ಶಿವಮೊಗ್ಗ: ನನ್ನನ್ನು ನೋಡಿದಾಕ್ಷಣ ಅಪ್ಪ-ಅಮ್ಮ ಇಬ್ಬರೂ ಹರ್ಷ ಬಂದನೇ.. ಹರ್ಷನನ್ನು ಕರೆದುಕೊಂಡು ಬಂದೆಯಾ? ಎಂದು ಕೇಳ್ತಿದ್ದಾರೆ. ಅವರಿಗೆ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ. ಅಪ್ಪನಿಗೆ ಕಣ್ಣಿನ ಆಪರೇಷನ್ ಆಗಿ ಐದು ದಿನವಾಗಿದೆ. ಅವರಿಗೆ ಅಳಬೇಡಿ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಇಂದು ಹರ್ಷನ 3ನೇ ದಿನ ಕಾರ್ಯ ನಡೆಸುತ್ತಿದ್ದೇವೆ. ಕಾರ್ಯ ಎಂದು ಹೇಳಲು ಇಷ್ಟವಿಲ್ಲ. ನಾನು ತಮ್ಮನನ್ನು ದೇವಸ್ಥಾನಕ್ಕೆ ಬಿಟ್ಟು ಬಂದಿದ್ದೇನೆ ಅಂದುಕೊಂಡಿರುವೆ... ಎನ್ನುತ್ತಲೇ ಹರ್ಷನ ಅಕ್ಕ ಅಶ್ವಿನಿಯ ಕಣ್ಣೀರ ಕಟ್ಟೆ ಹೊಡೆದಿತ್ತು...
ಭಾನುವಾರ ರಾತ್ರಿ ಶಿವಮೊಗ್ಗದಲ್ಲಿ ಕೊಲೆಯಾದ ಭಜರಂಗದಳ ಕಾರ್ಯಕರ್ತ ಹರ್ಷನ ಅಂತ್ಯಕ್ರಿಯೆ ಸೋಮವಾರ ಸಂಜೆ ಸಾವಿರಾರು ಜನ ಸಮ್ಮುಖದಲ್ಲಿ ನೆರವೇರಿತು. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಂಗಳವಾರ 3ನೇ ದಿನದ ಕಾರ್ಯ ಮಾಡುವ ವೇಳೆ ಹರ್ಷನ ಅಕ್ಕ ಮತ್ತು ತಂದೆಯ ಗೋಳಾಟ ಕರುಳು ಹಿಂಡುವಂತಿತ್ತು.
ತಾನಾಯಿತು ತನ್ನ ಕೆಲಸವಾಯಿತು ಹಾಗೂ ದೇವಸ್ಥಾನದಲ್ಲಿ ಸೇವೆಯಾಯಿತು ಎಂಬಂತಿದ್ದ ನನ್ನ ತಮ್ಮ. ನಾನು ಊರಿಗೆ ಬರುವುದನ್ನೇ ಹರ್ಷ ಕಾಯುತ್ತಿದ್ದ. ನಾನು ಬಂದ ಕೂಡಲೇ ನನ್ನೊಟ್ಟಿಗೇ ಇರುತ್ತಿದ್ದ. ಇದೀಗ ಅನಾಥ ಭಾವ ಕಾಡುತ್ತಿದೆ ಎನ್ನುತ್ತಲೇ ಭಾವುಕರಾದ ಅಶ್ವಿನಿ, ಹರ್ಷ ಇಂದು ನಮ್ಮ ಜತೆ ಇಲ್ಲದಿರಬಹುದು. ಆದರೆ ಲಕ್ಷಾಂತರ ಜನ ಅಣ್ಣ-ತಮ್ಮಂದಿರನ್ನು ಕೊಟ್ಟು ಹೋಗಿದ್ದಾನೆ ಎಂದು ಗದ್ಗದಿತರಾದರು.
ಹರ್ಷ ಸಣ್ಣ ಹುಡುಗನಿದ್ದಾಗಿನಿಂದಲೂ ಹಿಂದೂ ಪರವಾಗಿಯೇ ಇದ್ದ. ನನಗೆ ಜೀವ ಬೆದರಿಕೆ ಇದೆ ಆತ ನಮ್ಮ ಬಳಿ ಎಂದೂ ಹೇಳಿರಲಿಲ್ಲ. ಅಕ್ಕಪಕ್ಕದವರು ಹೇಳುತಿದ್ದರೂ ನಾನು ನಂಬಿರಲಿಲ್ಲ. ನನ್ನ ಮಗನಿಗೆ ಯಾವುದೇ ದುರಭ್ಯಾಸಗಳೂ ಇರಲಿಲ್ಲ. ಅಕ್ಕಪಕ್ಕದವರು ಎಲ್ಲರಿಗೂ ತುಂಬಾ ಬೇಕಾದ ಹುಡುಗನಾಗಿದ್ದ. ನನ್ನ ಮಗ ಒಳ್ಳೆಯವನಾಗಿದ್ದಕ್ಕೇ ಆತನ ಅಂತ್ಯಕ್ರಿಯೆಗೆ ಸಾವಿರಾರು ಜನ ಸೇರಿದ್ದರು. ನಮ್ಮ ಕಾರ್ಯವನ್ನ ಆತ ಮಾಡಬೇಕಿತ್ತು. ಆದರೀಗ ನಾವೇ... ಎಂದು ಹರ್ಷನ ತಂದೆ ನಾಗರಾಜ್ ಕಣ್ಣೀರಿಟ್ಟರು.