ನ್ಯೂಸ್

ಸನಾತನ ಧರ್ಮವನ್ನು ಅವಹೇಳನ ಮಾಡಿ, ಪ್ರಧಾನಿ ಮೋದಿ ವಿರುದ್ಧ ಕೀಳಾಗಿ ಪೋಸ್ಟ್​ ಹಾಕಿದ್ದ ಉಪನ್ಯಾಸಕನಿಗೆ ಜಾಮೀನು ನಿರಾಕರಿಸಿದ ಕೋರ್ಟ್​...

ಅಸ್ಸಾಂ: ಸನಾತನ ಧರ್ಮವನ್ನು ಅವಹೇಳನ ಮಾಡಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೀಳು ಮಟ್ಟದ ಟೀಕೆ ಮಾಡಿದ್ದ ಅತಿಥಿ ಉಪನ್ಯಾಸಕನೋರ್ವನಿಗೆ ಕೋರ್ಟ್​ ಜಾಮೀನು ನೀಡಲು ನಿರಾಕರಿಸಿದೆ.

ಗುರುಚರಣ ಕಾಲೇಜಿನ ಅತಿಥಿ ಉಪನ್ಯಾಸಕ ಸೌರದೀಪ್​ ಸೇನ್​ಗುಪ್ತಾರನ್ನು ಶುಕ್ರವಾರ ಸಂಜೆ ಬಂಧನ ಮಾಡಲಾಗಿತ್ತು. ದೆಹಲಿ ಹಿಂಸಾಚಾರವನ್ನು ಗೋದ್ರಾ ಹತ್ಯಾಖಾಂಡಕ್ಕೆ ಹೋಲಿಸಿ ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿದ್ದರು. ಹಿಂದು ಸನಾತನ ಧರ್ಮದ ಬಗ್ಗೆ ನಿಂದನಾತ್ಮಕವಾಗಿ ಬರೆದಿದ್ದಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರನ್ನು ಸಮೂಹ ಕೊಲೆಗಾರ ಎಂದು ಉಲ್ಲೇಖಿಸಿದ್ದರು.

ಬಂಧಿತರಾದ ಅತಿಥಿ ಉಪನ್ಯಾಸಕನ ಪರ ವಕೀಲರು ಜಾಮೀನಿಗೆ ಸಿಲ್ಚಾರ್​ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಶನಿವಾರ ವಿಚಾರಣೆ ನಡೆಸಿದ ಕೋರ್ಟ್​, ಸೌರದೀಪ್​ಗೆ ಸೋಮವಾರದವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.ಅಂದು ಮತ್ತೊಮ್ಮೆ ವಿಚಾರಣೆ ನಡೆಸಲಿದೆ.

ಸೌರದೀಪ್​ ಸಿಲ್ಚಾರ್​ನ ಇಟ್​ಖೋಲಾದ ನಿವಾಸಿ. ಇದೇ ಪಟ್ಟಣದ ಜಿ.ಸಿ. ಕಾಲೇಜಿನಲ್ಲಿ ಫಿಸಿಕ್ಸ್​ ವಿಷಯದ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ. ಈಶಾನ್ಯ ದೆಹಲಿಯಲ್ಲಿ ನಡೆಯುತ್ತಿದ್ದ ಕೋಮು ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿದ್ದ.

ಬಿಜೆಪಿ ಮತ್ತು ಆರ್​ಎಸ್​ಎಸ್​ಗಳು ದೆಹಲಿಯಲ್ಲಿ ಗೋದ್ರಾ ಘಟನೆಯನ್ನು ಮತ್ತೊಮ್ಮೆ ನಡೆಸಲು ಪ್ರಯತ್ನಿಸುತ್ತಿವೆ. ರಸ್ತೆಯ ಮೇಲೆ ಹೋಗುವ ಜನರ ಬಳಿ ಐಡಿ ಕೇಳಿ, ಅವರು ಮುಸ್ಲಿಮರೋ, ಹಿಂದುಗಳೋ ಎಂದು ಚೆಕ್ ಮಾಡಲಾಗುತ್ತಿದೆ. ಅವರೇನಾದರೂ ಮುಸ್ಲಿಮರಾಗಿದ್ದಾರೆ ನಿರ್ದಯವಾಗಿ ಅವರಿಗೆ ಹೊಡೆಯಲಾಗುತ್ತಿದೆ. ಗಲಾಟೆ ನಡೆಯುತ್ತಿರುವ ಪ್ರದೇಶಗಳಲ್ಲಿನ ಹಿಂದು ಜನಾಂಗದ ಮನೆಗಳ ಬಳಿ ಕೇಸರಿ ಬಾವುಟಗಳನ್ನು ಇಟ್ಟು ಗುರುತಿಸಲಾಗಿದೆ. ಹಾಗೇ ಮುಸ್ಲಿಮರ ಮನೆಗಳು, ಮಸೀದಿಗಳ ಮೇಲೆ ಪೆಟ್ರೋಲ್​ ಬಾಂಬ್​ ಹಾಕಲಾಗುತ್ತಿದೆ. ಹೀಗೆ ಮುಸ್ಲಿಂ ಮನೆಗಳು, ಮಸೀದಿಗಳು ಬೆಂಕಿಯಲ್ಲಿ ಬೇಯುತ್ತಿದ್ದರೆ, ಕೇಸರಿ ಬಾವುಟ ಹಿಡಿದ ಉಗ್ರರು ಜೈ ಶ್ರೀರಾಮ್​ ಎಂದು ಕೇಕೆ ಹಾಕುತ್ತಾರೆ ಎಂದು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದರು. ಅಲ್ಲದೆ, ಕೊನೆಯಲ್ಲಿ ಸನಾತನ ಧರ್ಮವನ್ನು ತೀರ ಅವಹೇಳನ ಮಾಡಿದ್ದರು.

ಅಷ್ಟೇ ಅಲ್ಲ, ನಾವು ಒಬ್ಬ ಸಾಮೂಹಿಕ ಕೊಲೆಗಾರನನ್ನು ಎರಡು ಬಾರಿ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದೇವೆ. ಈಗ ಅದರ ಪ್ರತಿಫಲ ಪಡೆಯುತ್ತಿದ್ದೇವೆ ಎಂದು ಬರೆದಿದ್ದರು. ಫೇಸ್​ಬುಕ್​ನಲ್ಲಿ ಪೋಸ್ಟ್​ ಹಾಕುತ್ತಿದ್ದಂತೆ ತೀವ್ರ ವಿವಾದ ಸೃಷ್ಟಿಯಾಗಿತ್ತು. ಅವರು ಪಾಠ ಮಾಡುತ್ತಿದ್ದ ಕಾಲೇಜಿನ ವಿದ್ಯಾರ್ಥಿಗಳೇ ತಿರುಗುಬಿದ್ದಿದ್ದರು. ಹಿಂದು ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಸಿಲ್ಚಾರ್ ಸಾದರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಉಪನ್ಯಾಸಕನ ವಿರುದ್ಧ ಎಬಿವಿಪಿ, ಆರ್​ಎಸ್​ಎಸ್ ಸಂಘಟನೆಗೆ ಸೇರಿದ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದ್ದವು. ಸೌರದೀಪ್​ರ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಸೋಮವಾರ (ಮಾರ್ಚ್​ 2)ಕ್ಕೆ ಮುಂದೂಡಿದೆ. ನಾಳಿನವರೆಗೂ ಆತ ಜೈಲಿನಲ್ಲಿಯೇ ಇರಬೇಕಾಗಿದೆ. (ಏಜೆನ್ಸೀಸ್​)