ಪ್ರವಾದಿ ಮಹಮದ್(ಸ) ಅವರ ಪತ್ನಿ ಆಯಿಶಾ ಹೇಳಿದ ಘಟನೆ ಯಿದು: ಪ್ರವಾದಿಯವರ ಹತ್ತಿರ ಒಬ್ಬ ವ್ಯಕ್ತಿ ಆಗಮಿಸಿ, ‘ನನ್ನ ಕೆಲವು ಗುಲಾಮರು (ಕೂಲಿ ಕಾಯಕದವರು) ಸುಳ್ಳು ಹೇಳುತ್ತಾರೆ, ಹಾಗೂ ನನ್ನ ಆಜ್ಞೆಗಳನ್ನು ಪಾಲಿಸುವುದಿಲ್ಲ, ನಾನು ಅವರನ್ನು ದೂಷಿಸುತ್ತೇನೆ, ಹೊಡೆಯುತ್ತೇನೆ. ಇದರಿಂದ ಏನಾಗಬಹುದು?’ ಎಂದು ಕೇಳಿದನು.
ಪ್ರವಾದಿ ಹೇಳಿದರು: ಕಿಯಾಮತ್(ಬದುಕಿನ ಅಂತ್ಯದಲ್ಲಿ) ದಿವಸ ಬಂದಾಗ ಅವರ ಸುಳ್ಳು, ವಂಚನೆ ಮತ್ತು ನೀನು ನೀಡುವ ಶಿಕ್ಷೆಗಳ ವಿಚಾರಣೆ ನಡೆಸಲಾಗುವುದು. ನಿನ್ನ ಶಿಕ್ಷೆಯು ಅವರ ಅಪರಾಧಗಳಿಗಿಂತ ಕಡಿಮೆಯಾದರೆ, ಅದು ನಿನ್ನ ಮಟ್ಟಿಗೆ ಅನುಗ್ರಹವಾಗಿರುವುದು. ಆದರೆ ನಿನ್ನ ಶಿಕ್ಷೆ ಅವರ ಅಪರಾಧಗಳಿಗಿಂತ ಹೆಚ್ಚೆಂದು ತೋರಿದರೆ, ಆ ಹೆಚ್ಚುವರಿ ಪ್ರಮಾಣದ ಪ್ರತೀಕಾರವನ್ನು ನಿನ್ನಿಂದ ಪಡೆಯಲಾಗುವುದು. ಆ ವ್ಯಕ್ತಿ ಈ ವಿಚಾರವನ್ನು ಕೇಳಿ ಒಂದು ಮೂಲೆಯಲ್ಲಿ ಕುಳಿತು ಬಿಕ್ಕಿಬಿಕ್ಕಿ ಅಳಲಾರಂಭಿಸಿದನು. ನಂತರ ಪ್ರವಾದಿಯವರು ಅವನಿಗೆ, ‘ನಾವು ನಿರ್ಣಾಯಕ ದಿನದಂದು ನ್ಯಾಯದ ತಕ್ಕಡಿಯಲ್ಲಿ ಪ್ರತಿಯೊಬ್ಬನ ಕರ್ಮವನ್ನು ತೂಗುವೆವು.
ಯಾರ ತೂಕದಲ್ಲಿಯೂ ಯಾವುದೇ ಅನ್ಯಾಯವಾಗುವುದಿಲ್ಲ. ಅಣು ಗಾತ್ರದಷ್ಟು ಕೆಟ್ಟ ಅಥವಾ ಉತ್ತಮ ಕರ್ಮ ಯಾರದೇ ಕರ್ಮಪತ್ರದಲ್ಲಿದ್ದರೆ ನಾವು ಅದನ್ನು ಮುಂದೆ ತರುವೆವು. ಲೆಕ್ಕ ಪಡೆಯಲು ನಾವೇ ಸಾಕು’ ಎಂದರು. ಅದಕ್ಕೆ ಆ ವ್ಯಕ್ತಿ, ‘ಈಗ ನಾನು ಆ ಗುಲಾಮರಿಂದ ಬೇರ್ಪಡುವುದೇ ನನ್ನ ಪಾಲಿಗೆ ಶ್ರೇಷ್ಠವೆಂದು ಭಾವಿಸುತ್ತೇನೆ. ತಾವು ಸಾಕ್ಷಿಯಾಗಿರಿ, ನಾನು ಅವರೆಲ್ಲರನ್ನು ಸ್ವತಂತ್ರಗೊಳಿಸುತ್ತೇನೆ’ ಎಂದನು. ಈ ಲೋಕದಲ್ಲಿ ಬಹುಜನರ ತಮ್ಮ ಸೇವಕರನ್ನೂ, ಗುಲಾಮರನ್ನೂ ಹಿಂಸಿಸುತ್ತಾರೆ. ಹೀಗಿರುವಾಗ ಆ ವ್ಯಕ್ತಿ ಪ್ರವಾದಿ ಹತ್ತಿರ ಬಂದಿದ್ದೇಕೆ? ಮತ್ತು ಇದರಿಂದ ಏನಾಗಬಹುದು ಎಂದು ಕೇಳಿದ್ದೇಕೆ? ಆ ವ್ಯಕ್ತಿಯ ಮನಸ್ಸಿನಲ್ಲಿ ಪರಲೋಕದ ಚಿಂತೆ ಇಲ್ಲದಿರುತ್ತಿದ್ದರೆ ಈ ಪ್ರಶ್ನೆ ಅವನಲ್ಲಿ ಮೂಡುತ್ತಿರಲಿಲ್ಲ. ಇನ್ನು ಆತ ಪ್ರವಾದಿಗಳ ಮಾತನ್ನಾಲಿಸಿ, ಬಿಕ್ಕಿಬಿಕ್ಕಿ ಅಳುವುದನ್ನು ಗಮನಿಸಿರಿ... ಅತ್ತ ನಂತರ ತನ್ನ ಗುಲಾಮನನ್ನು ಸ್ವತಂತ್ರಗೊಳಿಸುತ್ತಾನೆ, ತನ್ನ ಈ ಕರ್ಮವು ಪ್ರಾಯಶ್ಚಿತವಾಗಲೆಂದು ಆತ ಭಾವಿಸುತ್ತಾನೆ.