ಸುಗಮ ಸಂಗೀತ ಸೂತ್ರ 
ನ್ಯೂಸ್

ಸುಗಮ ಸಂಗೀತ ಸೂತ್ರ ಹರಿದ ಗಾಳಿಪಟ

| ರಾಜಶೇಖರ ಜೋಗಿನ್ಮನೆ

ಸುಗಮ ಸಂಗೀತಕ್ಕೆ ಒಂದು ಭವ್ಯ ಇತಿಹಾಸ ಇದೆ. ಅದರ ಮೂಲ ಹುಡುಕುತ್ತ ಹೋದರೆ ಅದು ಹತ್ತನೆಯ ಶತಮಾನದವರೆಗೂ ಹೋಗುತ್ತದೆ. ಆದರೆ ಸುಗಮ ಸಂಗೀತದ ಉತ್ತುಂಗ ಕಾಲ ಈ ಶತಮಾನವೇ ಎನ್ನಬಹುದು. ಆ ವೈಭವ ಮೊದಲೆರಡು ತಲೆಮಾರಿನ ಜನರ ಮನದಲ್ಲಿ ಅಷ್ಟೊತ್ತಿದೆ. ಆದರೆ ವರ್ತಮಾನದಲ್ಲಿ ಸುಗಮ ಸಂಗೀತದ ಸ್ಥಿತಿ ಏನಾಗಿದೆ? ಇಲ್ಲಿದೆ ಒಂದು ಅವಲೋಕನ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 39ನೇ ಅಧಿವೇಶನದಿಂದಾಗಿ 1924ರ ಡಿಸೆಂಬರ್‌ನಲ್ಲಿ ಬೆಳಗಾವಿ ಇಡೀ ದೇಶದ ಗಮನ ಸೆಳೆಯಿತು. ಈ ಐತಿಹಾಸಿಕ ಅಧಿವೇಶನ ತನ್ನ ಸ್ವಾಗತಗೀತೆಯಿಂದಲೂ ವಿಶೇಷವೆನಿಸಿತು. ಆ ಗೀತೆ ಹಾಡಿದವರು ಧಾರವಾಡದ ಸಂಗೀತಾಲಯದ ಸುಬ್ಬರಾವ್‌ ಅವರ ತಂಡದವರು ಮತ್ತು ಆ ತಂಡದಲ್ಲಿ 13 ವರ್ಷದ ಬಾಲಕಿ ಗಂಗೂಬಾಯಿ ಹಾನಗಲ್‌ ಇದ್ದರು! ಅವರು ಹಾಡಿದ ಹಾಡು ಹುಯಿಲಗೋಳ ನಾರಾಯಣರಾಯರ 'ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು' ಎಂಬ ಕವಿತೆ. ಸ್ವತಃ ಗಾಂಧೀಜಿ ಆ ಹಾಡಿನ ವಿಶೇಷತೆಯನ್ನು ಕೇಳಿ ತಿಳಿದು ಸಭೆಯಲ್ಲಿದ್ದ ಕವಿ ನಾರಾಯಣರಾಯರನ್ನು ವೇದಿಕೆಗೆ ಕರೆದು ಗೌರವಿಸಿದರು.
