಸ್ಪೇನ್​ನ ಗೆಮಾ ವಿಡಾಲ್ ಮತ್ತು ಜುವಾನ್ ಜೋಶ್ ದಂಪತಿ 2010 ರಲ್ಲಿ ಈ ಮಕ್ಕಳನ್ನು ದತ್ತು ಪಡೆದು ಸ್ಪೇನ್​ಗೆ ಕರೆದುಕೊಂಡು ಹೋಗಿದ್ದರು.

ಈಗ ಸ್ನೇಹಾ ತನಗೆ ಜನ್ಮ ನೀಡಿದ ತಾಯಿಯನ್ನು ಹುಡುಕಲು ಭುವನೇಶ್ವರಕ್ಕೆ ಆಗಮಿಸಿದ್ದು, ಆಕೆಯ ಹುಡುಕಾಟ ನಡೆಸುತ್ತಿದ್ದಾರೆ. ಬಾನಲತಾ ದಾಸ್ ವಾಸವಾಗಿದ್ದ ಬಾಡಿಗೆ ಮನೆ ಮತ್ತು ಆಕೆ ಅಲ್ಲಿಂದ ಎಲ್ಲಿಗೆ ತೆರಳಿದ್ದಾರೆ ಎಂದು ಹುಡುಕಾಟ ನಡೆಸುತ್ತಿದ್ದಾರೆ. ಈ ಹುಡುಕಾಟಕ್ಕಾಗಿ ಭುವನೇಶ್ವರ ಪೊಲೀಸರ ಇವರಿಗೆ ನೆರವು ನೀಡುತ್ತಿದ್ದಾರೆ. ಈ ಬಾರಿ ತಾಯಿ ಸಿಗದಿದ್ದರೆ ಮತ್ತೊಮ್ಮೆ ಮಾರ್ಚ್ ತಿಂಗಳಿನಲ್ಲಿ ಭಾರತಕ್ಕೆ ಬಂದು ತಾಯಿಯ ಹುಡುಕಾಟ ನಡೆಸುವುದಾಗಿ ಸ್ನೇಹಾ ತಿಳಿಸಿದ್ದಾರೆ.