ನ್ಯೂಸ್

ಸಿಂದಗಿಯಲ್ಲಿ ಮಟಮಟ ಮಧ್ಯಾಹ್ನವೇ ಅಕ್ಕ-ತಮ್ಮನ ಭೀಕರ ಹತ್ಯೆ! ಕಲ್ಲಿನಿಂದ ಜಜ್ಜಿ ವಿಕೃತಿ ಮೆರೆದ ಗಂಡ

ವಿಜಯಪುರ: ಸಿಂದಗಿ ತಾಲೂಕಿನ ಬೂದಿಹಾಳ ಪಿಎಚ್ ಗ್ರಾಮದಲ್ಲಿ ಇಂದು ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಅಕ್ಕ-ತಮ್ಮನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಜೋಡಿ ಕೊಲೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ರಾಜಶ್ರೀ ಶಂಕರಗೌಡ ಬಿರಾದಾರ(32) ಮತ್ತು ಈಕೆಯ ತಮ್ಮ ನಾನಾಗೌಡ ಶ್ರೀಮಂತ ಯರಗಲ್(29) ಕೊಲೆಯಾದವರು. ಘಟನೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ. ರಾಜಶ್ರೀ ಅವರ ಪತಿ ಶಂಕರಗೌಡ ಅಪ್ಪಾಸಾಹೇಬ ಬಿರಾದಾರ ಸೇರಿ ನಾಲ್ವರು ಈ ಕೃತ್ಯ ಎಸಗಿದ್ದಾರೆ. ಐದು ವರ್ಷಗಳ ಹಿಂದೆ ರಾಜಶ್ರೀ ಹಾಗೂ ಶಂಕರಗೌಡ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕಳದ ವರ್ಷದಿಂದ ದಂಪತಿ ನಡುವೆ ಕಲಹ ಉಂಟಾಗಿತ್ತು. ಬೇಸತ್ತ ರಾಜಶ್ರೀ, ಗಂಡನ ಮನೆ ತೊರೆದು ತವರು ಮನೆಯಲ್ಲೇ ನೆಲೆಸಿದ್ದಳು.

ಇಂದು(ಸೋಮವಾರ) ತಮ್ಮನೊಂದಿಗೆ ರಾಜಶ್ರೀ, ತನ್ನ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುವ ಉದ್ದೇಶದಿಂದ ಗಂಡನೂರಿನ ಶಾಲೆಯಿಂದ ವರ್ಗಾವಣೆ ಪ್ರಮಾಣ‌ಪತ್ರ ಪಡೆದು ವಾಪಸ್​ ಹಿಂತಿರುಗುತ್ತಿದ್ದಳು. ಬೂದಿಹಾಳ ಪಿಎಚ್ ಗ್ರಾಮದಿಂದ ಓತಿಹಾಳ ಕಡೆಗೆ ಹೋಗುವ ಮಾರ್ಗದ ಹಳ್ಳದ ಹತ್ತಿರ ದಾಳಿ ಮಾಡಿದ ಆರೋಪಿಗಳು ಅಕ್ಕ-ತಮ್ಮನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಿಂದಗಿ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.