ಇದು ಇತಿಹಾಸದಲ್ಲಿ ದಾಖಲಾದ ಸಂಗತಿ. ವಾಸ್ತವವಾಗಿ ಅದು 20ನೇ ಶತಮಾನದ ಕಾಣಿ ಎಂದೇ ಕರೆಯಬಹುದಾದ ಚೆಲುವ ಕನ್ನಡನಾಡಿನ ಸುಗಮ ಸಂಗೀತ ಎಂಬ ಗಾನಮಾದರಿಯೊಂದರ ಪ್ರಸರಣಕ್ಕೂ ನಾಂದಿಯಾಯಿತು ಎನ್ನುವುದು ಇನ್ನೊಂದು ವಿಶೇಷ. ಅಂದರೆ ಕನ್ನಡ ಸುಗಮ ಸಂಗೀತ ರಾಷ್ಟ್ರದ ಗಮನ ಸೆಳೆದ ಆ ಕ್ಷಣಕ್ಕೀಗ 100 ವರ್ಷಗಳು ತುಂಬಿವೆ. ಈ ವರ್ಷಗಳಲ್ಲಿ ಉತ್ತುಂಗಕ್ಕೇರಿ ಮೆರೆದ ಈ ಶತಾಯುಷಿ ಸಂಗೀತಪ್ರಕಾರ ಈಗ ಹೇಗಿದೆ? 'ಚೆನ್ನಾಗಿದೆ, ಹೊಸ ಸಂಯೋಜಕರು ಬಂದಿದ್ದಾರೆ, ಹೊಸ ಹಾಡುಗಳು ಬರುತ್ತಿವೆ' ಎಂದು ಹೇಳಿಬಿಡಬಹುದು. ಆದರೆ, ಎಷ್ಟು ಹಾಡುಗಳು ಜನಮಾನಸದಲ್ಲಿ ಕುಳಿತಿವೆ ಎಂದು ಕೇಳಿದರೆ ಉತ್ತರಕ್ಕೆ ತಲೆ ಕೆರೆದುಕೊಳ್ಳಬೇಕಾಗುತ್ತದೆ.
ವಾಸ್ತವ ಏನು ಗೊತ್ತಾ? ಸುಗಮ ಸಂಗೀತವೀಗ ಬದಲಾದ ಕಾಲದಲ್ಲಿ ಸ್ವಂತಿಕೆಯನ್ನು ಉಳಿಸಿಕೊಂಡು, ಕಾಲಯಾನಕ್ಕೂ ಹೊಂದಿಕೊಂಡು ಸಾಗಬೇಕಾದ ಸಂಕ್ರಮಣ ಸ್ಥಿತಿಯಲ್ಲಿದೆ. ಅದರ ಸ್ಥಿತಿ ಈಗ ಅಕ್ಷರಶಃ ಅಳುವ ಕಡಲೊಳು ತೇಲಿ ಬರುತಲಿದೆ 'ಅಳುತ' ಹಾಯಿದೋಣಿ ಎಂಬಂತಾಗಿದೆ. ಅದರ ವೈಭವವನ್ನು ಯಾವ ಮೋಹನ ಮುರಳಿ ದೂರ ತೀರಕೆ ಕರೆಯಿತು ಎಂದು ಕೇಳುವಂತಾಗಿದೆ. ಸುಗಮ ಸಂಗೀತವೆಂದರೆ ಸಂಗೀತ ಮತ್ತು ಸಾಹಿತ್ಯದ ಅನುಪಮ ದಾಂಪತ್ಯ. ಮಸುಲಲಿತವಾಗಿ ಹರಿಯುವ ಗಾನಧಾರೆ.

