ಶೃಂಗೇರಿ: ಮಲೆನಾಡಿನಲ್ಲಿ ಅಡಕೆ ಹಳದಿ ಎಲೆರೋಗ, ಎಲೆಚುಕ್ಕೆ ರೋಗದಿಂದ ಅಡಕೆ ನಿಧಾನವಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಇದರಿಂದ ರೈತರು ಪರ್ಯಾಯ ಬೆಳೆಯತ್ತ ಗಮನ ಹರಿಸಿದ್ದಾರೆ. ಇದಕ್ಕೆ ಮೆಣಸೆ ಗ್ರಾಪಂ ಕಾನುವಳ್ಳಿ ಶಂಕರಪ್ಪ ಕಾಳುಮೆಣಸು ಬೆಳೆದಿರುವುದು ತಾಜಾ ನಿದರ್ಶನ.
ಶೃಂಗೇರಿಯಿಂದ ಸುಮಾರು ಮೂರು ಕಿ.ಮೀ ದೂರದಲ್ಲಿರುವ ಕಾನುವಳ್ಳಿಯಲ್ಲಿ ಶಂಕರಪ್ಪ ಅವರಿಗೆ ಇರುವ ಜಮೀನು ಕೇವಲ ಅರ್ಧ ಎಕರೆ. ಇಷ್ಟರಲ್ಲೇ ಶಂಕರಪ್ಪ ಇಳಿವಯಸ್ಸಿನಲ್ಲೂ ಕಾಡು ಮರಗಳಿಗೆ ಕೇವಲ 80 ಕಾಳುಮೆಣಸು ಬಳ್ಳಿಗಳನ್ನು ಹಬ್ಬಿಸಿ ಸಾವಯವ ಪದ್ಧತಿಗೆ ಒತ್ತು ನೀಡಿ ಪಣಿಯೂರು ತಳಿಗಳನ್ನು ಬೆಳೆಸಿ ವರ್ಷಕ್ಕೆ ನಾಲ್ಕು ಕ್ವಿಂಟಾಲ್ ಇಳುವರಿ ಪಡೆಯುತ್ತಿದ್ದಾರೆ.
ಆಯ್ದ ಪಣಿಯೂರು ಬಳ್ಳಿಗಳನ್ನು ಮನೆಯಲ್ಲಿ ಲಭ್ಯವಿರುವ ಗೊಬ್ಬರ ಬಳಸಿ ನಾಲ್ಕಾರು ವರ್ಷಗಳಿಂದ ಕಾಳುಮೆಣಸು ಬೆಳೆಸಿ ಉತ್ತಮ ಸಲು ತೆಗೆಯುತ್ತಿರುವ ಅವರ ಕಾರ್ಯ ಮಾದರಿ. ತಜ್ಞರು ಹೇಳಿದ ಗೊಬ್ಬರ ಬಳಸಿದ್ದರೂ ಶಂಕರಪ್ಪ ತೆಗೆದ ಸಲು ಉಳಿದ ರೈತರು ಪಡೆಯಲು ಸಾಧ್ಯವಿಲ್ಲ. ಕಪ್ಪುಬಂಗಾರ ಕಾಳುಮೆಣಸಿಗೆ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್‌ಗೆ 65,000 ರೂ. ಇದೆ. ಹೆಚ್ಚು ಶ್ರಮ ಇಲ್ಲದೆ ಕಡಿಮೆ ಕರ್ಚಿನಲ್ಲಿ ಅಧಿಕ ಇಳುವರಿ ಪಡೆಯುತ್ತಿದ್ದಾರೆ.
ಕಾಳುಮೆಣಸಿನ ಆರೋಗ್ಯವಂತ ಬಳ್ಳಿಗಳಿಂದಲೇ ಕಾಲುಬಳ್ಳಿಗಳನ್ನು ಬಳಸಿ ನಾಟಿ ಮಾಡಬೇಕು. ಇದರ ಕೃಷಿ ಮಾಡಲು ಇಚ್ಛಿಸುವರು ತೋಟದಲ್ಲಿಯೇ ಬಳ್ಳಿಗಳನ್ನು ಬೆಳೆಸಬೇಕು. ರೈತರು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಆದಾಯ ನೀಡುವ ಬೆಳೆಗಳತ್ತ ಹೆಚ್ಚಿನ ಗಮನ ನೀಡಬೇಕು ಎಂಬುದು ಕಾನುವಳ್ಳಿ ಶಂಕರಪ್ಪ ಅವರ ಅಭಿಪ್ರಾಯ.