ಆಕಾಶವಾಣಿ. ಗ್ರಾಮಾಪೋನ್

ಕ್ಯಾಸೆಟ್‌ಗಳಿಗಿಂತ ಮುಂಚೆ ಗ್ರಾಮಾಪೋನ್ ತಟ್ಟೆಗಳಲ್ಲಿ ಸುಗಮ ಸಂಗೀತದ ನಾದ ತಿರುಗುತ್ತಿತ್ತು. ಅದು ಕೇಳುಗರ ಕಿವಿಗಿಳಿದು ಮನದೊಳಗೆ ಗುನುಗುತ್ತಿತ್ತು. ಆಕಾಶವಾಣಿ ಕೂಡ ಈ ಕ್ಷೇತ್ರದ ಸಮೃದ್ಧಿಗೆ ಧಾರಾಳ ಕೊಡುಗೆ ನೀಡಿತ್ತು. ಆಗ ಬಾನುಲಿ ಕೇಂದ್ರಗಳಲ್ಲಿ ಪ್ರಸಾರವಾಗುತ್ತಿದ್ದ 'ನವಸುಮ' ವಾಗಲೀ, 'ಎಂಎಸ್ ಐಎಲ್ ಗೀತೆ'ಗಳಾಗಲೀ ಸುಗಮ ಸಂಗೀತದ ಹಾದಿಯನ್ನು ಅತ್ಯಂತ ಸುಗಮವಾಗಿಸಿದ್ದವು.
ಇದು ಹುಟ್ಟುವುದೇ ಕವಿತೆಯ ದರ್ಶನದಿಂದ. ವಾಸ್ತವವಾಗಿ ಸುಗಮ ಸಂಗೀತದಲ್ಲಿ ಕವಿತೆ ಗರಿಬಿಚ್ಚಿ ಕುಣಿವ ನವಿಲಾಗುತ್ತದೆ. ಹೀಗಾಗಿ ಅದು
ಸಾಹಿತ್ಯಕ್ಕಾಗಿಯೇ ಇರುವ ಸಂಗೀತ, ಅದಕ್ಕೆ ರಾಗದ ಮಿತಿಯಾಗಲಿ, ಚೌಕಟ್ಟಾಗಲಿ ಇರಬೇಕೆಂದಿಲ್ಲ. ಅದಕ್ಕೆ ಬೇಕಾಗಿರುವುದು ಸಾಹಿತ್ಯದ ಆಶಯವನ್ನು ಅಭಿವ್ಯಕ್ತಿಸುವ ಸ್ವರಸಂಯೋಜನೆ ಅಷ್ಟೇ. ಅದು ಒಂದೇ ರಾಗವೂ ಆಗಬಹುದು. ಯಾವ ರಾಗಕ್ಕೂ ಹೊಂದದ ಹೊಸ ಸ್ವರ ಸಂಚಾರವೂ ಇರಬಹುದು. ಒಟ್ಟಾರೆ ಅದು ಕವಿತೆಯ ಭಾವತೀವ್ರತೆ, ಆರ್ತತೆ, ನಿವೇದನೆ ಮುಂತಾದ ವೈಶಿಷ್ಟ್ಯಗಳನ್ನು ಸ್ವರಗಳ ಮೂಲಕ ಅನಾವರಣಗೊಳಿಸುತ್ತ ಸಾಹಿತ್ಯವನ್ನು ಕೇಳುಗರಿಗೆ ತಲುಪಿಸುತ್ತಿರುತ್ತದೆ. ಯಾವುದೇ ಪೂರ್ವಸಿದ್ಧತೆಯಿಲ್ಲದೆಯೇ ರಸಿಕರು ಸುಗುಮಸಂಗೀತವನ್ನು ಅಸ್ವಾದಿಸಲು ಸಾಧ್ಯ ಹಾಗೂ ಶಾಸ್ತ್ರೀಯ ಸಂಗೀತಕ್ಕೆ ಬೇಕಾದ ಆರಂಭಿಕ ಹಂತಗಳ ಕಠಿಣ ಶಿಕ್ಷಣ ಇದಕ್ಕೆ ಬೇಕಿಲ್ಲ ಎಂಬುದು ಇದರ ವೈಶಿಷ್ಟ್ಯ.

ಮೈಸೂರು ಅನಂತಸ್ವಾಮಿ - ಸಿ. ಅಶ್ವಥ್

ಕಾಳಿಂಗರಾಯರ ನಂತರ ಅವರ ಉತ್ತರಾಧಿಕಾರಿಯಂತೆ ಸುಗಮ ಸಂಗೀತ ಕ್ಷೇತ್ರದ ಬಾಗಿಲೊಳು ಕೈ ಮುಗಿದು ಬಂದವರು ಮೈಸೂರು ಅನಂತಸ್ವಾಮಿ. ಅವರು ಸುಗಮ ಸಂಗೀತವನ್ನು ಜನರ ಬಳಿಗೆ ತಂದರು. ಸಾವಿರಕ್ಕೂ ಹೆಚ್ಚು ಕವಿತೆಗಳಿಗೆ ಸಂಗೀತ ಸಂಯೋಜನೆ ಮಾಡಿ ಜನಪ್ರಿಯರಾದರು. ಅನಂತಸ್ವಾಮಿ ಉತ್ತುಂಗದಲ್ಲಿದ್ದ ವೇಳೆಯಲ್ಲಿಯೇ ಈ ಕ್ಷೇತ್ರ ಪ್ರವೇಶಿಸಿ ಭಾವಗೀತೆಗೆ ಜನಪದ ಸಂಗೀತ, ಶಾಸ್ತ್ರೀಯ ಸಂಗೀತ ಎಲ್ಲದರ ಟಚ್ ಇರುವ ಭಿನ್ನ ಮಾದರಿಯ ಮಾಧುರ್ಯವನ್ನು ಪರಿಚಯಿಸಿದವರು ಡಾ. ಸಿ.ಆಶ್ವಥ್.
ಸುಗಮ ಸಂಗೀತವನ್ನು ಜನಸಾಮಾನ್ಯರ ಬಳಿಗೆ ಕರೆದೊಯ್ಯವ ಜತೆಗೆ 'ಕನ್ನಡವೇ ಸತ್ಯ' ಕಾರ್ಯಕ್ರಮದಂಥ ಇತಿಹಾಸ ಸೃಷ್ಟಿಸಿದ ಈ ಗಾಯಕ ತಮ್ಮ ವರ್ಣರಂಜಿತ ವ್ಯಕ್ತಿತ್ವದಿಂದ ತಾವು ಸ್ಟಾರ್ ಪಟ್ಟಕ್ಕೇರಿದರಲ್ಲದೆ ಸುಗಮ ಸಂಗೀತವನ್ನೂ ಹೊಸ ಎತ್ತರಕ್ಕೆ ಕರೆದೊಯ್ದರು. ಮಂಗಳೂರಿನ ಜಯಂತಿದೇವಿ ಹಿರೇಬೆಟ್, ಮೈಸೂರಿನಲ್ಲಿ ಡಾ. ಶಮಂತಕಮಣಿ, ಎಚ್. ಆರ್ ಲೀಲಾವತಿ, ಎಂ. ವಿ. ಮಾಲತಿ, ಸಿ. ಕೆ. ತಾರಾ ಮತ್ತು ವೈ. ಎಸ್. ಇಂದ್ರಾ, ಎಂ. ಎನ್. ರತ್ನ ಮೋಹನ್ ಕುಮಾರಿ ಮತ್ತು ಸೋಹನ್‌ಕುಮಾರಿ, ಶ್ಯಾಮಲಾ ಜಾಗೀ‌ದಾರ್, ಶಾಮಲಾ ಭಾವೆ ಮುಂತಾದ ಗಾಯಕಿಯರು ಸುಗಮ ಸಂಗೀತವನ್ನು ಪೊರೆದರು. ಬಾಳಪ್ಪ ಹುಕ್ಕೇರಿ, ರತ್ನಮಾಲಾ ಪ್ರಕಾಶ್, ಎಂ.ಕೆ. ಜಯಶ್ರೀ, ಬಿ.ಕೆ. ಸುಮಿತ್ರ, ನೀಲಮ್ಮ ಕೊಡ್ಡಿ, ಅನುರಾಧಾ ಧಾರೇಶ್ವ‌ ಮೊದಲಾದ ನೂರಾರು ಮಂದಿ ಪರಂಪರೆ ಮುಂದುವರಿಸಿದರು.
1978ರಲ್ಲಿ 'ನಿತ್ಯೋತ್ಸವ ಕ್ಯಾಸೆಟ್” ಬಂದ ಮೇಲೆ ಸುಗಮ ಸಂಗೀತದ ವೈಭವ ನೂರು ಪಟ್ಟು ಜಾಸ್ತಿಯಾಯಿತು. ಒಬ್ಬ ಪ್ರಜ್ಞಾವಂತ ಕವಿ, ಒಬ್ಬ ಭಾವುಕ ಸಂಗೀತ ಸಂಯೋಜಕನ ಸಾಹಸ ಸುಗಮ ಸಂಗೀತಕ್ಕೆ ಬೆಳಕಾಯಿತು. ಹತ್ತಾರು ಗಾಯಕರು ದಿನ ಬೆಳಗಾಗುವುದರಲ್ಲಿ ಕೇಳುಗರ ಕಣ್ಮಣಿಗಳಾದರು. ನಂತರ ಧ್ವನಿಸುರುಳಿಗಳ ಸರಣಿಯೇ ಬಂತು. ಎಚ್.ಎಸ್. ವೆಂಕಟೇಶಮೂರ್ತಿ, ಲಕ್ಷ್ಮಣರಾವ್ ಮತ್ತು ಎಂ.ಎನ್. ವ್ಯಾಸರಾವ್ ಮುಂತಾದ ಆಗಿನ ಹೊಸ ಕವಿಗಳೂ ಸುಗಮ ಸಂಗೀತದ ಮೂಲಕ ಜನಕ್ಕೆ ಹತ್ತಿರವಾದರು. ಇವೆಲ್ಲ ಸುಗಮ ಸಂಗೀತ ಕ್ಷೇತ್ರದ ಸ್ಕೂಲ ನೋಟ. ಕೇವಲ ಶ್ರಾವ್ಯ ಮಾಧ್ಯಮವಾಗಿ ಬಂದ ಈ ಗಾಯನ ಪ್ರಕಾರ ಕವಿಗೂ ಸಹೃದಯನಿಗೂ ರಸ ಸೇತುವೆಯಾದುದೇ ಒಂದು ವಿಶೇಷ.

ಗತವೈಭವದ ಝಲಕ್

ಭಾವಗೀತೆ ಮತ್ತು ಸುಗಮ ಸಂಗೀತ ಯಾವುದು ಮೊದಲು ಎಂದರೆ ವಿವರಿಸುವುದು ಕಷ್ಟ. ಟ್ಯೂನ್ ಮೊದಲು ಹುಟ್ಟಿತೋ, ಹಾಡು ಮೊದಲು ಹುಟ್ಟಿತೋ ಹೇಳುವುದೂ ಕಷ್ಟ. ಭಾವಗೀತೆ ಎಂಬ ಪ್ರಕಾರವಂತೂ ಹಾಡಲೆಂದೇ ರಚಿತವಾದವು. ಅದು ಅರಳಿದಾಗಲೇ ಸುಗಮ ಸಂಗೀತವೂ ಬಹುಶಃ ಹುಟ್ಟಿರಬೇಕು. ಪ್ರೊ.ಬಿಎಂಶ್ರೀ ಅವರ 'ಇಂಗ್ಲೀಷ್ ಗೀತೆಗಳು' (1924) ಕೃತಿ ಈ ಕಾಲದ ಸುಗಮ ಸಂಗೀತದ ಕರುಣಾಳು ಬೆಳಕಿನಂತೆ ಬಂದು ಮುಸುಕಿದ ಮಬ್ಬನ್ನು ಸರಿಸಿ ಕನ್ನಡ ಕಾವ್ಯಲೋಕವನ್ನು ಕೈಹಿಡಿದು ನಡೆಸತೊಡಗಿತು. ಆಗ ಕಾವ್ಯದ ವಸ್ತು ಹೊಸದಾಯಿತು.
'ವೀಸೀ ಅವರ ಗೀತೆಗಳು' ಸಂಕಲನದಿಂದ (1931) ಹಳೇ ಮೈಸೂರು ಪ್ರಾಂತ್ಯದಲ್ಲಿ ಸುಗಮ ಸಂಗೀತ ಚಿಗುರಿತು. ಕಳಲೆ ಸಂಪತ್ಕುಮಾರಾಚಾರ್ಯರು ಆಧುನಿಕ ಕವಿತೆಗಳ ಪ್ರತ್ಯೇಕ ಕಾರ್ಯಕ್ರಮಗಳನ್ನು ಪಕ್ಕವಾದ್ಯದೊಂದಿಗೆ ನಡೆಸಿದ್ದರು. ಅವರು ಯಾವುದೇ ಮದುವೆಗೆ ಹೋದಾಗಲೂ 'ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ಗೀತೆಯನ್ನು ಹಾಡದೇ ಬರುತ್ತಿರಲಿಲ್ಲವಂತೆ. ನಂತರ ಭಾವಗೀತಾ ಗಾಯನಕ್ಕೆ ಒಂದು ರೀತಿಯ ಬಿಡುಗಡೆ ನೀಡಿ ಹೊಸತನ ತಂದವರು, ಪಿ. ಕಾಳಿಂಗರಾವ್. ಶಾಸ್ತ್ರೀಯ ಸೇರಿದಂತೆ ಸಂಗೀತದ ಹತ್ತಾರು ಪ್ರಕಾರಗಳಲ್ಲಿ ಪ್ರಕಾಂಡ ಪಾಂಡಿತ್ಯವನ್ನು ಪಡೆದಿದ್ದ ಕಾಳಿಂಗರಾಯರೇ ನಿಜವಾಗಿ ಕನ್ನಡದ ಸುಗಮಸಂಗೀತವನ್ನು ರೂಪಿಸಿದರು ಎಂದರೂ ಸರಿಯೇ. ಹಳೆ ಮೈಸೂರು ಪ್ರಾಂತ್ಯದಲ್ಲಿ ಸುಗಮಸಂಗೀತಕ್ಕೆ ಆಧಾರವಾಗಿ ನಿಂತವರೆಂದರೆ ಪ್ರಖ್ಯಾತ ಪಿಟೀಲು ವಿದ್ವಾಂಸ ಎ.ವಿ. ಕೃಷ್ಣಮಾಚಾರ್ (ಪದ್ಮಚರಣ್).

ನಾವಿಕನಿಲ್ಲದ ದೋಣಿ

ಸುಗಮ ಸಂಗೀತದ ಬೆಳವಣಿಗೆಯ ಹಾದಿಯಲ್ಲಿ ಗುಣ ಮತ್ತು ದೋಷಗಳು ಒಟ್ಟೋಟ್ಟಿಗೇ ಬೆಳೆದುಬಂದಿವೆ. ಕ್ಯಾಸೆಟ್ ಸಂಸ್ಕೃತಿಯಿಂದ ಸಾವಿರಾರು ಹಾಡುಗಳು ಬಂದವು. ನೂರಾರು ಗಾಯಕ-ಗಾಯಕಿಯರು ಪ್ರಸಿದ್ಧರಾದರು. ಗಾಯನದ ಶೈಲಿ, ವಾದ್ಯಗಳ ಬಳಕೆಯಲ್ಲಿ ಹೊಸತನ ಬಂತು. ಪಿಟೀಲು, ತಬಲಾ, ಕೊಳಲುಗಳ ಜೊತೆಗೆ ಎಲೆಕ್ಟ್ರಾನಿಕ್ಸ್ ಸಾಧನಗಳೂ ಸೇರಿದವು. ಧ್ವನಿಮುದ್ರಣದಲ್ಲೂ ಸುಧಾರಣೆಯಾಯಿತು. ಧ್ವನಿಯ ಸೂಕ್ಷ್ಮತೆಗಳನ್ನು ತಿದ್ದಿ ಚೆಂದ ಮಾಡಲು ಈಗ ಸಾಧ್ಯವಾಗಿದೆ. ಇಷ್ಟೆಲ್ಲ ಒಡವೆ ಇದ್ದೂ ಈ ಕ್ಷೇತ್ರ ಬಡವಾಗಿದ್ದು ಏಕೆ ಎಂಬ ಪ್ರಶ್ನೆ ಮಾತ್ರ ಈಗೀಗ ಸುಗಮ ಸಂಗೀತ ಪ್ರಿಯರನ್ನು ಕಾಡತೊಡಗಿದೆ. ಸಿ. ಅಶ್ವಥ್‌, ಮೈಸೂರು ಅನಂತಸ್ವಾಮಿ, ರಾಜು ಅನಂತಸ್ವಾಮಿಯಂಥವರು ಕಾಲವಾದ ನಂತರ ಈ ಕ್ಷೇತ್ರ ನಾವಿಕನಿಲ್ಲದ ದೋಣಿಯಂತಾಗಿದೆ. ಸಾಲದೆಂಬಂತೆ ಕಾಲನ ಹೊಡೆತಕ್ಕೆ ಸಿಕ್ಕು ನಲುಗತೊಡಗಿದೆ.

ಏನಾಗಿದೆ ಹಾಗಾದರೆ?

ಹೊಸ ಕವಿಗಳ ಹಾಡು ಬರುತ್ತಿಲ್ಲ. ಬಂದರೂ ಜನರ ಮನ ಮುಟ್ಟುವಂತಹ ಸಂಗೀತ ಸಂಯೋಜನೆ ಇಲ್ಲ. ಅದೇ ಹಳೆಯ ಸುಪ್ರಸಿದ್ಧ ಹಾಡುಗಳೇ ಈಗಲೂ ಈ ಕ್ಷೇತ್ರದ ಜೀವ ಹಿಡಿದುಕೊಂಡಂತೆ ಭಾಸವಾಗುತ್ತಿದೆ. ಆಗ ಸುಗಮ ಸಂಗೀತವೆನ್ನುವುದು ಗಾಯಕರ, ಸಂಯೋಜಕರ ಬದುಕಿಗಿಷ್ಟು ಅನ್ನ ಕೊಡುತ್ತಿತ್ತು. ಈಗ ಹಾಗಿಲ್ಲ. ಕ್ಯಾಸೆಟ್ ಕಾಲ ಮುಗಿದಿದೆ, ಸಿಡಿಗಳ ಕಾಲವೂ ಸರಿದಿದೆ. ಸಾಮಾಜಿಕ ಜಾಲತಾಣಗಳಿಂದ ಹೆಚ್ಚು ನಿರೀಕ್ಷೆ ಮಾಡುವಂತಿಲ್ಲ. ಕಾರ್ಯಕ್ರಮಗಳು ಸಿಕ್ಕರೆ ಒಂದಿಷ್ಟು ಉಸಿರಾಡಬಹುದು. ಬೇರಾವ ವಿಧದಿಂದಲೂ ರಾಗಸಂಯೋಜನೆಯ ಖರ್ಚನ್ನು ಕೂಡ ಮರಳಿ ಪಡೆಯುವುದು ಕಷ್ಟವಾಗಿದೆ. ಪ್ರಾಯೋಜಕರಿದ್ದರೆ ಮಾತ್ರ ಏನಾದರೂ ಮಾಡಬಹುದೆಂಬ ಸ್ಥಿತಿ ಇದೆ. ಸಾಲದೆಂಬಂತೆ ಈ ಕ್ಷೇತ್ರದಲ್ಲಿ ಒಗ್ಗಟ್ಟಿಲ್ಲ. ಎಲ್ಲರೂ ಸೇರಿ ಏನಾದರೂ ಮಾಡೋಣವೆಂಬ ಕನಸಿಲ್ಲ. ಹೊಸ ಕಾಲಕ್ಕೆ ಹೊಂದುವಂತೆ ಕ್ಷೇತ್ರವನ್ನು ಕಟ್ಟುವ ಚಿಂತನೆಗಳಿಲ್ಲ. ತಮ್ಮ ಪಾಡಿಗೆ ತಾವು ಏನೋ ಮಾಡುತ್ತ, ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಇಡೀ ಕ್ಷೇತ್ರದ ಒಳಿತಿನತ್ತ ನೋಡುತ್ತಲೇ ಇಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಆಶ್ವಥ್​ ರೀತಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಗಟ್ಟಿಗರಿಲ್ಲ. ಕೆಲವರಲ್ಲಿ ಹೊಸತೇನೋ ಮಾಡಬೇಕು ಎಂಬ ಉತ್ಸಾಹವೇನೋ ಇದೆ. ಆದರೆ ಮಾಡುವುದೇನೆಂಬ ಸ್ಪಷ್ಟತೆ ಇಲ್ಲ. ಆದ್ದರಿಂದಲೇ ಭಾವಗೀತೆಗಳನ್ನು ಸಿನಿಮಾ ಹಾಡುಗಳ ಮಾದರಿಯಲ್ಲಿ ಸಂಯೋಜಿಸುವ ಹಾಗೂ ಆ ಮೂಲಕ ಸಿನಿ ಹಾಡುಗಳ ಪ್ರಿಯರನ್ನು ಸೆಳೆದುಬಿಡಬಹುದೆಂಬ ಹುಚ್ಚುತನವೂ ಕಾಣುತ್ತಿದೆ. ಸಿನಿಮಾ ಹಾಡಿನಂತೆ ಮಾಡುವುದಾದರೆ ನೀವು ಸಿನಿಮಾ ಹಾಡೆಂದೇ ಮಾಡಿ, ಸುಗಮ ಸಂಗೀತದ ಹೆಸರನ್ನೇಕೆ ಕೆಡಿಸುತ್ತೀರಿ ಎಂದು ಅಂಥವರಿಗೆ ಗಟ್ಟಿ ಧ್ವನಿಯಲ್ಲಿ ಹೇಳಬೇಕಿದೆ.
ಇಂಥ ಹತ್ತಾರು ಕಾರಣದಿಂದಲೇ ಈ ಕ್ಷೇತ್ರದಲ್ಲಿ ಯಾವ ಸಂಭ್ರಮವೂ ಕಾಣುತ್ತಿಲ್ಲ. ಒಟ್ಟಾರೆ ಹೇಳುವುದಾದರೆ ಸುಗಮ ಸಂಗೀತ ಕ್ಷೇತ್ರವೀಗ ಭಾವಗೀತೆಯನ್ನು ಬದಿಗಿಟ್ಟು 'ದಾರಿ ಕಾಣದಾಗಿದೆ ರಾಘವೇಂದ್ರನೇ...' ಎಂದು ಭಕ್ತಿಗೀತೆ ಹಾಡುವ ಸ್ಥಿತಿಯಲ್ಲಿದೆ. ಗತವೈಭವ ಮರಳಿ ಬರುವ ಕಾಲದ ದಿಕ್ಕು ದೆಸೆ ಹುಡುಕುತ್ತ ಕಾಯು ವುದಷ್ಟೇ ಅದಕ್ಕುಳಿದ ಹಾದಿಯಾಗಿದೆ.